Advertisement

ಡಂಪಿಂಗ್‌ ಯಾರ್ಡ್‌ ಆದ ಸೇತುವೆ!

06:40 AM Mar 22, 2019 | Team Udayavani |

ಬೆಂಗಳೂರು: ಮೇಲ್ಸೇತುವೆ ಏರುತ್ತಲೇ ಮೂಗಿಗೆ ಬಡಿಯುವ ದುರ್ವಾಸನೆ, ರಸ್ತೆಯಲ್ಲಿರುವ ತ್ಯಾಜ್ಯ ವಿಂಗಡಿಸುವ ಕಾರ್ಯದಲ್ಲಿ ತೊಡಗಿರುವ ಪೌರಕಾರ್ಮಿಕರು, ತೀವ್ರ ಸಂಚಾರ ದಟ್ಟಣೆಗೆ ಕಾರಣವಾಗಿರುವ ತ್ಯಾಜ್ಯ ವಿಲೇವಾರಿ ಕಾಂಪ್ಯಾಕ್ಟರ್‌ ಹಾಗೂ ಆಟೋಗಳು. ಜಗಜೀವನರಾಮ್‌ನಗರದಿಂದ ವಿಜಯನಗರ ಸಂಪರ್ಕಿಸುವ ಹೊಸಹಳ್ಳಿ ಮುಖ್ಯರಸ್ತೆಯ ಮಧ್ಯೆ ಬರುವ ರೈಲ್ವೆ ಮೇಲ್ಸೇತುವೆ ರಸ್ತೆಯಲ್ಲಿ ನಿತ್ಯ ಕಂಡುಬರುತ್ತಿರುವ ದೃಶ್ಯಗಳಿವು.

Advertisement

ಮನೆಗಳಿಂದ ಸಂಗ್ರಹವಾದ ತ್ಯಾಜ್ಯವನ್ನು ನೆಲದ ಮೇಲೆ ಬೀಳದ ರೀತಿಯಲ್ಲಿ ವಿಲೇವಾರಿ ಮಾಡುವ ಉದ್ದೇಶವನ್ನು ಬಿಬಿಎಂಪಿ ಹೊಂದಿದೆ. ಆದರೆ, ಜಗಜೀವನರಾಮ್‌ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮನೆ ಮನೆಯಿಂದ ಸಂಗ್ರಹಿಸುವ ತ್ಯಾಜ್ಯವನ್ನು ಗುತ್ತಿಗೆದಾರರು ಮೇಲ್ಸೇತುವೆಯ ಒಂದು ಬದಿಯಲ್ಲಿ ಸುರಿಯುತ್ತಿದ್ದು, ನಂತರದಲ್ಲಿ ತ್ಯಾಜ್ಯ ವಿಂಗಡಿಸುತ್ತಿರುವುದು ಸಾರ್ವಜನಿಕರಿಗೆ ಸಮಸ್ಯೆಯಾಗಿ ಪರಿಗಣಮಿಸಿದೆ. 

ಮೇಲ್ಸೇತುವೆ ಸಮೀಪವಿರುವ ಖಾಲಿ ಜಾಗದಲ್ಲಿ ಪಾಲಿಕೆಯಿಂದ ಒಣ ತ್ಯಾಜ್ಯ ಘಟಕ ನಿರ್ಮಿಸಿದ್ದರೂ, ಗುತ್ತಿಗೆದಾರರು ಮಾತ್ರ ಮೇಲ್ಸೇತುವೆಯಲ್ಲಿ ತ್ಯಾಜ್ಯ ಸುರಿದ ವಿಂಗಡಿಸುತ್ತಿದ್ದಾರೆ. ಇದರಿಂದಾಗಿ ತ್ಯಾಜ್ಯದ ಲಿಚೆಟ್‌ ನೀರು ರಸ್ತೆಯಲ್ಲಿಯೇ ಉಳಿಯುತ್ತಿದೆ. ಜತೆಗೆ ಸಮರ್ಪಕವಾಗಿ ತ್ಯಾಜ್ಯವನ್ನು ವಿಲೇವಾರಿ ಮಾಡದ ಹಿನ್ನೆಲೆಯಲ್ಲಿ ವಾಹನ ಸವಾರರು ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. 

ಮತ್ತೊಂದೆಡೆ ರೈಲ್ವೆ ಮೇಲ್ಸೇತುವೆಯಿಂದ ತ್ಯಾಜ್ಯ ಕೆಳಗೆ ಎಸೆಯುವುದು ಹಾಗೂ ತ್ಯಾಜ್ಯ ಬೆಂಕಿ ಹಾಕುವಂತಹ ಪ್ರಕರಣಗಳು ಆಗಾಗ ನಡೆಯುತ್ತಿದ್ದರೂ, ಅಧಿಕಾರಿಗಳು ಮಾತ್ರ ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಮುಂದಾಗಿಲ್ಲ. ಇದರಿಂದಾಗಿ ದುರ್ವಾಸನೆ ಹರಡಿರುವುದು ಒಂದೆಡೆಯಾದರೆ, ವಾಹನಗಳ ನಿಲುಗಡೆಯಿಂದ ಕೃತಕ ದಟ್ಟಣೆ ಸಮಸ್ಯೆ ಉಂಟಾಗುತ್ತಿರುವುದು ಸಾರ್ವಜನಿಕರನ್ನು ಕಾಡುತ್ತಿದೆ. 

ದಟ್ಟಣೆ ಹೆಚ್ಚಿಸುತ್ತಿರುವ ಕಾಂಪ್ಯಾಕ್ಟರ್‌ಗಳು: ತ್ಯಾಜ್ಯ ವಿಲೇವಾರಿಯಲ್ಲಿ ತೊಡಗುವ ಕಾಂಪ್ಯಾಕ್ಟರ್‌ ಹಾಗೂ ಆಟೋಗಳು ರೈಲ್ವೆ ಮೇಲ್ಸೇತುವೆಯ ಎಡಭಾಗದಲ್ಲಿ ನಿಲುಗಡೆ ಮಾಡುವುದರಿಂದ ವಾಹನಗಳು ಸರಾಗವಾಗಿ ಸಂಚರಿಸುವುದು ಕಷ್ಟವಾಗಿದೆ. ಇದರೊಂದಿಗೆ ಪೌರಕಾರ್ಮಿಕರು ರಸ್ತೆಯ ತುದಿಯಲ್ಲಿ ತ್ಯಾಜ್ಯ ವಿಂಗಡಣೆ ಕಾರ್ಯದಲ್ಲಿ ತೊಡಗುವುದರಿಂದ ವಾಹನ ಸಂಚಾರ ಗತಿ ಕಡಿಮೆಯಾಗುತ್ತಿದ್ದು, ಅಪಘಾತ ಸಂಭವಿಸುವ ಆತಂಕವೂ ಇದೆ. 

Advertisement

ಗುಜರಿ ವಾಹನಗಳಿಗೆ ನೆಲೆ!: ರೈಲ್ವೆ ಮೇಲ್ಸೇತುವೆಯಿಂದ ಸ್ವಲ್ಪ ಮುಂದೆ ಸಾಗಿದರೆ ರಾಜಕಾಲುವೆಗೆ ಅಡ್ಡವಾಗಿ ನಿರ್ಮಿಸಿರುವ ಮೇಲ್ಸೇತುವೆಯ ಮೇಲೆಯೂ ತ್ಯಾಜ್ಯ ವಿಲೇವಾರಿಗೆ ಬಳಸಿ ದುರಸ್ತಿಯಾಗಿರುವ ಆಟೋಗಳು, ತಳ್ಳುಗಾಡಿಗಳನ್ನು ನಿಲುಗಡೆ ಮಾಡಲಾಗಿದೆ. ಇದರೊಂದಿಗೆ ಮೇಲ್ಸೇತುವೆಯ ರಸ್ತೆಗಳ ಎರಡೂ ಬದಿಗಳಲ್ಲಿ ಖಾಸಗಿ ವಾಹನಗಳು ನಿಲುಗಡೆ ಮಾಡಿರುವುದು ದಟ್ಟಣೆ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತಿವೆ. 

ಸಾರ್ವಜನಿಕರ ಅಹವಾಲು: ಬೇಗೂರು ವಾರ್ಡ್‌ ವ್ಯಾಪ್ತಿಗೆ ಬರುವ ಯಲಚೇನಹಳ್ಳಿ ಮುಖ್ಯರಸ್ತೆಯಲ್ಲಿ ಕುಡಿಯುವ ನೀರು ಹಾಗೂ ಒಳಚರಂಡಿ ನೀರು ಪೈಪ್‌ ಅಳವಡಿಕೆಗಾಗಿ ರಸ್ತೆ ಅಗೆದು ಮೂರು ತಿಂಗಳು ಕಳೆದಿದೆ. ಕಾಮಗಾರಿ ಪೂರ್ಣಗೊಂಡರೂ ಕೇವಲ 50 ಮೀಟರ್‌ ಡಾಂಬರೀಕರಣ ಮಾಡಲಾಗಿದ್ದು, ಉಳಿದ ರಸ್ತೆಯನ್ನು ಹಾಗೆ ಬಿಡಲಾಗಿದೆ. ಪರಿಣಾಮ ರಸ್ತೆಯಲ್ಲಿ ತೀವ್ರ ಧೂಳಿನ ಸಮಸ್ಯೆ ಸೃಷ್ಟಿಯಾಗಿದ್ದು, ಕೂಡಲೇ ಸ್ಥಳೀಯ ಸಂಸ್ಥೆಗಳು ರಸ್ತೆಗೆ ಡಾಂಬರೀಕರಣ ಮಾಡಬೇಕು ಎಂದು ಸ್ಥಳೀಯರಾದ ಕಾರಂತ ಎಂಬುವರು ಒತ್ತಾಯಿಸಿದ್ದಾರೆ. 

ಮನೆಗಳಿಂದ ಸಂಗ್ರಹಿಸಿದ ತ್ಯಾಜ್ಯವನ್ನು ಲಾರಿಗಳಲ್ಲಿ ತಂದು ರೈಲ್ವೆ ಮೇಲ್ಸೇತುವೆಯ ರಸ್ತೆಯ ಮೇಲೆ ಸುರಿದು ವಿಂಗಡಿಸಲಾಗುತ್ತದೆ. ಈ ಕುರಿತು ಹಲವು ಬಾರಿ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಸಮೀಪದಲ್ಲಿಯೇ ತ್ಯಾಜ್ಯ ವಿಲೇವಾರಿಗೆ ಜಾಗವಿದ್ದರೂ ರಸ್ತೆಯಲ್ಲಿ ತ್ಯಾಜ್ಯ ವಿಂಗಡಿಸುತ್ತಿರುವುದರಿಂದ ತೀವ್ರ ದುರ್ವಾಸನೆಗೆ ಕಾರಣವಾಗಿದ್ದು, ಸಂಚಾರ ದಟ್ಟಣೆಯೂ ಉಂಟಾಗುತ್ತಿದೆ. 
-ಅಬ್ದುಲ್‌ ವಸೀಮ್‌, ಜೆಜೆನಗರ ನಿವಾಸಿ

* ವೆಂ.ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next