ಮಸ್ಕಿ: ತಾಲೂಕಿನಾದ್ಯಂತ ಜೋರಾದ ಗಾಳಿ, ಮಳೆ ಅಬ್ಬರಕ್ಕೆ ಮನೆಗಳು ನೆಲಕ್ಕೆ ಉರುಳಿದ್ದು, 25ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿವೆ. ಇನ್ನು ಕೆಲವೆಡೆ ಮರಗಳು ನೆಲಕ್ಕುರಳಿವೆ.
ರಸ್ತೆ ಬದಿಯ ಬೃಹತ್ ಗಾತ್ರದ ಮರಗಳು ನೆಲಕ್ಕುರುಳಿದ್ದರಿಂದ ಸಂಚಾರ ಅಸ್ತವ್ಯಸ್ತಗೊಂಡು ಸವಾರರು ಹಾಗೂ ಪ್ರಯಾಣಿಕರು ಕೆಲಕಾಲ ಪರದಾಡಿದರು. ಕಳೆದ ಎರಡೂ¾ರು ದಿನಗಳಿಂದ ರಾತ್ರಿ ಬಿರುಗಾಳಿ-ಮಳೆ ಅರ್ಭಟಕ್ಕೆ ತಾಲೂಕಿನ ಅಂಕುಶದೊಡ್ಡಿ ಗ್ರಾಮ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಗಾತ್ರದ ಆಲದ ಮರ ರಸ್ತೆಗೆ ಉರುಳಿದ್ದರಿಂದ ಕಲಬುರಗಿ-ಬೆಂಗಳೂರು ರಸ್ತೆ ಕೆಲ ಗಂಟೆಗಳ ಕಾಲ ಸಂಪರ್ಕ ಕಡಿತಗೊಂಡು ಸವಾರರು ಹಾಗೂ ಪ್ರಯಾಣಿಕರು ರಾತ್ರಿ ವೇಳೆಯಲ್ಲಿ ಪರದಾಡಿದ್ದಾರೆ.
ರಸ್ತೆ ಸಂಪರ್ಕ ಕಡಿತಗೊಂಡ ಸುದ್ದಿ ತಿಳಿದು ಸ್ಥಳೀಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಅಂಕುಶದೊಡ್ಡಿ ಗ್ರಾಮಸ್ಥರ ಜನರ ಸಹಕಾರದಿಂದ ರಸ್ತೆಗೆ ಉರುಳಿ ಬಿದ್ದಿದ್ದ ಮರ ತೆರವುಗೊಳಿಸಿದ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಕಾಟಗಲ್ ಗ್ರಾಮದಲ್ಲಿ ಗಾಳಿ, ಮಳೆ ಅರ್ಭಟಕ್ಕೆ ಮರಗಳು ಧರಗೆ ಉರುಳಿವೆ. ಮರದ ಕೆಳಗೆ ನಿಲ್ಲಿಸಿದ್ದ ಬೈಕ್ ಹಾನಿಯಾಗಿದೆ. ಕಾಟಗಲ್ ಗ್ರಾಮದ ಸರಕಾರಿ ಶಾಲೆ ಮೇಲೆ ಮರ ಉರುಳಿದ್ದರಿಂದ ಗೋಡೆ ಜಖಂಗೊಂಡಿದೆ. ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಒಂದು ಟಿಸಿ ಹಾಳಾಗಿದ್ದು, ಜನತಾ ಮನೆಯ ಶೀಟುಗಳು ಗಾಳಿಗೆ ಹಾರಿ ಹೋಗಿವೆ. ತಗ್ಗು ಪ್ರದೇಶ ಹೊಲಗಳು ಸಂಪೂರ್ಣ ಜಲಾವೃತಗೊಂಡಿವೆ. ಕೆಲವು ಕಡೆಗಳಲ್ಲಿ ಮಳೆ ನೀರಿನ ರಭಸಕ್ಕೆ ರಸ್ತೆಗಳು ಕೊಚ್ಚಿಕೊಂಡು ಹೋಗಿವೆ. ಬಾರಿ ಗಾಳಿ ಬಿಸುತ್ತಿರುವುದರಿಂದ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡ ಕಾರಣ ಜನರು ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ. ಕೆಲವೆಡೆ ಜೆಸ್ಕಾಂ ಸಿಬ್ಬಂದಿ ದುರಸ್ತಿ ಮಾಡಿದರು.
ಇನ್ನು ಮಳೆ-ಗಾಳಿಯಿಂದಾಗಿ 25 ಮನೆಗಳು ಬಿದ್ದಿದ್ದು, 25ಕ್ಕೂ ಹೆಚ್ಚು ಕುರಿಗಳು ಸಾವನಪ್ಪಿವೆ. ಹಾನಿಗೊಳಗಾದ ಕುಟುಂಬಸ್ಥರಿಗೆ ಪರಿಹಾರ ನೀಡುವ ಕೆಲಸ ಮಾಡಲಾಗುತ್ತಿದೆ. ಇನ್ನು ಮಳೆಹಾನಿ ಕುರಿತಾಗಿ ಸಮೀಕ್ಷೆಯೂ ನಡೆದಿದೆ ಎಂದು ತಹಶೀಲ್ದಾರ್ ಕವಿತಾ ಆರ್.ತಿಳಿಸಿದ್ದಾರೆ.