Advertisement

ಬರಗಾಲದಲ್ಲಿ ಕಾಂಗ್ರೆಸ್‌, ಬಿಜೆಪಿ ಮೆರವಣಿಗೆ ದೌರ್ಭಾಗ್ಯ: ದೇವೇಗೌಡ

10:58 AM Apr 10, 2017 | Team Udayavani |

ಹುಬ್ಬಳ್ಳಿ: ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸದ ರಾಜಕಾರಣಿಗಳ ದಂಡು ಉಪಚುನಾವಣೆಯಲ್ಲಿ ಗೆಲುವು ಸಾಧಿಸಲು ಮೆರವಣಿಗೆ ನಡೆಸಿದ್ದು ಜನರ ದೌರ್ಭಾಗ್ಯ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ವಿಷಾದಿಸಿದರು.

Advertisement

ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,   ಉಪಚುನಾವಣೆಯಲ್ಲಿ ನಮಗೆ ಖರ್ಚು ಮಾಡಲು ಹಣವಿಲ್ಲದಿದ್ದರಿಂದಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿಲ್ಲ ಎಂದು ಅಭಿಪ್ರಾಯಪಟ್ಟರು.

ನಾನು ಮುಖ್ಯಮಂತ್ರಿಯಾಗಿದ್ದಾಗ ಎದುರಾಗಿದ್ದ ಬರಗಾಲದಲ್ಲಿ ರೈತರಿಗೆ ರೈಲಿನಲ್ಲಿ ಮೇವು ತರಿಸಿ ಹಂಚಲಾಗಿತ್ತು. ಆದರೆ ಈಗ ಮೇವಿನ ಕೊರತೆಯಿಂದಾಗಿ ದನಕರುಗಳು ಸಾಯುತ್ತಿದ್ದರೂ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸ್ಪಂದಿಸುತ್ತಿಲ್ಲ. ರೈತರ ಸಾಲಮನ್ನಾ ಮಾಡಲು ಉಭಯ ಸರ್ಕಾರಗಳು ಪರಸ್ಪರ ದೋಷಾರೋಪಣೆಯಲ್ಲೇ ಕಾಲಹರಣ ಮಾಡುತ್ತಿವೆ ಎಂದರು. ಕುಮಾರಸ್ವಾಮಿಗೆ ಇಮೇಜ್‌ ಇದೆ. ಹಾಗಂತ ಮನೆಯಲ್ಲಿ ಕೂತರೆ ಅಧಿಕಾರಕ್ಕೆ ಬರುವುದು ಸಾಧ್ಯವಿಲ್ಲ.  

ಕುಮಾರಸ್ವಾಮಿಯ ಇಮೇಜ್‌ ಬಳಕೆ ಮಾಡಿಕೊಳ್ಳಬೇಕು. ಪ್ರಾದೇಶಿಕ ಪಕ್ಷಗಳಿಂದ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ ಎಂಬುದು ರಾಜ್ಯದ ಜನರಿಗೆ ಮನವರಿಕೆಯಾಗುತ್ತಿದೆ. ಮಂಡ್ಯದಲ್ಲಿ ಶಿವರಾಮೇಗೌಡ ಹಾಗೂ ಸುರೇಶಗೌಡ ಜೆಡಿಎಸ್‌ಗೆ ಬರುತ್ತಿದ್ದಾರೆ. ಚುನಾವಣೆಯಲ್ಲಿ ಯಾರಿಗೆ ಟಿಕೆಟ್‌ ನೀಡಬೇಕೆಂದು ಈಗಲೇ ನಿರ್ಧರಿಸುವುದಿಲ್ಲ. ಪಕ್ಷದ ಮೇಲೆ ವಿಶ್ವಾಸವಿಟ್ಟು ಬರುವವರನ್ನು ಸ್ವಾಗತಿಸಲಾಗುವುದು ಎಂದು ತಿಳಿಸಿದರು.

ಬಸವರಾಜ ಹೊರಟ್ಟಿ ನೀಡಿದ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ, ಬೂತ್‌ ಮಟ್ಟದಲ್ಲಿ, ವಾರ್ಡ್‌ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಲಾಗುವುದು. ಏ.20ರಂದು ಬೆಂಗಳೂರಿನಲ್ಲಿ ನಡೆಯುವ ಪಕ್ಷದ ಕೋರ್‌ ಕಮಿಟಿ ಸಭೆಯಲ್ಲಿ ಪಕ್ಷ ಸಂಘಟನೆ ಕುರಿತು ಸಮಾಲೋಚನೆ ನಡೆಸಲಾಗುವುದು ಎಂದರು.

Advertisement

ಸುಲಭವಾಗಿ ಬಿಟ್ಟುಕೊಡುವ ಜಾಯಮಾನ ನನ್ನದಲ್ಲ. 85ರ ಹರೆಯದಲ್ಲೂ ರಾಜ್ಯಾದ್ಯಂತ ಸುತ್ತುತ್ತೇನೆ. ಅಧಿಕಾರದ ಲಾಲಸೆಯ ಪಕ್ಷ ನಮ್ಮದಲ್ಲ. ನೀರಾವರಿ ಯೋಜನೆಗಳ ಅನುಷ್ಠಾನ ಸೇರಿದಂತೆ ರಾಜ್ಯದ ಅಭಿವೃದ್ಧಿಗೆ ಪ್ರಾದೇಶಿಕ ಪಕ್ಷಗಳ ಆವಶ್ಯಕತೆ ಕುರಿತು ಜನರಿಗೆ ಮನವರಿಕೆ ಮಾಡಿಕೊಡುತ್ತೇನೆ
– ಎಚ್‌.ಡಿ. ದೇವೇಗೌಡ, ಜೆಡಿಎಸ್‌ ವರಿಷ್ಠ
 

Advertisement

Udayavani is now on Telegram. Click here to join our channel and stay updated with the latest news.

Next