ಬೆಂಗಳೂರು: ಕೋಟಿ, ಲಕ್ಷಗಟ್ಟಲೇ ಅವ್ಯವಹಾರ ವಂಚನೆಗಳು ನಡೆದಾಗಲೂ ಪ್ರಕರಣ ದಾಖಲಾಗುವುದು ಕೆಲವೊಮ್ಮೆ ಕಷ್ಟ. ಆದರೆ, ಸರ್ಕಾರದ ಬೊಕ್ಕಸಕ್ಕೆ ಕೇವಲ 40 ರೂ. ನಷ್ಟ ಮಾಡಿದ ಇಬ್ಬರು ಸರ್ಕಾರಿ ಅಧಿಕಾರಿಗಳ ವಿರುದ್ಧ ಕೋರ್ಟ್ ಸೂಚನೆ ಮೇರೆಗೆ ಅಶೋಕನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಗರದ ಪೂರ್ವ ಉಪ ವಿಭಾಗದ ಅಂಚೆ ಕಚೇರಿ ಸಹಾಯಕ ಅಧೀಕ್ಷಕರಾಗಿರುವ ಲತಾ ಎಸ್. ಗೋಕಾವಿ ಎಂಬವರು, ಅದೇ ಕಚೇರಿಯಲ್ಲಿ ಪೋಸ್ಟ್‌ಸ್ಟಾಂಪ್ ವಿತರಣೆ ಮಾಡುತ್ತಿದ್ದ ಎ.ಜಿ.ಅಭಿಜಿತ್ ಹಾಗೂ ಎಸ್.ಎನ್. ವಾದಿರಾಜ್ ಎಂಬವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
2018ರ ಅ.13ರಂದು ಆರೋಪಿಗಳಾದ ಅಭಿಜಿತ್ ಹಾಗೂ ವಾದಿರಾಜ್ ನಕಲಿ ಪೋಸ್ಟ್‌ಸ್ಟಾಂಪ್‌ಗ್ಳನ್ನು ವಿತರಣೆ ಮಾಡಿದ್ದರು. ಈ ವಿಚಾರ ಕೆಲ ಸಮಯದ ಬಳಿಕ ಲತಾ ಅವರ ಗಮನಕ್ಕೆ ಬಂದಿದೆ. ಈ ಬಗ್ಗೆ ಕಚೇರಿಯಲ್ಲೇ ಆತಂರಿಕ ತನಿಖೆ ನಡೆಸಿದಾಗ ಆರೋಪಿಗಳ ಅವ್ಯವಹಾರ ಬಯಲಾಗಿದ್ದು, ಸರ್ಕಾರದ ಬೊಕ್ಕಸಕ್ಕೆ 40 ರೂ. ನಷ್ಟ ಆಗಿರುವುದು ಕಂಡು ಬಂದಿದೆ. ಈ ಬಗ್ಗೆ ಲತಾ ಅವರು ನ್ಯಾಯಾಲಯಕ್ಕೆ ದೂರು ನೀಡಿದ್ದರು. ನ್ಯಾಯಾಲಯದ ಸೂಚನೆ ಮೇರೆಗೆ ಅಶೋಕನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement
ಈ ಮೂಲಕ ನಗರದಲ್ಲಿ ನಕಲಿ ಅಂಚೆಚೀಟಿ ಪ್ರಕರಣ ಬಯಲಾಗಿದ್ದು, ಅಂಚೆ ಕಚೇರಿಯಲ್ಲೇ ನಕಲಿ ಪೋಸ್ಟ್ ಸ್ಟಾಂಪ್‌ಗ್ಳು ಹೇಗೆ ಬಂದವು? ಈ ದಂಧೆಯ ಹಿಂದಿನ ರೂವಾರಿಗಳು ಯಾರೆಂಬುದು ಪೊಲೀಸರಿಗೆ ತಲೆನೋವಾ ಗಿದೆ. ಅಲ್ಲದೆ, ನಗರದ ಇತರೆ ಅಂಚೆ ಕಚೇರಿಯಲ್ಲೂ ಈ ನಕಲಿ ಸ್ಟಾಂಪ್‌ಗ್ಳ ಮಾರಾಟ ಆಗುತ್ತಿವೆಯೇ? ಎಂಬ ಬಗ್ಗೆ ತನಿಖೆ ಕೈಗೊಂಡಿರುವ ಪೊಲೀಸರು, ನಕಲಿ ಸ್ಟಾಂಪ್‌ಗ್ಳ ಮುದ್ರಣ ನಗರದಲ್ಲೇ ನಡೆಯುತ್ತಿದೆಯೇ? ಅಥವಾ ನೆರೆ ರಾಜ್ಯ ಅಥವಾ ಜಿಲ್ಲೆಗಳಲ್ಲಿ ಮುದ್ರಣ ಮಾಡಲಾಗುತ್ತಿ ದೆಯೇ ಎಂಬ ಕುರಿತು ತನಿಖೆ ನಡೆಸುತ್ತಿದ್ದಾರೆ.