Advertisement

Duleep Trophy ಕ್ರಿಕೆಟ್‌ : ಅಗರ್ವಾಲ್‌ ಬಳಗಕ್ಕೆ ಜಯ

12:11 AM Sep 16, 2024 | Team Udayavani |

ಅನಂತಪುರ: ದುಲೀಪ್‌ ಟ್ರೋಫಿ ಕ್ರಿಕೆಟ್‌ ಪಂದ್ಯಾವಳಿಯ ದ್ವಿತೀಯ ಸುತ್ತಿನ ಮುಖಾಮುಖೀ ಯಲ್ಲಿ ಮಾಯಾಂಕ್‌ ಅಗರ್ವಾಲ್‌ ನೇತೃತ್ವದ ಇಂಡಿಯಾ ಎ ತಂಡ 186 ರನ್ನುಗಳಿಂದ ಇಂಡಿಯಾ ಡಿ ತಂಡವನ್ನು ಮಣಿಸಿ ಗೆಲುವಿನ ಖಾತೆ ತೆರೆಯಿತು. ಇಂಡಿಯಾ ಬಿ ಮತ್ತು ಇಂಡಿಯಾ ಸಿ ನಡುವಿನ ಇನ್ನೊಂದು ಪಂದ್ಯ ಡ್ರಾಗೊಂಡಿತು.

Advertisement

ಗೆಲುವಿಗೆ 488 ರನ್ನುಗಳ ಕಠಿನ ಗುರಿ ಪಡೆದಿದ್ದ ಇಂಡಿಯಾ ಡಿ, ರವಿವಾರ ಬ್ಯಾಟಿಂಗ್‌ ಮುಂದುವರಿಸಿ 301ಕ್ಕೆ ಆಲೌಟ್‌ ಆಯಿತು. ಇದು ಶ್ರೇಯಸ್‌ ಅಯ್ಯರ್‌ ನಾಯಕತ್ವದ ಇಂಡಿಯಾ ಡಿ ತಂಡಕ್ಕೆ ಎದುರಾದ ಸತತ 2ನೇ ಸೋಲು. ಹೀಗಾಗಿ ಅದು ಪ್ರಶಸ್ತಿ ರೇಸ್‌ನಿಂದ ಹೊರಬಿದ್ದಿದೆ. ಇಂಡಿಯಾ ಎ ಮೊದಲ ಪಂದ್ಯದಲ್ಲಿ ಇಂಡಿಯಾ ಬಿ ವಿರುದ್ಧ 76 ರನ್ನುಗಳ ಸೋಲನುಭವಿಸಿತ್ತು. ಆಗ ಶುಭಮನ್‌ ಗಿಲ್‌ ಎ ತಂಡದ ನಾಯಕರಾಗಿದ್ದರು.

ಚೇಸಿಂಗ್‌ ವೇಳೆ ರಿಕಿ ಭುಯಿ ಶತಕವೊಂದನ್ನು ಬಾರಿಸಿ ಹೋರಾಟ ಸಂಘಟಿಸಿದರೂ ಪ್ರಯೋಜನವಾಗ ಲಿಲ್ಲ. 195 ಎಸೆತಗಳನ್ನು ಎದುರಿಸಿ ನಿಂತ ಅವರು 14 ಬೌಂಡರಿ, 3 ಸಿಕ್ಸರ್‌ ನೆರವಿನಿಂದ 111 ರನ್‌ ಹೊಡೆದರು. ಉಳಿದಂತೆ ನಾಯಕ ಶ್ರೇಯಸ್‌ ಅಯ್ಯರ್‌ 41, ಕೀಪರ್‌ ಸಂಜು ಸ್ಯಾಮ್ಸನ್‌ 40 ರನ್‌ ಮಾಡಿದರು.

ಇಂಡಿಯಾ ಎ ಬೌಲಿಂಗ್‌ ವಿಭಾಗದಲ್ಲಿ ಸ್ಪಿನ್ನರ್‌ಗಳಾದ ತನುಷ್‌ ಕೋಟ್ಯಾನ್‌ (73ಕ್ಕೆ 4) ಮತ್ತು ಶಮ್ಸ್‌ ಮುಲಾನಿ (117ಕ್ಕೆ 3) ಹೆಚ್ಚಿನ ಯಶಸ್ಸು ಸಾಧಿಸಿದರು. ಮೊದಲ ಇನ್ನಿಂಗ್ಸ್‌ ವೇಳೆ ಬ್ಯಾಟಿಂಗ್‌ನಲ್ಲೂ ಮಿಂಚಿದ್ದ ಮುಲಾನಿ (89) ಪಂದ್ಯಶ್ರೇಷ್ಠರೆನಿಸಿದರು.

ಅಭಿಮನ್ಯು ಅಜೇಯ 157
ಇನ್ನೊಂದು ಪಂದ್ಯದಲ್ಲಿ ಇಂಡಿಯಾ ಸಿ ವಿರುದ್ಧ ಮೊದಲ ಇನ್ನಿಂಗ್ಸ್‌ ಮುನ್ನಡೆ ಸಂಪಾದಿಸುವಲ್ಲಿ ಇಂಡಿಯಾ ಬಿ ವಿಫ‌ಲವಾಯಿತು. ಸಿ ತಂಡದ 525 ರನ್ನುಗಳ ಬೃಹತ್‌ ಮೊತ್ತಕ್ಕೆ ಉತ್ತರವಾಗಿ 332ಕ್ಕೆ ಆಲೌಟ್‌ ಆಯಿತು. ಆದರೆ ಇಂಡಿಯಾ ಬಿ ತಂಡದ ನಾಯಕ ಹಾಗೂ ಆರಂಭಕಾರ ಅಭಿಮನ್ಯು ಈಶ್ವರನ್‌ ಕೊನೆಯ ವರೆಗೂ ಕ್ರೀಸ್‌ ಆಕ್ರಮಿಸಿಕೊಂಡು 157 ರನ್‌ ಮಾಡಿ ಅಜೇಯರಾಗಿ ಉಳಿದರು (286 ಎಸೆತ, 14 ಬೌಂಡರಿ, 1 ಸಿಕ್ಸರ್‌). ಸಿ ತಂಡದ ಮಧ್ಯಮ ವೇಗಿ ಅಂಶುಲ್‌ ಕಾಂಬೋಜ್‌ ಘಾತಕ ದಾಳಿಯನ್ನು ಮುಂದುವರಿಸಿ 69ಕ್ಕೆ 8 ವಿಕೆಟ್‌ ಉಡಾಯಿಸಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

Advertisement

ಪಂದ್ಯಕ್ಕೆ ಡ್ರಾ ಮುದ್ರೆ ಬೀಳುವ ವೇಳೆ ಇಂಡಿಯಾ ಸಿ ದ್ವಿತೀಯ ಇನ್ನಿಂಗ್ಸ್‌ನಲ್ಲಿ 4ಕ್ಕೆ 128 ರನ್‌ ಗಳಿಸಿತ್ತು.
3ನೇ ಹಾಗೂ ಕೊನೆಯ ಸುತ್ತಿನ ಸ್ಪರ್ಧೆಗಳು ಸೆ. 19ರಂದು ಅನಂತಪುರದಲ್ಲೇ ಆರಂಭವಾಗಲಿವೆ.

Advertisement

Udayavani is now on Telegram. Click here to join our channel and stay updated with the latest news.

Next