ಬೆಂಗಳೂರು: ಬುಧವಾರದಿಂದ ಬೆಂಗಳೂರಿನ ಎರಡು ತಾಣಗಳಲ್ಲಿ ಏಕಕಾಲಕ್ಕೆ ದುಲೀಪ್ ಟ್ರೋಫಿ ಸೆಮಿಫೈನಲ್ ಪಂದ್ಯಗಳು ಆರಂಭವಾಗಲಿವೆ. “ಎಂ. ಚಿನ್ನಸ್ವಾಮಿ ಸ್ಟೇಡಿಯಂ”ನಲ್ಲಿ ಆತಿಥೇಯ ದಕ್ಷಿಣ ವಲಯ ಮತ್ತು ಉತ್ತರ ವಲಯ, ಆಲೂರು ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ಪಶ್ಚಿಮ ವಲಯ ಮತ್ತು ಮಧ್ಯ ವಲಯ ಎದುರಾಗಲಿವೆ.
ಕಳೆದ ಸಲದ ಫೈನಲಿಸ್ಟ್‌ಗಳಾದ ದಕ್ಷಿಣ ವಲಯ ಮತ್ತು ಪಶ್ಚಿಮ ವಲಯ ತಂಡಗಳಿಗೆ ನೇರವಾಗಿ ಸೆಮಿಫೈನಲ್ ಟಿಕೆಟ್ ಲಭಿಸಿತ್ತು. ಉತ್ತರ ವಲಯ ಮತ್ತು ಮಧ್ಯ ವಲಯ ಕ್ವಾರ್ಟರ್ ಫೈನಲ್ ಪಂದ್ಯಗಳನ್ನು ಗೆದ್ದು ಬಂದಿವೆ.
ದಕ್ಷಿಣ ವಲಯವನ್ನು ಎದುರಿಸಲಿರುವ ಉತ್ತರ ವಲಯ ತಂಡ ಇದೇ ಮೊದಲ ಸಲ ಆಡಲಿಳಿದ ಈಶಾನ್ಯ ವಲಯಕ್ಕೆ 511 ರನ್ ಅಂತರದ ಭಾರೀ ಸೋಲುಣಿಸಿತ್ತು. ಆದರೆ ಪ್ರಬಲ ದಕ್ಷಿಣ ವಲಯದ ವಿರುದ್ಧ “ಉತ್ತರದ ಪೌರುಷ’ ನಡೆಯಲಿಕ್ಕಿಲ್ಲ. ಈಶಾನ್ಯ ವಲಯ ಅನನುಭವಿಗಳಿಂದಲೇ ತುಂಬಿರುವ ಕಾರಣ ಉತ್ತರ ವಲಯಕ್ಕೆ ಸವಾರಿ ಸಾಧ್ಯವಾಯಿತು.
ಟೀಮ್ ಇಂಡಿಯಾ ಪ್ರವೇಶದ ಹಿನ್ನೆಲೆಯಲ್ಲಿ ಕೆಲವು ಆಟಗಾರರ ಫಾರ್ಮ್ ಹಾಗೂ ಫಿಟ್‌ನೆಸ್ ಗಮನಿಸಲು ಈ ಪಂದ್ಯ ಮಹತ್ವದ್ದಾಗಿದೆ. ತಮಿಳುನಾಡಿನ 23 ವರ್ಷದ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಈ ಹಾದಿಯ ಪ್ರಮುಖ ಹೆಸರು. ಕಳೆದ ಐಪಿಎಲ್ ವೇಳೆ ಗಾಯಾಳಾಗಿ ಹೊರಬಿದ್ದ ವಾಷಿಂಗ್ಟನ್, ಈಗ ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲಿ ಆಡುತ್ತಿದ್ದಾರೆ. ಆದರೆ ಇದು 4 ದಿನದ ಪಂದ್ಯವಾದ್ದರಿಂದ 25 ಓವರ್ ಎಸೆಯುವುದು ಅಥವಾ ದಿನವಿಡೀ ನಿಂತು ಆಡುವುದು ಮುಖ್ಯವಾಗುತ್ತದೆ.
ಎಡಗೈ ಬ್ಯಾಟರ್ ಸಾಯಿ ಸುದರ್ಶನ್ ರೇಸ್‌ನಲ್ಲಿರುವ ಮತ್ತೋರ್ವ ಆಟಗಾರ. ಕಳೆದ ಐಪಿಎಲ್‌ನಲ್ಲಿ ಇವರು ಅಮೋಘ ಪ್ರದರ್ಶನ ನೀಡಿದ್ದರು.
ಉತ್ತರ ವಲಯವೂ ಸಾಕಷ್ಟು ಯುವ ಪ್ರತಿಭೆಗಳು ತುಂಬಿವೆ. ಧ್ರುವ ಶೋರಿ, ಜಯಂತ್ ಯಾದವ್, ಪ್ರಭ್‌ಸಿಮ್ರಾನ್ ಸಿಂಗ್, ದಿಲ್ಲಿಯ ಪೇಸ್ ಬೌಲಿಂಗ್ ಆಲ್‌ರೌಂಡರ್ ಹರ್ಷಿತ್ ರಾಣಾ ಇವರಲ್ಲಿ ಪ್ರಮುಖರು.
ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸಕ್ಕಾಗಿ ಭಾರತದ ಟಿ20 ತಂಡ ಇನ್ನಷ್ಟೇ ಪ್ರಕಟಗೊಳ್ಳಬೇಕಿದೆ. ಹೀಗಾಗಿ ರಾಷ್ಟ್ರೀಯ ಆಯ್ಕೆ ಸಮಿತಿಯ ಮೂವರು ಸದಸ್ಯರು ಬೆಂಗಳೂರಿಗೆ ಆಗಮಿಸಿದ್ದು, ಕ್ರಿಕೆಟಿಗರ ಸಾಧನೆಯನ್ನು ಸೂಕ್ಷ್ಮವಾಗಿ ಅವಲೋಕಿಸಲಿದ್ದಾರೆ.