ನಂಜನಗೂಡು: ತಾಲೂಕಿನ ಹುರಾ ಬಳಿಯ ಕಡಜೆಟ್ಟಿ ಗ್ರಾಮದ ಸರ್ವೆ ನಂ 230 ರಲ್ಲಿ ಕಬ್ಬು ಕಟಾವು ಮಾಡುತ್ತಿದ್ದಾಗ ಎರಡು ಚಿರತೆಯ ಮರಿಗಳು ಕಾಣಿಸಿವೆ. ಎಂದಿನಂತೆ ಸೋಮವಾರವೂ ಕಬ್ಬು ಕಟಾವು ಮುಂದುವರಿಸಿದ ಕಾರ್ಮಿಕರ ಕಣ್ಣಿಗೆ, ಚಿರತೆ ಮರಿಗಳು ಕಾಣಿಸಿದವು. ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದಾಗ, ಸುತ್ತಮುತ್ತಲಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರೂ ಓಡೋಡಿ ಬಂದರು.
ತಕ್ಷಣ ಅರಣ್ಯಾಧಿಕಾರಿಗಳಿಗೆ ವಿಷಯ ತಿಳಿಸಿದ್ದು ಆರ್‌ಎಫ್ಒ ಕಿರಣ್‌ಕುಮಾರ್ ಅರಣ್ಯ ರಕ್ಷಕ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿ ಮನವೊಲಿಸಿದರು. ಆದಷ್ಟು ಬೇಗ ಬೋನು ತರಿಸಿ ಚಿರತೆ ಸೆರೆ ಹಿಡಿಯಲು ಸ್ಥಳೀಯರು ಒತ್ತಾಯಿಸಿದರು.
ಇನ್ನು ಕಬ್ಬು ಕಟಾವು ವೇಳೆ ಕಾರ್ಮಿಕರ ಮೇಲೆ ದಾಳಿ ಮಾಡಿದರೆ, ರೈತರು ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಜಮೀನಿನ ಮಾಲಿಕ ಕೃಷಿಕ ನಿತಿನ್ ಹೇಳಿದರು. ಸ್ಥಳೀಯರ ಮನವೊಲಿಸಿದ ಆರ್ ಎಫ್ಒ ಕಿರಣ್‌ಕುಮಾರ್, ಸ್ಥಳದಲ್ಲೇ ಚಿರತೆ ಮರಿಗಳನ್ನು ಬಿಟ್ಟರೆ ತಾಯಿ ಚಿರತೆ ರಾತ್ರಿ ಆಗಮಿಸಿ ಹೊತ್ತೂಯ್ಯಲಿದೆ ಎಂದು ತಿಳಿಸಿದರು.
ತಾಯಿ ಚಿರತೆಗಾಗಿ ಬೋನು ತರಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಆ ಪುಟ್ಟ ಜೀವಗಳನ್ನು ಕಾಪಾಡುವುದರೊಂದಿಗೆ ಜನತೆಯ ಆತಂಕವನ್ನೂ ದೂರ ಮಾಡುವ ಜವಾಬ್ದಾರಿ ನಮ್ಮದು. ಆ ಕುರಿತು ತಾವು ಕ್ರಮ ಜರುಗಿಸುತ್ತೇವೆ.
●ಕಿರಣ್‌ಕುಮಾರ್, ಆರ್‌ಎಫ್ಒ