ಬೈಂದೂರು: ಕೊಡೇರಿ ಕಿರುಬಂದರಿನಲ್ಲಿ ಮೀನು ಹರಾಜು ಪ್ರಕ್ರಿಯೆಯ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ ಎಂದು ವರದಿಯಾಗಿದೆ.
ನಾಡದೋಣಿ ಮೀನುಗಾರರ ಸಂಘ ಹಾಗೂ ಕಿರಿಮಂಜೇಶ್ವರ ಕೊಡೇರಿ ತಂಡಗಳ ನಡುವೆ ಈ ಗಲಾಟೆ ನಡೆದಿದ್ದು, ಮೀನುಗಾರಿಕೆ ಇಲಾಖೆ ‘ಮೀನು ಹರಾಜು ಪ್ರಕ್ರಿಯೆ’ಗೆ ಅನುಮತಿ ನೀಡಿರುವುದು ಈ ವಾಗ್ವಾದಕ್ಕೆ ಕಾರಣ ಎನ್ನಲಾಗಿದೆ.
ಕೊಡೇರಿ ಕಿರು ಬಂದರಿನಲ್ಲಿ ಮೀನುಗಾರಿಕೆ ಮತ್ತು ಬಂದರು ಇಲಾಖೆಯ ಅವೈಜ್ಞಾನಿಕ ಮತ್ತು ಅಸಮರ್ಪಕ ಕಾಮಗಾರಿಯಿಂದ ಕಿರಿಮಂಜೇಶ್ವರ ಗ್ರಾಮದ ಜನತೆಗೆ ಅನ್ಯಾಯವಾಗುತ್ತಿದೆಯೆಂದು ಮೀನುಗಾರರು ಮತ್ತು ಊರಿನ ನಾಗರೀಕರು ಈ ಹಿಂದೆ ಪ್ರತಿಭಟನೆ ನಡೆಸಿದ್ದರು.
ಮೀನು ಹರಾಜು ಪ್ರಾಂಗಣವನ್ನು ಕೊಡೇರಿ ಪಶ್ಚಿಮ ಭಾಗದ ಕಿರಿದಾದ ಸಮುದ್ರದ ದಂಡೆಯ ಮೇಲೆ ನಿರ್ಮಾಣ ಮಾಡಿರುವುದು ಸಂಪೂರ್ಣ ಅವೈಜ್ಞಾನಿಕವಾಗಿದೆ. ಅಲ್ಲದೇ, ಈ ಭಾಗದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾಮಗಾರಿ ನಡೆಸಿದರೂ ಒಂದಲ್ಲ ಒಂದು ರೀತಿಯ ಸಮಸ್ಯೆ ಎದುರಾಗುತ್ತದೆ. ಮೀನು ಹರಾಜು ಪ್ರಾಂಗಣದಲ್ಲಿ ಯಾವುದೇ ಮೂಲಸೌಕರ್ಯ ಇಲ್ಲ. ಕೊಡೇರಿಯ ಮೀನುಗಾರರು ಹೋಗಲು ಸೇತುವೆಯೂ ಇಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಅವೈಜ್ಞಾನಿಕ ಧೋರಣೆಯಿಂದ ಕೊಡೇರಿ ಮೀನುಗಾರರು ಸಮಸ್ಯೆ ಎದುರಿಸುವಂತಾಗಿದೆ. ಯಾವುದೇ ಮೂಲಸೌಕರ್ಯ ಇಲ್ಲದೇ ಈ ಪ್ರಾಂಗಣದಲ್ಲಿ ಮೀನು ಹರಾಜಿಗೆ ಅವಕಾಶ ನೀಡಬಾರದು ಎಂದು ಮೀನುಗಾರರು ಆಗ್ರಹಿಸಿದ್ದರು.
ಇದನ್ನೂ ಓದಿ: ನಟ ವಿಜಯ್ V/S ತಂದೆ: ಮಗನ ಹೆಸರಿನಲ್ಲಿ ರಾಜಕೀಯ ಪಕ್ಷದ ಹೆಸರು ನೋಂದಣಿ, ಏನಿದು ಜಟಾಪಟಿ?
ಜಟ್ಟಿ ಭಾಗದಲ್ಲಿ ಡ್ರಜ್ಜಿಂಗ್ ಮಾಡುವುದರಿಂದ ಕೊಡೇರಿಯ ನಿವಾಸಿಗಳಿಗೆ ಇನ್ನಷ್ಟು ಸಮಸ್ಯೆಯಾಗಲಿದೆ. ಈಗಾಗಲೇ ಕುಡಿಯುವ ನೀರಿನ ಅಭಾವವಿದೆ, ಮುಂದೇ ಬಾವಿ ನೀರು ಸಂಪೂರ್ಣ ಉಪ್ಪಾಗಿ ನಿತ್ಯೋಪಯೋಗಕ್ಕೇ ನೀರಿನ ಸಮಸ್ಯೆ ಎದುರಾಗುವ ಆತಂಕ ನಿರ್ಮಾಣವಾಗಿದೆ. ಹಾಗೆಯೇ ಪಶ್ಚಿಮ ದಂಡೆಯು ಕುಸಿತ ಗೊಂಡಿರುವುದರಿಂದ ನೀರಿನ ರಭಸಕ್ಕೆ ಇನ್ನಷ್ಟು ಹಾನಿಯಾಗುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಯಾವುದೇ ಕಾರಣಕ್ಕೂ ಮೀನು ಹರಾಜು ಪ್ರಾಂಗಣದಲ್ಲಿ ಅಭಿವೃದ್ಧಿ ಕಾಮಗಾರಿ ಮಾಡಬಾರದು ಮತ್ತು ಮೀನು ಹರಾಜಿಗೂ ಅವಕಾಶ ನೀಡಬಾರದು ಎಂದು ಅಧಿಕಾರಿಗಳನ್ನು ಒತ್ತಾಯಿಸಿದ್ದರು.
ಇದನ್ನೂ ಓದಿ: ಚೆಕ್ ಬೌನ್ಸ್ ಪ್ರಕರಣ: ಸಿದ್ದಾರ್ಥ್ ಹೆಗ್ಡೆ ಪತ್ನಿ ಮಾಳವಿಕಾಗೆ ಬಿಗ್ ರಿಲೀಫ್ ನೀಡಿದ ಕೋರ್ಟ್
ಈ ಕಾರಣದಿಂದ ಇಂದಿನ ಹರಾಜು ಪ್ರಕ್ರಿಯೆಯ ಸಂದರ್ಭದಲ್ಲಿ ಎರಡು ಬಣಗಳ ನಡುವೆ ಮಾರಾಮಾರಿ ನಡೆದಿದೆ ಎಂದು ವರದಿಯಾಗಿದೆ.
ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.