ಸಕಲೇಶಪುರ: ತಾಲೂಕಿನ ಗ್ರಾಮೀಣ ಜನರಿಗೆ ನಿರಂತರ ಉದ್ಯೋಗ ಒದಗಿಸಲು ಖಾತ್ರಿ ಯೋಜನೆ ಯಡಿ ಮೂರು ತಿಂಗಳವರೆಗೆ ದುಡಿಯೋಣ ಬಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಾಪಂ ಇಒ ಜಿ.ಆರ್.ಹರೀಶ್ ಹೇಳಿದರು.
ಪಟ್ಟಣದ ತಾಪಂನ ಸಾಮರ್ಥ್ಯ ಸೌಧದಲ್ಲಿ ಅಬ್ದುಲ್ ನಜೀರ್ ಸಾಬ್ ಸಂಸ್ಥೆ, ಮೈಸೂರು ಹಾಗೂ ತಾಪಂ ಸಕಲೇಶಪುರದಿಂದ ಹಮ್ಮಿಕೊಂಡಿದ್ದ ಹೆಬ್ಬಸಾಲೆ, ಬೆಳಗೋಡು, ವಳಲಹಳ್ಳಿ ಗ್ರಾಪಂ ನೂತನ ಸದಸ್ಯರಿಗೆ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಹಾಗೂ ದುಡಿಯೋಣ ಬಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದರು.
ನಿರಂತರ ಕೆಲಸ: ಗ್ರಾಮೀಣ ಜನರಿಗೆ ಬೇಸಿಗೆ ಅವಧಿಯಲ್ಲಿ ನಿರಂತರ ಕೆಲಸ ಒದಗಿಸುವುದು, ಯೋಜನೆಯಿಂದ ಹೊರಗುಳಿದ ದುರ್ಬಲ ಕುಟುಂಬಗಳನ್ನು ಸಕ್ರಿಯವಾಗಿ ಭಾಗವಹಿಸುವಂತೆ ಮಾಡುವುದು, ಗ್ರಾಮೀಣ ಜನರಿಗೆ ಸ್ಥಳೀಯವಾಗಿ ಉದ್ಯೋಗ ನೀಡಿ ಸ್ವಾವಲಂಬಿಗಳಾಗಿ ಬದುಕುವಂತೆ ಮಾಡುವುದು, ಕಾಮಗಾರಿ ಬೇಡಿಕೆ ಸಲ್ಲಿಸುವ ವಿಧಾನವನ್ನು ಸರಳಗೊಳಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶಗಳಾಗಿವೆ ಎಂದು ತಿಳಿಸಿದರು.
ಕೃಷಿ ಚಟುವಟಿಕೆಗೆ ಅನುಕೂಲ: ನರೇಗಾ ಯೋಜನೆಯಡಿ ಒಂದು ಕುಟುಂಬವು ವರ್ಷದಲ್ಲಿ 100 ದಿನಗಳ ಕೆಲಸ ಮಾಡಲು ಅವಕಾಶ ಇರುತ್ತದೆ. ಬೇಸಿಗೆ ಅವಧಿಯಲ್ಲಿ 60 ದಿನ ಕೆಲಸ ಮಾಡಿದ್ದಲ್ಲಿ 16,500 ರೂ. ಗಳಿಸಬಹುದು. ಇದರಿಂದ ಮುಂಬರುವ ಕೃಷಿ ಚಟುವಟಿಕೆಗೆ ಅಗತ್ಯವಿರುವ ಬೀಜ, ರಸಗೊಬ್ಬರ ಖರೀದಿ, ಮಕ್ಕಳ ಶಾಲೆ ಮತ್ತು ಕಾಲೇಜು ಶುಲ್ಕ ಭರಿಸಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಉದ್ಯೋಗ ಖಾತ್ರಿ ಯೋಜನೆ, ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ಯೋಜನೆಗಳ ಐಇಸಿ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ತಾಪಂ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಎಚ್.ಉದಐ‍್, ಸಹಾಯಕ ನಿರ್ದೇಶಕ ಆದಿತ್ಯ ಎಚ್.ಎ., ವಳಲಹಳ್ಳಿ, ಹೆಬ್ಬಸಾಲೆ ಹಾಗೂ ಬೆಳಗೋಡು ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಸ್ವಸಹಾಯ ಸಂಘಗಳ ಸದಸ್ಯರು ಉಪಸ್ಥಿತರಿದ್ದರು.
ಅಭಿಯಾನದಲ್ಲಿನ ಕೈಗೊಳ್ಳಲಾಗಿರುವ ಕಾರ್ಯಕ್ರಮಗಳು : ಅಭಿಯಾನದ ಅವಧಿಯಲ್ಲಿ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಕನಿಷ್ಠ 50 ರೈತರ ಜಮೀನಿನಲ್ಲಿ ಬದು, ಕೃಷಿ ಹೊಂಡ, ತೆರೆದ ಬಾವಿ ನಿರ್ಮಾಣ, ಪ್ರತಿ ಗ್ರಾಮ ಪಂಚಾಯ್ತಿಗೆ ಕನಿಷ್ಠ 50 ಇಂಗುಗುಂಡಿ ನಿರ್ಮಾಣ, ಕೆರೆಗಳನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲು ಕೆರೆಗೆ ನೀರು ಹರಿದು ಬರುವ ಕಾಲುವೆಗಳ ಪುನಶ್ಚೇತನ, ಕೆರೆ ಹೂಳು ತೆಗೆಯುವುದು, ಕೆರೆ ಏರಿ, ಕೋಡಿ ದುರಸ್ತಿ, ರೈತರ ಜಮೀನಿಗೆ ನೀರು ಹರಿದು ಹೋಗುವ ಕಾಲುವೆಗಳ ಪುನಶ್ಚೇತನ ಮತ್ತು ಕೆರೆ ಅಂಚಿನಲ್ಲಿ ಅರಣ್ಯೀಕರಣ ಮತ್ತು ರಸ್ತೆ ಬದಿ ನೆಡುತೋಪು, ಬ್ಲಾಕ್ ಪ್ಲಾಂಟೇಶನ್, ಕೃಷಿ ಅರಣ್ಯೀಕರಣ, ರೈತರ ಜಮೀನಿನಲ್ಲಿ ತೋಟಗಾರಿಕೆ ಬೆಳೆ ಬೆಳೆಯಲು ಮುಂಗಡ ಗುಂಡಿ ತೆಗೆಯುವ ಹಾಗೂ ಬೋರ್‌ವೆಲ್ ರಿಚಾರ್ಜ್ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುವುದು ಎಂದು ತಾಪಂ ಇಒ ಜಿ.ಆರ್.ಹರೀಶ್ ವಿವರಿಸಿದರು.