Advertisement

ಪ್ರಜಾತಂತ್ರ ರಕ್ಷಣೆಗೆ ಧರ್ಮ ಸಹಿಷ್ಣುತೆ ಕಾರಣ

12:00 PM Jun 27, 2017 | |

ಹುಬ್ಬಳ್ಳಿ: ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಲು ಧರ್ಮ ಸಹಿಷ್ಣುತೆ ಪ್ರಮುಖ ಕಾರಣವಾಗಿದ್ದು, ರಾಷ್ಟ್ರಾದ್ಯಂತ ಧರ್ಮ ಸಹಿಷ್ಣುತೆ ಬೆಳೆಸುವ ದಿಸೆಯಲ್ಲಿ ಮಠಾಧೀಶರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ ಹೇಳಿದರು.

Advertisement

ರಂಭಾಪುರಿ ಜಗದ್ಗುರು ವೀರಗಂಗಾಧರ ಸಮುದಾಯ ಭವನದಲ್ಲಿ ಸೋಮವಾರ ನಡೆದ ಜನಜಾಗೃತಿ ಧರ್ಮ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಅನೇಕ ಸ್ವಾಮೀಜಿಗಳು ಜನರಲ್ಲಿ ಧಾರ್ಮಿಕ ಭಾವನೆಗಳನ್ನು ಪ್ರಚುರಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದು, ಅವರಲ್ಲಿ ರಂಭಾಪುರಿ ಶ್ರೀಗಳ ಕಾರ್ಯ ಶ್ಲಾಘನೀಯವಾಗಿದೆ.

ಅವರು ನಿರಂತರ ದೇಶಾದ್ಯಂತ ಪ್ರವಾಸ ಕೈಗೊಂಡು ಧರ್ಮ ರಕ್ಷಣೆ ನಿಟ್ಟಿನಲ್ಲಿ ಮಹತ್ಕಾರ್ಯ ಮಾಡುತ್ತಿದ್ದಾರೆ ಎಂದರು. ಧರ್ಮ ಸಹಿಷ್ಣುತೆ ಕಾರಣದಿಂದಾಗಿ ಜಗತ್ತು ಈಗ ಭಾರತದತ್ತ ನೋಡುತ್ತಿದೆ. ಋಷಿ ಮುನಿಗಳ ಕೊಡುಗೆಯಾದ ಯೋಗ ನೂರಾರು ದೇಶಗಳಲ್ಲಿ ಕೋಟ್ಯಾಂತರ ಜನರಿಗೆ ತಲುಪುವಂತಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಿಂದಾಗಿ ಜೂನ್‌ 21ರಂದು ವಿಶ್ವದ 200ಕ್ಕೂ ಹೆಚ್ಚು ದೇಶಗಳು ಅಂತಾರಾಷ್ಟ್ರೀಯ ಯೋಗ ದಿನ ಆಚರಿಸುತ್ತಿವೆ. ಯೋಗದ ಮಹತ್ವ ವಿಶ್ವಕ್ಕೆ ಗೊತ್ತಾಗುತ್ತಿದೆ ಎಂದು ಅವರು ಹೇಳಿದರು. ವಿದ್ಯಾರ್ಥಿಗಳು, ಯುವಕರು ಹಾಗೂ ಹಿರಿಯರೆಲ್ಲರೂ ಒತ್ತಡದಿಂದ ಬಳಲುತ್ತಿದ್ದು, ಯೋಗದಿಂದಾಗಿ ಒತ್ತಡ ನಿವಾರಣೆ ಮಾಡಿಕೊಳ್ಳಲು ಸಾಧ್ಯ.

ಶುದ್ಧ ಮನಸ್ಸಿನಿಂದ ಸ್ವಾಮೀಜಿಗಳ ಮಾತು ಆಲಿಸಿದರೆ ಮನಸ್ಸಿಗೆ ಶಾಂತಿ ಸಿಗುತ್ತದೆ ಎಂದರು. ಸಾನ್ನಿಧ್ಯ ವಹಿಸಿದ್ದ ಶ್ರೀ ರಂಭಾಪುರಿ ಜಗದ್ಗುರು ಡಾ| ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಮಾತನಾಡಿ, ಮನುಷ್ಯನ ಉಜ್ವಲ ಭವಿಷ್ಯಕ್ಕೆ ಶಿಕ್ಷಣ, ಆರೋಗ್ಯ ಹಾಗೂ ಆಧ್ಯಾತ್ಮ ಬಲು ಮುಖ್ಯ.

Advertisement

ಗಳಿಸುವುದಷ್ಟೇ ಮನುಷ್ಯನ ಧರ್ಮವಲ್ಲ. ಬದುಕುವುದನ್ನು ಕಲಿಸುವುದೇ ನಿಜವಾದ ಧರ್ಮ. ಯಾವಾಗಲೂ ನಾಶವಾಗದಿರುವುದೇ ನಿಜವಾದ ಧರ್ಮ. ಅದನ್ನು ನಾಶಗೊಳಿಸುವ ಶಕ್ತಿ ಯಾರಿಗೂ ಇಲ್ಲ ಎಂದರು. ಮನುಷ್ಯನ ಬುದ್ಧಿ ಬೆಳೆದಂತೆ ಭಾವನೆಗಳು ಬೆಳೆಯದಿರುವುದರಿಂದ ಅನೇಕ ಸಮಸ್ಯೆಗಳು ಕಾಡುತ್ತಿವೆ. 

ಮಾತು, ಮನ, ಕೃತಿ ಒಂದಾಗಿ ಬಾಳುವುದರಿಂದ ಜೀವನದಲ್ಲಿ ಸುಖ-ಶಾಂತಿ ಲಭಿಸುತ್ತದೆ. ಹಣದಲ್ಲಿ ಬಡವನಾದರೂ ಗುಣದಲ್ಲಿ ಶ್ರೀಮಂತಿಕೆಯಿರಲಿ. ಸ್ನೇಹ-ಪ್ರೀತಿಗಳ ಸೌಧಗಳನ್ನು ಕಟ್ಟಬೇಕು ಹಾಗೂ  ನಮ್ಮೊಳಗಿನ ದ್ವೇಷ-ಅಸೂಯೆಗಳನ್ನು ನಾಶಪಡಿಸಬೇಕು ಎಂದು ಕಿವಿಮಾತು ಹೇಳಿದರು. 

ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ ಮಾತನಾಡಿ, ಮಕ್ಕಳಿಗೆ ನಮ್ಮ  ಧರ್ಮ, ಸಂಸ್ಕೃತಿಯನ್ನು ತಿಳಿಸಿಕೊಡುವುದು ಮಹತ್ವದ ಕೆಲಸ. ಮಕ್ಕಳಿಗೆ ಸಮಯ ನೀಡಬೇಕಲ್ಲದೆ ಅವರ ವ್ಯಕ್ತಿತ್ವ ರೂಪಿಸಲು ಪೂರಕ ವಾತಾವರಣ ಸೃಷ್ಟಿಸಬೇಕು ಎಂದರು.

ಸಹಾಯಕ ಆಯುಕ್ತ ಮಹೇಶ ಕರ್ಜಗಿ ಮಾತನಾಡಿ, ಉತ್ತರ ಕರ್ನಾಟಕ ಭಾಗದಲ್ಲಿ ಶಿಕ್ಷಣ ಕ್ಷೇತ್ರ ಬೆಳೆಯಲು ಮಠಗಳ ಕೊಡುಗೆ ಅಪಾರವಾದುದು. ಸರ್ಕಾರ ಉತ್ತರ ಕರ್ನಾಟಕವನ್ನು ಕಡೆಗಣಿಸಿದ್ದರೂ ಈ ಭಾಗದ ಮಠಾಧೀಶರು ಹಲವಾರು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ ಬೆಳೆಸಿದರು ಎಂದು ತಿಳಿಸಿದರು. ಹುಕ್ಕೇರಿ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. 

ಇದೇ ಸಂದರ್ಭದಲ್ಲಿ ಸಿದ್ಧಾಂತ ಶಿಖಾಮಣಿ ಕಿರು ಗ್ರಂಥ ಹಾಗೂ ಜಿವಿ ಅವರು ರಚಿಸಿದ 10 ನಾಟಕಗಳ ಲೋಕಾರ್ಪಣೆ ನಡೆಯಿತು. ಶ್ರೀಗಳು ಶೇಖರಯ್ಯ ಹಿರೇಮಠ, ಗಂಗಪ್ಪ ನೀರಲಗಿ, ವಿಶ್ವನಾಥ ಹಿರೇಗೌಡರ ಎಸ್‌.ಎನ್‌. ಮಹಾಜನಶೆಟ್ಟರ ಅವರಿಗೆ ಗುರುರಕ್ಷೆ ನೀಡಿದರು. ವೇದಿಕೆ ಮೇಲೆ ಡಾ| ಎನ್‌.ಎ. ಚರಂತಿಮಠ, ಪ್ರಕಾಶ ಬೆಂಡಿಗೇರಿ ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next