ಬೆಂಗಳೂರು: ನಗರದಲ್ಲಿ ಸೋಮವಾರ ರಾತ್ರಿ ಮತ್ತೆ ಮಳೆ ಅಬ್ಬರಿಸಿದ್ದು, ಸಮರೋಪಾದಿಯಲ್ಲಿ ಗುಂಡಿ ಮುಚ್ಚುವ ಕಾರ್ಯಕ್ಕೆ ಬ್ರೇಕ್ ಹಾಕಿದೆ. “ಮಳೆ ಬರಲಿ, ಬಾರದಿರಲಿ ನಿಗದಿತ ಗಡುವಿನಲ್ಲಿ ಗುಂಡಿ ಮುಚ್ಚಬೇಕು’ ಎಂದು ಬಿಬಿಎಂಪಿ ಆಯುಕ್ತರು ಸೂಚಿಸಿದ ಹಿನ್ನೆಲೆ ಎಂಜಿನಿಯರ್‌ಗಳು ಭಾನುವಾರ ರಾತ್ರಿಯಿಂದಲೇ ತ್ವರಿತ ಗತಿಯಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯ ಕೈಗೆತ್ತಿಕೊಂಡರು. ಆದರೆ ಸೋಮವಾರ ಬೆಳಗಿನಜಾವ ಮತ್ತು ರಾತ್ರಿ ಸುರಿದ ಮಳೆ, ಈ ಕಾರ್ಯಕ್ಕೆ ತಡೆಯೊಡ್ಡಿತು.
ಧಾರಾಕಾರ ಮಳೆ ಬಿದ್ದಿದ್ದರಿಂದ ಅನಿವಾರ್ಯವಾಗಿ ಗುಂಡಿ ಮುಚ್ಚುವ ಕಾರ್ಯ ಸ್ಥಗಿತಗೊಂಡಿತು. ಮಳೆ ನಿಂತ ನಂತರ ಗುಂಡಿಯಲ್ಲಿನ ನೀರು ಹೊರಹಾಕಿ, ಅದು ಒಣಗುವವರೆಗೂ ಕಾದು ಕೋಲ್ಡ್ ಮಿಕ್ಸ್‌ನಿಂದ ಮುಚ್ಚಬಹುದು. ಆದರೆ, ರಾತ್ರಿಯ ಮಳೆ ಇದಕ್ಕೂ ಅವಕಾಶ ನೀಡಲಿಲ್ಲ. ರಾತ್ರಿಪಾಳಿಯಲ್ಲಿದ್ದ ಎಂಜಿನಿಯರ್‌ಗಳು, ಕಾರ್ಮಿಕರು, ಮಳೆ ನಿಲ್ಲುವವರೆಗೂ ಗಂಟೆಗಟ್ಟಲೆ ಕಾದುಕುಳಿತರು.
ಈ ಮಧ್ಯೆ ಭಾನುವಾರ ರಾತ್ರಿಯಿಂದ ಸೋಮವಾರ ಸಂಜೆವರೆಗೆ ಸುಮಾರು 30ರಿಂದ 40 ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಲಾಗಿದೆ. 8ರಿಂದ 10 ಜನರ ತಂಡಗಳನ್ನು ಮಾಡಿ ಒಂದೊಂದು ರಸ್ತೆಗೆ ತಲಾ ಒಂದು ತಂಡ ಕೆಲಸ ಮಾಡುತ್ತಿದೆ. ಬುಲ್ ಟೆಂಪಲ್, ಬನಶಂಕರಿ ದೇವಸ್ಥಾನ ರಸ್ತೆ, ಮಾರ್ಗೋಸಾ ರಸ್ತೆ, ಯಲಹಂಕ ಸೇರಿದಂತೆ ವಿವಿಧೆಡೆ ಗುಂಡಿಗಳನ್ನು ಹಾಟ್ ಮಿಕ್ಸ್ ಮತ್ತು ಕೋಲ್ಡ್ ಮಿಕ್ಸ್ ಎರಡರಿಂದಲೂ ಮುಚ್ಚಲಾಗಿದೆ. ಆದರೆ, ಮಳೆಯಿಂದ ಈ ಕಾರ್ಯ ತುಸು ಮಂದಗತಿಯಲ್ಲಿ ಸಾಗುತ್ತಿದೆ ಎಂದು ಮುಖ್ಯ ಎಂಜಿನಿಯರ್ (ರಸ್ತೆ ಮೂಲಸೌಕರ್ಯ) ಎಸ್. ಸೋಮಶೇಖರ್ ತಿಳಿಸಿದರು.
ರಸ್ತೆಯಲ್ಲಿ ವಾಹನಗಳ ಸರ್ಕಸ್!: ಇನ್ನೂ ಒಂದೆಡೆ ಮಳೆ, ಮತ್ತೂಂದೆಡೆ ಹದಗೆಟ್ಟ ರಸ್ತೆಗಳ ನಡುವೆ ವಾಹನ ಸವಾರರು ಪರದಾಟ ನಡೆಸಿದರು. ಈ ಹಿಂದೆ ಮುಚ್ಚಿದ ರಸ್ತೆ ಗುಂಡಿಗಳು ಕೂಡ ನಿರಂತರ ಮಳೆಯ ಹೊಡೆತಕ್ಕೆ ಬಾಯೆ¤ರೆದಿದ್ದವು. ಮಳೆಯಿಂದ ಬಚಾವಾಗುವ ಭರದಲ್ಲಿ ನೀರು ತುಂಬಿದ ಗುಂಡಿಗಳಲ್ಲಿ ಆಯತಪ್ಪಿ ಬಿದ್ದ ಅನೇಕ ಪ್ರಸಂಗಗಳು ನಡೆದವು.
ಈ ನಡುವೆ ಮಳೆಯ ರಭಸಕ್ಕೆ ಪ್ರಮುಖ ಜಂಕ್ಷನ್‌ಗಳು, ರಸ್ತೆಗಳಲ್ಲಿ ನೀರು ಆವರಿಸಿದ್ದರಿಂದ ರಾತ್ರಿ 10 ಗಂಟೆಯಾದರೂ ಸಂಚಾರದಟ್ಟಣೆ ಉಂಟಾಯಿತು. ಜಲಾವೃತಗೊಂಡ ಜಂಕ್ಷನ್‌ಗಳ ಪರ್ಯಾಯ ಮಾರ್ಗಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು.
ಎಂ.ಜಿ. ರಸ್ತೆ, ಶಿವಾನಂದ ವೃತ್ತ, ಮೆಜೆಸ್ಟಿಕ್, ಕೆ.ಆರ್. ಮಾರುಕಟ್ಟೆ, ಹೆಬ್ಟಾಳ, ಶಾಂತಿನಗರ ಸೇರಿದಂತೆ ವಿವಿಧೆಡೆ ಮಳೆಯಾಗಿದೆ. ಮೈಸೂರು ರಸ್ತೆ, ನಾಯಂಡಹಳ್ಳಿ, ತುಮಕೂರು ರಸ್ತೆ, ಸೆಂಟ್ರಲ್ ಸಿಲ್ಕ್ ಬೋರ್ಡ್, ಕೆ.ಆರ್. ಪುರ ರಸ್ತೆ, ಎನ್‌ಜಿಇಎಫ್, ಪೀಣ್ಯ, ವೆಲ್ಲಾರ ಜಂಕ್ಷನ್ ಮತ್ತಿತರ ಕಡೆಗಳಲ್ಲಿ ಸಂಚಾರದಟ್ಟಣೆ ಇತ್ತು.