ದೇವದುರ್ಗ: ಪಟ್ಟಣ ವ್ಯಾಪ್ತಿಯಲ್ಲಿ 500 ರೂ. ಮೊತ್ತದ ನಕಲಿ ನೋಟುಗಳ ಚಲಾವಣೆ ಮತ್ತು ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆ ತೀವ್ರಗೊಂಡಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ತಾಲೂಕಿನಲ್ಲಿ ಈ ಹಿಂದೆ 50 ಮತ್ತು 100 ರೂ. ಮೊತ್ತದ ನಕಲಿ ನೋಟುಗಳು ಪತ್ತೆಯಾಗಿದ್ದವು. ಬ್ಯಾಂಕ್‌ಗಳಲ್ಲಿ ಪತ್ತೆಯಾಗುತ್ತಿದ್ದಂತೆ ತಾತ್ಕಾಲಿಕವಾಗಿ ಚಲಾವಣೆ ಸ್ಥಗಿತಗೊಂಡಿದ್ದವು. ಆದರೆ ಇದೀಗ ವಿಧಾನಸಭಾ ಚುನಾವಣೆ ಪ್ರಕ್ರಿಯೆ ಭರದಿಂದ ಸಾಗಿದ್ದರಿಂದ ಕೆಲವರು ಇದನ್ನೇ ಬಂಡವಾಳವಾಗಿಸಿಕೊಂಡು ನಕಲಿ ನೋಟು ಚಲಾವಣೆ ಮಾಡುತ್ತಿದ್ದಾರೆ. ಚಲಾವಣೆ ಸಂದರ್ಭದಲ್ಲಿ ನಕಲಿ ಎಂದು ಗುರುತು ಸಿಕ್ಕ ಕೂಡಲೇ ಕೆಲ ವ್ಯಾಪಾರಿಗಳು ಮರಳಿ ಕೊಟ್ಟ ಘಟನೆಗಳು ಬೆಳಕಿಗೆ ಬಂದಿವೆ. ನಕಲಿ ನೋಟುಗಳನ್ನು ಹೆಚ್ಚಾಗಿ ಮದ್ಯದ ಅಂಗಡಿ, ಪಾನಶಾಪ್, ಕಿರಾಣಿ ಅಂಗಡಿಗಳಲ್ಲಿ ಮಾತ್ರ ಚಲಾವಣೆ ಮಾಡಲಾಗುತ್ತಿದೆ. ಒಂದೊಂದು ಮದ್ಯದ ಅಂಗಡಿಯಲ್ಲಿ ನಿತ್ಯ 5-6 ನೋಟುಗಳು ಪತ್ತೆಯಾಗುತ್ತಿವೆ.
ಅಂಗಡಿಯಲ್ಲಿ ಗದ್ದಲ ಇದ್ದಾಗ ನಕಲಿ ನೋಟುಗಳನ್ನು ತಂಡವೊಂದು ಚಲಾವಣೆ ಮಾಡುತ್ತಿದೆ. ಅನ್ಯ ರಾಜ್ಯದ ವ್ಯಾಪಾರಿಯೊಬ್ಬರು ಇಂಥ ನಕಲಿ ನೋಟುಗಳನ್ನು ಚಲಾವಣೆಗೆ ಯತ್ನಿಸುತ್ತಿದ್ದು, ಅನೇಕ ಯುವಕರು ಇಂಥ ಪ್ರಯತ್ನದಲ್ಲಿ ಶಾಮೀಲಾಗಿದ್ದಾರೆ ಎನ್ನಲಾಗಿದೆ. ನಕಲಿ ನೋಟು ಪತ್ತೆಯಾದ ಕೂಡಲೇ ವ್ಯಾಪಾರಸ್ಥರು ಪ್ರಕರಣ ದಾಖಲಿಸಬೇಕು ಮತ್ತು ಇಂಥ ಪ್ರಯತ್ನ ನಡೆಸುತ್ತಿರುವ ತಂಡವನ್ನು ಪೊಲೀಸರು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕ್ರಿಕೆಟ್ ಬೆಟ್ಟಿಂಗ್: ಐಪಿಎಲ್ ಕ್ರಿಕೆಟ್ ಪ್ರಾರಂಭವಾದ ಮೊದಲ ದಿನವೇ ಪಟ್ಟಣದಲ್ಲಿ ಭಾರಿ ಪ್ರಮಾಣದ ಬೆಟ್ಟಿಂಗ್ ದಂಧೆ ನಡೆದಿರುವುದು ಬೆಳಕಿಗೆ ಬಂದಿದೆ. ಪ್ರತಿ ರನ್, ವಿಕೆಟ್, ಅರ್ಧ ಶತಕ, ಶತಕ ಹೀಗೆ ಪ್ರತಿಯೊಂದು ಹಂತಕ್ಕೂ ಕೂಡ ಬೆಟ್ಟಿಂಗ್ ಕಟ್ಟಲಾಗುತ್ತಿದೆ. ಕೇವಲ ಮೆಸೇಜ್, ವಾಟ್ಸ್‌ಆ್ಯಪ್ ಸಂದೇಶಗಳ ಮೂಲಕ ಬೆಟ್ಟಿಂಗ್ ದಂಧೆ ತೀವ್ರಗೊಂಡಿದೆ ಎಂದು ಕರವೇ ತಾಲೂಕು ಅಧ್ಯಕ್ಷ ಬಸವರಾಜ ಗೋಪಾಳಪುರು ಆರೋಪಿಸಿದ್ದಾರೆ ನಕಲಿ ನೋಟಗಳ ಚಲಾವಣೆ ಬಗ್ಗೆ ಇಲ್ಲಿವರೆಗೆ ಯಾವುದೇ ದೂರುಗಳು ಬಂದಿಲ್ಲ. ಪ್ರಮುಖ ವ್ಯಾಪ್ಯಾರಿಗಳ ಕರೆದು ಸಭೆ ಮಾಡುತ್ತೇನೆ. ಇಂಥ ಪ್ರಕರಣಗಳ ಬಗೆ ತೀವ್ರ ನಿಗಾವಹಿಸಲಾಗುತ್ತದೆ.
ಹೊಸಕೇರಪ್ಪ, ಪಿಎಸ್‌ಐ ದೇವದುರ್ಗ