ಬಾತುಕೋಳಿಯ ಕೋರಿಕೆಯಂತೆ ದೇವರು ಅದರ ಬಣ್ಣ ಬದಲಾಯಿಸಲಿಲ್ಲ. ಇತ್ತ ಬಾತುಕೋಳಿಗೆ ನಿಂದನೆ ತಪ್ಪಲಿಲ್ಲ.
ಒಂದು ದಿನ ಬಾತುಕೋಳಿ ಊರಿಂದ ಓಡಿಹೋಯಿತು. ಆ ಊರಿನ ಸಹವಾಸವೇ ಅದಕ್ಕೆ ಬೇಡವಾಗಿತ್ತು.
ಒಂದೂರಲ್ಲಿ ಬಾತುಕೋಳಿಯೊಂದು ವಾಸವಿತ್ತು. ಅದರ ಮೈಬಣ್ಣ ಕಪ್ಪಿನಿಂದ ಕೂಡಿತ್ತು. ಅದನ್ನು ಎಲ್ಲರೂ ಅಪಹಾಸ್ಯಗೈಯುತ್ತಿದ್ದರು. ತನ್ನ ಬಣ್ಣ ಚೆನ್ನಾಗಿಲ್ಲವೆಂದು ಬಾತುಕೋಳಿ ನೊಂದುಕೊಂಡಿತ್ತು. ಪ್ರತಿದಿನ ದೇವರಲ್ಲಿ ತನ್ನ ಕಪ್ಪುಬಣ್ಣ ಹೋಗಲಾಡಿಸಿ ಮಿಕ್ಕ ಬಾತುಕೋಳಿಗಳಿಗಿರುವಂತೆ ಬಿಳಿ ಬಣ್ಣವನ್ನು ದಯಪಾಲಿಸುವಂತೆ ಬೇಡಿಕೊಳ್ಳುತ್ತಿತ್ತು. ಅದಕ್ಕೂ ಅಪಹಾಸ್ಯ, ನಿಂದನೆಗೆ ಒಳಗಾಗಿ ಸಾಕು ಸಾಕಾಗಿತ್ತು. ದೇವರು ಬಣ್ಣ ಬದಲಾಯಿಸಲಿಲ್ಲ. ಇತ್ತ ಬಾತುಕೋಳಿಗೆ ನಿಂದನೆ ತಪ್ಪಲಿಲ್ಲ.
ಒಂದು ದಿನ ಬಾತುಕೋಳಿ ಊರಿಂದ ಓಡಿಹೋಯಿತು. ಆ ಊರಿನ ಸಹವಾಸವೇ ಅದಕ್ಕೆ ಬೇಡವಾಗಿತ್ತು. ಕಾಡನ್ನು ದಾಟಿ ಮುನ್ನಡೆದ ಬಾತುಕೋಳಿಗೆ ಒಂದು ಸರೋವರ ಎದುರಾಯಿತು. ಸುಂದರವಾಗಿದ್ದ ಆ ಸರೋವರದ ನೀರು ಶುಭ್ರವಾಗಿತ್ತು. ಸ್ವರ್ಗದಂತಿದ್ದ ಆ ಪ್ರದೇಶದಲ್ಲಿ ನೆಲೆಯೂರಲು ಬಾತುಕೋಳಿ ಮನಸ್ಸು ಮಾಡಿತು.
ಸ್ವಚ್ಚಂದವಾಗಿ ಈಜಾಡುತ್ತಿದ್ದ ಬಾತುಕೋಳಿಗೆ ಸುತ್ತಲೂ ಯಾವ ಪ್ರಾಣಿ ಪಕ್ಷಿಗಳೂ ಕಾಣಲಿಲ್ಲ. ಯಾರೂ ಇಲ್ಲವೆಂದು ಅದು ಮನಸ್ಸಿನಲ್ಲಿ ಖುಷಿ ಪಟ್ಟಿತು. ಆದರೆ ಸ್ವಲ್ಪ ಹೊತ್ತಿನಲ್ಲಿಯೇ ಸರೋವರ ಸುತ್ತಮುತ್ತಲೂ ಪ್ರಾಣಿ ಪಕ್ಷಿಗಳು ಕಾಣಿಸಿಕೊಂಡವು. ಹಂಸಗಳು ಸ್ನಾನ ಮಾಡಲು ನೀರಿಗಿಳಿದವು. ಅವೆಲ್ಲವೂ ಸುಂದರವಾಗಿದ್ದವು. ಇದನ್ನು ಕಂಡು ಕರಿ ಬಾತುಕೋಳಿಗೆ ಮತ್ತೆ ಖೇದವಾಯಿತು. ಹಿಂದಿನ ಊರಿನ ಘಟನೆಯೇ ಇಲ್ಲೂ ಮರುಕಳಿಸುವುದೆಂದು ಅಲ್ಲಿಂದ ಜಾಗ ಖಾಲಿ ಮಾಡಲು ನಿರ್ಧರಿಸಿತು.
ಅಷ್ಟರಲ್ಲಿ ಒಂದು ಅಚ್ಚರಿ ಘಟಿಸಿತು. ಸುಂದರವಾಗಿದ್ದ ಹಂಸಗಳು ಬಾತುಕೋಳಿಯನ್ನು ಸುತ್ತುವರಿದವು. ಅವು ಬಾತುಕೋಳಿಯ ಸೌಂದರ್ಯವನ್ನು ಹೊಗಳತೊಡಗಿದವು. ಬಾತುಕೋಳಿಗೆ ಅಚ್ಚರಿಯೋ ಅಚ್ಚರಿ. ಇಷ್ಟು ದಿನ ತಾನು ಕುರೂಪಿ ಎಂದುಕೊಂಡಿದ್ದ ಬಾತು ಕೋಳಿಯ ಮನೋಭಾವ ಅಂದು ಬದಲಾಯಿತು. ತಾನು ಕುರೂಪಿಯಲ್ಲ ಎನ್ನುವುದು ಅದಕ್ಕೆ ಅರ್ಥವಾಯಿತು. ಜಗತ್ತನ್ನು ನಾವು ಯಾವ ರೀತಿ ನೋಡುತ್ತೇವೆ ಅದೇ ರೀತಿ ಕಾಣಿಸುತ್ತದೆ. ಸುಂದರವೆಂದು ನೋಡಿದರೆ ಜಗತ್ತು ಸುಂದರ, ಕೆಟ್ಟದ್ದೆಂದು ನೋಡಿದರೆ ಜಗತ್ತೂ ಕೆಟ್ಟದಾಗಿ ಕಾಣುವುದು. ಸೌಂದರ್ಯ ನಿಜಕ್ಕೂ ಇರುವುದು ಅಂತರಂಗದಲ್ಲಿ ಎನ್ನುವುದು ತಿಳಿಯಿತು.
ಪುಷ್ಪಾ