ದಿನದಿಂದ ದಿನಕ್ಕೆ ಬೆಳೆಯುತ್ತಿರುವ ನಗರ ಪ್ರದೇಶದಲ್ಲಿರುವ ಜನರು, ಹೊಸತನ್ನು ನೋಡಬೇಕು, ನೋಡಿದ್ದನ್ನು ಅನುಭವಕ್ಕೆ ಪಡೆದುಕೊಳ್ಳಬೇಕು ಎನ್ನುವವರು ಮೊದಲು ಬ್ಯಾಗ್ ಪ್ಯಾಕ್ ಮಾಡಬೇಕಾದದ್ದು ಪ್ರವಾಸಿಗರನ್ನು ಹಿಂದಿರುಗಲು ಬಿಡದಂತೆ ಆಕರ್ಷಿಸುವ ದೂದ್‌ಸಾಗರ್ ನತ್ತ.
ಸ್ವರ್ಗಕ್ಕೆ ಇನ್ನೊಂದು ಹೆಸರಿನಂತಿರುವ ದೂದ್ ಸಾಗರ್ ವಿಶ್ವದಲ್ಲಿ ಐದನೇ ಅತೀ ದೊಡ್ಡ ಜಲಪಾತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಎತ್ತರದಿಂದ ಹಾಲಿನ ನೊರೆಯಂತೆ ಧುಮ್ಮಿಕ್ಕುವ ಈ ಜಲಪಾತ ಗೋವಾ ರಾಜಧಾನಿ ಪಣಜಿಯಿಂದ ಕೇವಲ 60 ಕಿಲೋಮೀಟರ್ ದೂರದಲ್ಲಿದೆ. ಮಳೆಗಾಲದಲ್ಲಂತೂ ಜಲಪಾತ ಸೌಂದರ್ಯ ಬಂದ ಪ್ರವಾಸಿಗರ ಕಣ್ಣು ಮಿಟುಕಿಸಲೂ ಬಿಡುವುದಿಲ್ಲ.
ದೂದ್‌ಸಾಗರ್ ತಲುಪುವ ದಾರಿ:
ದೂದ್‌ಸಾಗರ್ ಹೋಗಬೇಕೆಂದುಕೊಂಡವರಿಗೆ ರೈಲು ಮಾರ್ಗ ಸುರಕ್ಷಿತ. ಬೆಳಗಾವಿಯಿಂದ ನಿತ್ಯ ಬೆಳಗ್ಗೆ 10:30ಕ್ಕೆ ಕ್ಯಾಸಲ್ ರಾಕ್‌ಗೆ ತೆರಳುವ ರೈಲಿಗೆ ಹತ್ತಿದರೆ ದೂದ್‌ಸಾಗರ್ ನಿಲ್ದಾಣದಲ್ಲಿ ಇಳಿಯಬಹುದು. ಸಂಜೆ 5 ಗಂಟೆ ಸುಮಾರಿಗೆ ಅದೇ ಮಾರ್ಗವಾಗಿ ಬರುವ ನಿಜಾಮುದ್ದಿನ್ ಎಕ್ಸ್‌ಪ್ರೆಸ್‌ನಲ್ಲಿ ಕೂತು ಅಲ್ಲಿಂದ ಹಿಂತಿರುಗಬಹುದು. ಕರ್ನಾಟಕದಿಂದ ಹೋಗಬೇಕಾದರೆ ವಾಸ್ಕೋ ಗೋವಾ ಮಾರ್ಗದ ರೈಲು ಹತ್ತಿದರೆ, ಅದೇ ಮಾರ್ಗದಲ್ಲಿ ಸಿಗುವ ಲೋಂಡಾದಲ್ಲಿ ಇಳಿದುಕೊಂಡರೆ ದೂದ್‌ಸಾಗರ್‌ಗೆ ಹೋಗುವ ರಸ್ತೆ ಸಿಗುತ್ತದೆ. ಅಲ್ಲಿಂದ ಕ್ಯಾಸಲ್ ರಾಕ್‌ಗೆ ಹೋಗುವ ರೈಲನ್ನು ಹತ್ತಿದರೆ, ಸುರಂಗ ಮಾರ್ಗದಲ್ಲಿ ಚಲಿಸುವ ಈ ರೈಲು ಮತ್ತೂಂದು ಲೋಕಕ್ಕೆ ಸಾಗುತ್ತಿದ್ದೇವೋ ಎನ್ನುವ ಅನುಭವವನ್ನು ನೀಡುತ್ತದೆ.
ಇಲ್ಲಿ ಪ್ರಯಾಣಿಕರಿಗೆ ಅಗತ್ಯವಾಗಿ ಬೇಕಾಗುವ ಟೀಸ್ಟಾಲ್, ಶೌಚಾಲಯ ಹಾಗೂ ರೈಲು ನಿಲ್ದಾಣದಿಂದ ಜಲಪಾತಕ್ಕೆ ತಲುಪಲು ಪಾಥ್ ವೇ, ದೂದ್‌ಸಾಗರ್ ಪ್ರದೇಶಗಳನ್ನು ಅಭಿವೃದ್ಧಿಪಡಿಸಲಾಗಿದೆ. ಬೆಳಗಾವಿ- ಗೋವಾ- ಉತ್ತರ ಕನ್ನಡ ಈ ಮೂರು ಜಿಲ್ಲೆಗಳ ಸಂಗಮ ಇದಾಗಿದೆ. ಸುತ್ತಲು ಮಂಜಿನಿಂದ ಆವರಿಸಲ್ಪಟ್ಟ ಹಾಲಿನಂತೆ ಧುಮ್ಮಿಕ್ಕುವ ಈ ಜಲ ಸಾಗರದ ಸುತ್ತಮುತ್ತಲು ಹಚ್ಚ-ಹಸುರು ತುಂಬಿಕೊಂಡಿರುವುದರಿಂದ ಪ್ರವಾಸಿಗರು ಖಂಡಿತ ಇಷ್ಟ ಪಡುವಂತಿದೆ.
ದೂದ್‌ಸಾಗರ್‌ಗೆ ತಲುಪುವುದು ತುಸು ಕಷ್ಟವೇ ಇರಬಹುದು. ಆದರೆ ಬಾಯಿ ಮೊಸರಾಗ ಬೇಕಾದರೆ ಕೈ ಕೆಸರಾಗಲೇ ಬೇಕಲ್ಲವೇ? ಈಗ ಕೋವಿಡ್ ನಿರ್ಬಂಧಗಳು ಸಡಿಲಗೊಂಡಿದ್ದು, ದೂದ್‌ಸಾಗರ್ ಜಲಪಾತದಲ್ಲಿ ಪ್ರವಾಸಿಗರು ಸೇರುವ ನಿರೀಕ್ಷೆಯಿದೆ. ರೈಲ್ವೇ ನಿಲ್ದಾಣದಿಂದ ಜಲಪಾತದವರೆಗೂ ಕಾಂಕ್ರೀಟ್ ಸ್ಲೀಪರ್‌ಗಳು ಹಾಗೂ ದೂದ್‌ಸಾಗರ್ ಜಲಪಾತದ ಎದುರು ಕುಳಿತು ಪ್ರಕೃತಿ ಸೊಬಗನ್ನು ಸವಿಯಲು ಸ್ಟೆಪ್ ಗಾರ್ಡನ್, ಬೆಂಚ್‌ಗಳು ನಿಮಗಾಗಿ ಕಾಯುತ್ತಿವೆ. ಈ ಪ್ರದೇಶದಲ್ಲಿ ಏಕಕಾಲಕ್ಕೆ 75 ಜನರು ಬರುವಷ್ಟು ಸೌಲಭ್ಯವಿದ್ದು, ವೀವ್ ಪಾಯಿಂಟ್ ವ್ಯವಸ್ಥೆ ಕಲ್ಪಿಸಲಾಗಿದೆ.
-ರಾಹುಲ್ ಆರ್. ಸುವರ್ಣ ಎಂಜಿಎಂ, ಉಡುಪಿ