ಸುಳ್ಯ: ಈ ಬಾರಿಯ ಮಳೆಗಾಲದ ಆರಂಭದಲ್ಲಿ ಹವಾಮಾನ ವೈಪರೀತ್ಯದಿಂದ ಹಲವೆಡೆ ಅಧಿಕ ಪ್ರಮಾಣದಲ್ಲಿ ಎಳೆ ಅಡಿಕೆ (ನಳ್ಳಿ) ಉದುರಿದ್ದು, ಇದೀಗ ಇಳುವರಿಯಲ್ಲಿ ಶೇ. 50ಕ್ಕೂ ಅಧಿಕ ಕುಸಿತ ಕಂಡಿರುವ ಬಗ್ಗೆ ಕೃಷಿಕರು ಮಾಹಿತಿ ನೀಡಿದ್ದಾರೆ.
ಕಳೆದ ಬೇಸಗೆಯಲ್ಲಿ ನೀರಿನ ಕೊರತೆ ಕಾಡಿತ್ತು. ಜನವರಿಯಿಂದ ಜೂನ್‌ವರೆಗೆ ಮಳೆ ಇರಲಿಲ್ಲ. ಪರಿಣಾಮ ವಾತಾವರಣದಲ್ಲಿ ಉಷ್ಣಾಂಶ ವಿಪರೀತ ಏರಿಕೆ ಕಂಡಿತ್ತು. ಜೂನ್ ಬಳಿಕ ಮಳೆ-ಬಿಸಿಲಿನ ವಾತಾವರಣದಿಂದ ನಳ್ಳಿ ಉದುರಲಾರಂಭಿಸಿತ್ತು. ಕೀಟಬಾಧೆಯೂ (ರಸ ಹೀರುವ ಸಣ್ಣ ಕ್ರಿಮಿ) ಇದಕ್ಕೆ ಕಾರಣ ಎನ್ನಲಾಗಿತ್ತು.
ಎಳೆ ಅಡಿಕೆ ಪತನ ಕೆಲವೆಡೆ ನಿಯಂತ್ರಣಕ್ಕೆ ಬಂದಿತ್ತು. ಆದರೆ ಹೆಚ್ಚಿನ ಕಡೆ ಔಷಧ ಸಿಂಪಡಿಸಿದರೂ ನಿಯಂತ್ರಣಕ್ಕೆ ಸಿಕ್ಕಿರಲಿಲ್ಲ. ಇದರಿಂದ ಎಳೆ ಅಡಿಕೆ ವಿಪರೀತವಾಗಿ ಪತನಗೊಂಡಿದ್ದು, ಸುಳ್ಯ ಭಾಗದ ಕೃಷಿಕರು ಹೇಳುವಂತೆ ಶೇ. 50-75ರ ವರೆಗೆ ಇಳುವರಿ ಕುಸಿತವಾಗಿದೆ. ಅಡಿಕೆ ಕೊçಲಿಗೆ ಸಿದ್ಧತೆ ನಡೆಯುತ್ತಿದ್ದು, ಕೆಲವೆಡೆ ಆರಂಭವಾಗಿದೆ. ನಳ್ಳಿ ಉದುರಿದ ಕಡೆಗಳಲ್ಲಿ ಇಳುವರಿ ಕುಸಿತಗೊಂಡಿದೆ. ಒಟ್ಟಿನಲ್ಲಿ ಅಡಿಕೆ ಕೃಷಿಕರು ಪ್ರತೀ ವರ್ಷ ಒಂದಿಲ್ಲೊಂದು ಸಮಸ್ಯೆಯಿಂದ ಅಡಿಕೆಯಿಂದ ಪಡೆ ಯುವ ಆದಾಯದಿಂದ ವಂಚಿತ ಗೊಳ್ಳುತ್ತಿದ್ದಾರೆ.
ಮಳೆಗಾಲದ ಆರಂಭದಲ್ಲಿ ಎಳೆ ಅಡಿಕೆ ಉದುರಿದ್ದರಿಂದ ಅಡಿಕೆ ಇಳುವರಿಯಲ್ಲಿ ಕುಸಿತ ಕಂಡಿರುವ ಬಗ್ಗೆ ಕೃಷಿಕರು ಮಾಹಿತಿ ನೀಡಿದ್ದಾರೆ. ಅಡಿಕೆ ಪತನ ನಿಯಂತ್ರಣ ಸಿಕ್ಕ ಕಡೆಗಳಲ್ಲಿ ಇಳುವರಿ ಉತ್ತಮ ರೀತಿಯಲ್ಲಿ ಇದೆ.
– ವಿನಾಯಕ ಹೆಗ್ಡೆ, ವಿಜ್ಞಾನಿ ಸಿಪಿಸಿಆರ್‌ಐ