ಬೆಂಗಳೂರು: ‘ಭೀಮ'(Bheema) ಚಿತ್ರದ ಯಶಸ್ಸಿನ ಬೆನ್ನಲ್ಲೇ ದುನಿಯಾ ವಿಜಯ್(Duniya Vijay) ಅವರು ಮತ್ತೊಂದು ಚಿತ್ರದ ಪೋಸ್ಟರ್ ಹಂಚಿಕೊಂಡು ಅಭಿಮಾನಿಗಳಿಗೆ ಖುಷಿ ನೀಡಿದ್ದಾರೆ.
ಕೃಷ್ಣ ಜನ್ಮಾಷ್ಟಮಿಯ ದಿನ ಸೋಮವಾರ(ಆ 26) ರಂದು ವಿಜಯ್ ಅವರು ಪೋಸ್ಟರ್ ಅನ್ನು ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.ಚಿತ್ರಕ್ಕೆ ವಿಕೆ30(VK30) ಎಂದು ಟೈಟಲ್ ನೀಡಲಾಗಿದ್ದು, ವೆಟ್ರಿ ವೆಲ್ (ತಂಬಿ) ನಿರ್ದೇಶನ ಮಾಡಲಿದ್ದಾರೆ.ಸಲಗ ಮತ್ತು ಭೀಮ ಚಿತ್ರದ ಗ್ಯಾಂಗ್ ಚಿತ್ರದಲ್ಲಿದೆ ಎನ್ನುವುದನ್ನು ಟೈಟಲ್ ಗೆ ಮುನ್ನ ಬರೆಯಲಾಗಿದೆ.
ಕೆಂಪು ಟೋಪಿ ಧರಿಸಿ ಮಾಸ್ ಲುಕ್ ನಲ್ಲಿರುವ ದುನಿಯಾ ವಿಜಿ ಅವರ ಹೆಗಲ ಮೇಲೆ ಉಡವೊಂದು ಕುಳಿತಿದ್ದು, ಭರ್ಜರಿ ಲುಕ್ ನ ಪೋಸ್ಟರ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಕೆಲವರು ಇದು ಸಲಗ 2 ಚಿತ್ರವೇ ಎಂದು ಪ್ರಶ್ನೆ ಮಾಡಿದ್ದಾರೆ.
ಕೃಷ್ಣ ಕ್ರಿಯೇಷನ್ಸ್ ಮತ್ತು ಜಗದೀಶ್ ಫಿಲಂಸ್ ನಿರ್ಮಾಣ ಮಾಡಿದ ವಿಜಯ್ ಅವರೇ ನಿರ್ದೇಶಿಸಿದ ಥ್ರಿಲ್ಲರ್/ಆಕ್ಷನ್ ಚಿತ್ರ ‘ಭೀಮ’ದಲ್ಲಿ ದುನಿಯಾ ವಿಜಯ್ ಜತೆಗೆ ಅಶ್ವಿನಿ, ಬ್ಲಾಕ್ ಡ್ರ್ಯಾಗನ್ ಮಂಜು, ಚಂದ್ರು, ರಂಗಾಯಣ ರಘು, ಅಚ್ಯುತ್ ಕುಮಾರ್, ಗೋಪಾಲ್ ಕೃಷ್ಣ ದೇಶಪಾಂಡೆ ಮತ್ತು ರಮೇಶ್ ಇಂದಿರಾ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಸ್ಯಾಂಡಲ್ ವುಡ್ ನ ಈ ಬಾರಿಯ ಯಶಸ್ಸು ಕಂಡು ಸುದ್ದಿ ಮಾಡಿದ ಚಿತ್ರದಲ್ಲಿ ಭೀಮ ಒಂದಾಗಿದೆ.
2021, ಅಕ್ಟೋಬರ್ 14 ರಂದು ಬಿಡುಗಡೆಯಾಗಿ ಯಶಸ್ಸು ಕಂಡಿದ್ದಆಕ್ಷನ್ ಥ್ರಿಲ್ಲರ್ ‘ಸಲಗ’ ಚಿತ್ರ ದುನಿಯಾ ವಿಜಯ್ ಅವರ ನಿರ್ದೇಶನದ ಚೊಚ್ಚಲ ಚಿತ್ರವಾಗಿತ್ತು. ಕೆ.ಪಿ.ಶ್ರೀಕಾಂತ್ ನಿರ್ಮಿಸಿದ್ದರು. ದುನಿಯಾ ವಿಜಯ್ ಜತೆಗೆ ಸಂಜನಾ ಆನಂದ್, ಡಾಲಿ ಧನಂಜಯ್ ಮತ್ತು ನಾಗಭೂಷಣ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.