Advertisement

ಚಾಂಬಾಡು-ತೊಡಿಕಾನ ರಸ್ತೆಯಲ್ಲಿ ಸಂಚಾರ ಕಷ್ಟ

01:10 AM Jul 04, 2020 | Sriram |

ಅರಂತೋಡು: ಚಾಂಬಾಡು- ತೊಡಿಕಾನ ರಸ್ತೆ ಜಲ್ಲಿ ಕಲ್ಲು ಸಾಗಾಟದ ಘನ ಟಿಪ್ಪರ್‌ಗಳು ಸಂಚರಿಸಿ ರಸ್ತೆ ಚಿಂದಿ ಚಿಂದಿಯಾಗಿ ಲಘು ವಾಹನ ಸಂಚಾರಕ್ಕೆ ತೊಡಕಾಗಿ ಪರಿಣಮಿಸಿದೆ.

Advertisement

ಕಳೆದ ಅನೇಕ ಸಮಯದಿಂದ ಕೊಡಗು ಜಿಲ್ಲೆಯ ಪೆರಾಜೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಬೆಟ್ಟದಪುರ ಕ್ರಷರ್‌( ಜಲ್ಲಿ ಕಲ್ಲು ಕೋರೆ)ನಿಂದ ಸುಳ್ಯ ತಾಲೂಕು ತೊಡಿಕಾನ ಗ್ರಾಮದ ಚಾಂಬಾಡು -ತೊಡಿಕಾನ ರಸ್ತೆಯ ಮೂಲಕ ದೊಡ್ಡ ದೊಡ್ಡ ಟಿಪ್ಪರ್‌ಗಳ ಮೂಲಕ ಜಲ್ಲಿ ಕಲ್ಲು ಸಾಗಾಟ ಅವ್ಯಾಹತವಾಗಿ ನಡೆಯುತ್ತಿದ್ದು, ರಸ್ತೆ ಚಿಂದಿಯಾಗಿದೆ. ಇದರಿಂದ ದ್ವಿಚಕ್ರ ವಾಹನ ಹಾಗೂ ಇತರ ಲಘು ವಾಹನಗಳು ಸಂಚರಿಸಲು ಸಾಧ್ಯ ವಾಗುತ್ತಿಲ್ಲ.

ಕೊಡಗಿನವರ ವಿರೋಧ
ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಕ್ರಷರ್‌ ಇದ್ದರೂ ಜಲ್ಲಿಯನ್ನು ಪೆರಾಜೆ ರಸ್ತೆಯ ಮೂಲಕ ಸಾಗಿಸುವುದಕ್ಕೆ ಕೊಡಗಿನವರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯ ರಸ್ತೆಯ ಮೂಲಕವೇ ಸಾಗಿಸಲಾಗುತ್ತಿದೆ.

ಅತೀ ವೇಗದ ಸಂಚಾರ
ಈ ರಸ್ತೆಯ ಮೂಲಕ ಜಲ್ಲಿ ಸಾಗಿಸುವ ಟಿಪ್ಪರುಗಳು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸಂಚರಿ ಸುತ್ತಿವೆ. ರಸ್ತೆ ತೀರಾ ಕಿರಿದಾಗಿದ್ದು, ತಿರುವುಗಳಿಂದ ಕೂಡಿದೆ. ಪರಿಣಾಮ ಸಣ್ಣ ವಾಹನದವರು ಮತ್ತು ಪಾದಚಾರಿಗಳು ಜೀವ ಕೈಯಲ್ಲಿ ಹಿಡಿದುಕೊಂಡು ಸಾಗಬೇಕಾಗಿದೆ.

ಸೇತುವೆಗೂ ಅಪಾಯ
ಸ್ಥಳೀಯ ಹೊಳೆಗೆ 30 ವರ್ಷಗಳ ಹಿಂದೆ ನಿರ್ಮಿಸಿದ ಸೇತುವೆ ಮೂಲಕವೇ ಈ ಟಿಪ್ಪರುಗಳು ಸಂಚರಿಸಬೇಕಾಗಿದ್ದು, ಸೇತುವೆಗೂ ಅಪಾಯ ಎದುರಾಗುವ ಭೀತಿಯಿದೆ. ಈಗಾಗಲೇ ಸೇತುವೆಯ ಪಿಲ್ಲರ್‌ಗಳು ಶಿಥಿಲಗೊಂಡಿವೆ. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಮನ ಹರಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ತಪ್ಪಿದಲ್ಲಿ ಪ್ರತಿಭಟನೆ ಅನಿವಾರ್ಯವಾದೀತು ಎಂದು ಎಚ್ಚರಿಸಿದ್ದಾರೆ.

Advertisement

 ಅನುದಾನದ ನಿರೀಕ್ಷೆ
ಚಾಂಬಾಡು -ತೊಡಿಕಾನ ರಸ್ತೆ ಹದಗೆಟ್ಟಿರುವ ವಿಷಯ ನಮ್ಮ ಗಮನಕ್ಕೆ ಬಂದಿದೆ. ಅದರ ಅಭಿ ವೃದ್ಧಿಗಾಗಿ ಜನಪ್ರತಿನಿಧಿಗಳು ಶ್ರಮಿಸುತ್ತಿದ್ದು, ಅನುದಾನ ಬಿಡುಗಡೆಯ ನಿರೀಕ್ಷೆಯಲ್ಲಿದ್ದೇವೆ.
-ಜಯಪ್ರಕಾಶ್‌
ಪಿಡಿಒ ಅರಂತೋಡು ಗ್ರಾ.ಪಂ.

ಕ್ರಮ ಅಗತ್ಯ
ಕೊಡಗು ಜಿಲ್ಲೆ ವ್ಯಾಪ್ತಿಯಲ್ಲಿ ಕ್ರಷರ್‌ ಇದ್ದು, ದ.ಕ. ಜಿಲ್ಲೆಯ ಚಾಂಬಾಡು – ತೊಡಿಕಾನ ರಸ್ತೆಯ ಮೂಲಕ ಘನ ಟಿಪ್ಪರುಗಳಲ್ಲಿ ಜಲ್ಲಿ ಸಾಗಿಸಲಾಗುತ್ತಿದೆ. ಇದರಿಂದ ರಸ್ತೆ ಕೆಟ್ಟು ಹೋಗಿದ್ದು, ಲಘು ವಾಹನ ಸಂಚರಿಸಲು ಅಸಾಧ್ಯವಾಗಿದೆ. ಸಂಬಂಧಪಟ್ಟವರು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
-ಗೋವರ್ಧನ ಬೊಳ್ಳುರು
ಸ್ಥಳೀಯರು.

Advertisement

Udayavani is now on Telegram. Click here to join our channel and stay updated with the latest news.

Next