ಲಕ್ನೋ: ಉತ್ತರ ಪ್ರದೇಶ ವಿಧಾನಸಭೆ ಕಣದಲ್ಲೀಗ ಕತ್ತೆ ಕಹಳೆ ಜೋರು. ಗುಜರಾತಿನ ಕತ್ತೆಗಳ ಪರ ನಟ ಅಮಿತಾಭ್ ಬಚ್ಚನ್ ಜಾಹೀರಾತು ನೀಡಿದ್ದರ ಬಗ್ಗೆ ಆಕ್ಷೇಪ ಎತ್ತಿದ್ದ ಸಿಎಂ ಅಖೀಲೇಶ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಗುರುವಾರ ಉತ್ತರ ನೀಡಿದ್ದು, ಕತ್ತೆಗಳ ನಿಯತ್ತನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. “125 ಕೋಟಿಯ ಈ ದೇಶಕ್ಕೆ ನಾನು ಹಗಲಿರುಳು ಕತ್ತೆ ರೀತಿ ದುಡಿಯಲು ಸಿದ್ಧ’ ಎಂದಿದ್ದಾರೆ.
“ದುಡಿವ ಕತ್ತೆಗಳೇ ನನಗೆ ಪ್ರೇರಣೆ. ಗುಜರಾತಿನ ಕತ್ತೆಗಳ ನಿಯತ್ತಿನ ಬಗ್ಗೆ ಅಖೀಲೇಶ್‌ಗೆ ಏನೂ ಗೊತ್ತಿಲ್ಲ. ಪ್ರಾಮಾಣಿಕತೆಯಲ್ಲಿ ಅವುಗಳನ್ನು ಮೀರಿಸುವವರಿಲ್ಲ. ದೇಶದ 125 ಕೋಟಿ ಮಂದಿಯನ್ನೂ ಮೀರಿಸುವವರಿಲ್ಲ. ಅಖೀಲೇಶ್ ಗುಜರಾತನ್ನು ದ್ವೇಷಿಸಬಹುದು. ಆದರೆ, ಅಲ್ಲಿ ಕೇವಲ ನಾನೊಬ್ಬನೇ ಹುಟ್ಟಿಲ್ಲ. ದಯಾನಂದ ಸರಸ್ವತಿ, ಮಹಾತ್ಮ ಗಾಂಧಿ, ಸರ್ದಾರ್ ಪಟೇಲ್ ಜನ್ಮವೆತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಹುಟ್ಟಿದ ಕೃಷ್ಣ ಕೂಡ ನೆಲೆ ನಿಲ್ಲಲು ಬಂದಿದ್ದು ಗುಜರಾತಿನ ದ್ವಾರಕೆಗೆ ಎನ್ನುವುದು ತಿಳಿದಿರಲಿ’ ಎಂದು ಮೋದಿ ತಿರುಗೇಟು ನೀಡಿದರು.
“ಶಾ ದೊಡ್ಡ ಉಗ್ರ’: ಎರಡು ದಿನದ ಹಿಂದಷ್ಟೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಕಾಂಗ್ರೆಸ್, ಎಸ್ಪಿ ಮತ್ತು ಬಿಎಸ್ಪಿಯನ್ನು “ಕಸಬ್’ ಎಂದು ವ್ಯಾಖ್ಯಾನಿಸಿದ್ದರು. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಬಿಎಸ್ಪಿ ನಾಯಕಿ ಮಾಯಾವತಿ, “ಈ ದೇಶಕ್ಕೆ ಅಮಿತ್ ಶಾ ದೊಡ್ಡ ಉಗ್ರಗಾಮಿ. ಅವರಿಗಿಂತ ಕಸಬ್ ದೊಡ್ಡ ಉಗ್ರನಾಗಲು ಸಾಧ್ಯವೇ ಇಲ್ಲ’ ಎಂದಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಪ್ರಧಾನಿ ಮೋದಿ ಅವರನ್ನು ಮಾಯಾ, “ಮಿ. ನೆಗೆಟಿವ್ ದಲಿತ್ ಮ್ಯಾನ್’ ಎಂದು ಸಂಭೋದಿಸಿದ್ದರು.
ಮೋದಿ ಹಗೆತನ: ಇನ್ನೊಂದೆಡೆ ಅಮೇಥಿಯಲ್ಲಿ ರಾಹುಲ್ ಗಾಂಧಿ ಕೂಡ ಪ್ರಧಾನಿ ವಿರುದ್ಧ ಗುಡುಗಿದರು. “ಆರಂಭದಲ್ಲಿ ಮೋದಿ ಬಹಳ ಖುಷಿಯಿಂದಲೇ ಚುನಾವಣಾ ಪ್ರಚಾರಕ್ಕಿಳಿದಿದ್ದರು. ಯಾವಾಗ ಕಾಂಗ್ರೆಸ್- ಎಸ್ಪಿ ಮೈತ್ರಿ ಆಯಿತೋ, ಅಲ್ಲಿಂದ ಹಗೆತನವನ್ನೇ ಮುಖ್ಯ ಅಸ್ತ್ರ ಮಾಡಿಕೊಂಡಿದ್ದಾರೆ. ಮೋದಿ ಮುಖದಲ್ಲಿ ನಗು ಕಣ್ಮರೆಯಾಗಿದೆ. ಹತಾಶೆಯಿಂದ ಅವರೀಗ ಜನರನ್ನು ಧಾರ್ಮಿಕವಾಗಿ ಒಡೆಯಲು ಯತ್ನಿಸುತ್ತಿದ್ದಾರೆ’ ಎಂದು ಕಾಂಗ್ರೆಸ್ ಉಪಾಧ್ಯಕ್ಷ ಆರೋಪಿಸಿದರು.
ಉತ್ತರ ಪ್ರದೇಶ ನಾಲ್ಕನೇ ಹಂತ ಶೇ.63ರಷ್ಟು ಮತ ಚಲಾವಣೆ
ಉತ್ತರ ಪ್ರದೇಶದ ನಾಲ್ಕನೇ ಹಂತದ ಮತದಾನ ಗುರುವಾರ ಮುಕ್ತಾಯ ಕಂಡಿದ್ದು, ಶೇ.63ರಷ್ಟು ಮತ ಚಲಾವಣೆ ಆಗಿದೆ. ಒಟ್ಟು 12 ಜಿಲ್ಲೆಗಳ 53 ವಿಧಾನಸಭೆ ಕ್ಷೇತ್ರಗಳಲ್ಲಿ ಮತದಾನ ನಡೆಯಿತು. ಮಹೋಬಾ ಎಂಬಲ್ಲಿ ಎಸ್ಪಿ ಮತ್ತು ಬಿಎಸ್ಪಿ ನಡುವೆ ಮಾರಾಮಾರಿ ವೇಳೆ ಪೊಲೀಸರು ಫೈರಿಂಗ್ ನಡೆಸಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ದಾಂದಲೆಗೆ ಕಾರಣವಾದ ಇಬ್ಬರ ಮೇಲೆ ಎಫ್ಐಆರ್ ದಾಖಲಿಸಿ, ಬಂಧನಕ್ಕೊಳಪಡಿಸಲಾಗಿದೆ. ಸೋನಿಯಾ ಗಾಂಧಿ ಕ್ಷೇತ್ರವಾದ ರಾಯ್‌ಬರೇಲಿ, ಅತಿ ಹಿಂದುಳಿದ ಬುಂದೇಲ್ ಖಂಡ, ಪುಣ್ಯಕ್ಷೇತ್ರ ಅಲಹಾಬಾದ್ ಸೇರಿದಂತೆ 12 ಜಿಲ್ಲೆಗಳಲ್ಲಿ ಮತದಾನ ನಡೆಯಿತು.