ದುಬೈ: ವಿವಿಧ ದೇಶಗಳು ಭಾಗವಹಿಸುವ ಮತ್ತು ಆರು ತಿಂಗಳುಗಳ ಸುದೀರ್ಘ ಕಾಲ ನಡೆಯುವ ಜನಪ್ರಿಯ ಜಾಗತಿಕ ಪ್ರಸಿದ್ಧಿಯನ್ನು ಪಡೆದಿರುವ ‘ದುಬೈ ಎಕ್ಸ್ ಪೋ’ವನ್ನು ಒಂದು ವರ್ಷಗಳ ಕಾಲ ಮುಂದೂಡಲು ಇಂದು ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಇದೇ ಅಕ್ಟೋಬರ್ ತಿಂಗಳಿನಲ್ಲಿ ನಡೆಯಬೇಕಿದ್ದ ಈ ಎಕ್ಸ್ ಪೋವನ್ನು ಮುಂದಿನ ವರ್ಷದ ಅಕ್ಟೋಬರ್ 1ರಿಂದ 2022ರ ಮಾರ್ಚ್ 31ರವರೆಗೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕೋವಿಡ್ 19 ವೈರಸ್ ಕಾಟಕ್ಕೆ ಜಗತ್ತಿನ ಪ್ರಮುಖ ದೇಶಗಳ ಸಹಿತ ಬಹುತೇಕ ಎಲ್ಲಾ ರಾಷ್ಟ್ರಗಳು ತತ್ತರಿಸಿರುವ ಸಂದರ್ಭದಲ್ಲಿ ಈ ಎಕ್ಸ್ ಪೋ ನಡೆಸುವುದು ಕಷ್ಟಸಾಧ್ಯ ಎಂಬ ಅಭಿಪ್ರಾಯ ಇಂದು ನಡೆದ ಸದಸ್ಯ ರಾಷ್ಟ್ರಗಳ ವ್ಯಕ್ತವಾಯಿತು ಮಾತ್ರವಲ್ಲದೇ ಬ್ಯೂರೋ ಇಂಟರ್ನ್ಯಾಷನಲ್ ದೆಸ್ ಎಕ್ಸ್ ಪೊಸಿಷನ್ಸ್ (BIE) ಕೂಟದ ಸದಸ್ಯರಲ್ಲಿ ಮೂರನೇ ಒಂದು ಬಹುಮತದಿಂದ ಈ ಜಾಗತಿಕ ಮೆಗಾ ಎಕ್ಸ್ ಪೋವನ್ನು ಮುಂದಿನ ವರ್ಷಕ್ಕೆ ಮುಂದೂಡುವ ತೀರ್ಮಾನಕ್ಕೆ ಬರಲಾಯಿತು.
ಟೋಕಿಯೋ ಒಲಂಪಿಕ್ಸ್ 2020 ಜಾಗತಿಕ ಕ್ರೀಡಾಕೂಟ ಕೋವಿಡ್ ಕಾಟದಿಂದ ಮುಂದೂಡಿಕೆಯಾದ ಬಳಿಕ ವೈರಾಣು ಕಾಟದ ಕಾರಣಕ್ಕಾಗಿ ಮುಂದೂಡಲ್ಪಟುತ್ತಿರುವ ಪ್ರಮುಖ ಜಾಗತಿಕ ಕೂಟ ಇದಾಗಿದೆ.
ದುಬೈ ಎಕ್ಸ್ ಪೋ 2020ಯನ್ನು ಮುಂದೂಡುವ BIE ಸದಸ್ಯ ರಾಷ್ಟ್ರಗಳ ನಿರ್ಧಾರವನ್ನು ದುಬೈ ಏರ್ ಪೋರ್ಟ್ ಅಧ್ಯಕ್ಷರಾಗಿರುವ ಹಾಗೂ ಎಮಿರೇಟ್ಸ್ ಗ್ರೂಪ್ಸ್ ಸಿಇಒ ಆಗಿರುವ ಶೇಖ್ ಅಹಮ್ಮದ್ ಬಿನ್ ಸಯೀದ್ ಅಲ್ ಮಕ್ಟೌಮ್ ಅವರು ಸ್ವಾಗತಿಸಿದ್ದಾರೆ.
ಕೋವಿಡ್ ಬಳಿಕದ ಆರ್ಥಿಕ ಪರಿಸ್ಥಿತಿಯಲ್ಲಿ ಎಲ್ಲಾ ಸದಸ್ಯ ರಾಷ್ಟ್ರಗಳೂ ಸಶಕ್ತ ಆರ್ಥಿಕ ವ್ಯವಸ್ಥೆಗೆ ಮರಳುವ ನಿಟ್ಟಿನಲ್ಲಿ ಈ ಎಕ್ಸ್ ಪೋ ಸಹಕಾರಿಯಾಗಲಿದೆ ಎಂಬ ಆಶಯವನ್ನು ಶೇಖ್ ಅಹಮ್ಮದ್ ಅವರು ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದಾರೆ.
ಮಧ್ಯಪ್ರಾಚ್ಯ, ಆಫ್ರಿಕಾ ಮತ್ತು ದಕ್ಷಿಣ ಏಷ್ಯಾ ಭಾಗದಲ್ಲಿ ಇದೇ ಮೊದಲ ಬಾರಿಗೆ ಹಾಗೂ ಅರಬ್ ದೇಶಗಳಲ್ಲೇ ನಡೆಯಬೇಕಿದ್ದ ಬೃಹತ್ ಜಾಗತಿಕ ಮೇಳವೆಂಬ ಹೆಗ್ಗಳಿಕೆಗೆ ಈ ಎಕ್ಸ್ ಪೋ ಪಾತ್ರವಾಗಲಿತ್ತು. ಜಗತ್ತಿನ 192 ರಾಷ್ಟ್ರಗಳು, ಬಹುವಿಧ ವ್ಯವಹಾರ ಉದ್ದಿಮೆಗಳು ಮತ್ತು ಜಗತ್ತಿನ ಹೆಸರಾಂತ ಶಿಕ್ಷಣ ಸಂಸ್ಥೆಗಳು ಈ ಮೇಳದಲ್ಲಿ ಭಾಗವಹಿಸುತ್ತಿವೆ.