Advertisement
ಭಾರತದ ಹೊರಗೆ ಅತ್ಯಧಿಕ ಸಂಖ್ಯೆಯಲ್ಲಿ ಭಾರತೀಯರು ನೆಲೆಸಿರುವ ದೇಶ ಯು.ಎ.ಇ (ಅರಬ್ ಸಂಯುಕ್ತ ಸಂಸ್ಥಾನ). ಒಟ್ಟು 35 ಲಕ್ಷಕ್ಕೂ ಅಧಿಕ ಮಂದಿ ಅಲ್ಲಿ ಜೀವನ ಕಂಡುಕೊಂಡಿದ್ದಾರೆ. ಅದರಲ್ಲೂ ದುಬೈ ನಗರಿಯಲ್ಲಿ ಮೂಲ ನಿವಾಸಿಗಳ ಸಂಖ್ಯೆ ಕೇವಲ 15% ಅಷ್ಟೇ. ಉಳಿದವರಲ್ಲಿ ಶೇ. 40%ಗೂ ಹೆಚ್ಚು ಮಂದಿ ಭಾರತೀಯರಿದ್ದಾರೆ. ಹೀಗಾಗಿ, ದುಬೈ ತುಂಬಾ ಭಾರತೀಯರೇ ತುಂಬಿಕೊಂಡಿದ್ದಾರೆ ಎಂದು ದೂರುವ ಮೂಲ ನಿವಾಸಿಗಳ ಮಾತಲ್ಲಿ ಸತ್ಯಾಂಶವೂ ಇದೆ. ನಮ್ಮವರಲ್ಲಿ ಕೇರಳಿಗರದೇ ಸಿಂಹಪಾಲು! ಕರ್ನಾಟಕದ ಕರಾವಳಿ ಪ್ರಾಂತ್ಯ ಹಾಗೂ ಕೇರಳದ ಮನೆ ಮನೆಯಲ್ಲೂ ದುಬೈಗೆ ಹೋದವರು ಒಬ್ಬರಾದರೂ ಸಿಗುತ್ತಾರೆ ಎನ್ನುತ್ತಿದ್ದ ಕಾಲವೊಂದಿತ್ತು. ಹೈಸ್ಕೂಲೋ, ಪಿಯುಸಿಯೋ ಓದಿ ಪಾಸಾಗಿರಲಿ, ಇಲ್ಲದಿರಲಿ ದುಬೈಗೆ ಹೋಗಿಬಿಟ್ಟರೆ ಲೈಫ್ ಸೆಟಲ್ ಆದಂತೆ ಎನ್ನುತ್ತಿದ್ದ ಕಾಲವದು.
Related Articles
Advertisement
ಖರ್ಚು- ವೆಚ್ಚ!: ದುಬೈನಲ್ಲಿ ಆದಾಯ ತೆರಿಗೆ ಇಲ್ಲ! ಅಲ್ಲಿ ಪ್ರತಿಯೊಬ್ಬರು ಏನು ಸಂಪಾದಿಸುತ್ತಾರೋ ಅಷ್ಟೂ ಮೊತ್ತ ಅವರಿಗೆ ಸಿಗುತ್ತದೆ. ಆದರೆ ಬಿಲ್‌ನಲ್ಲಿ ಸರ್ವೀಸಸ್‌ಗೆಂದು 10% ವ್ಯಾಟ್‌ಅನ್ನು ವಿಧಿಸುತ್ತಾರೆ. ಇಂಜಿನಿಯರ್ ಒಬ್ಬ ಭಾರತದಲ್ಲಿ ಗಳಿಸುವುದಕ್ಕಿಂತ ಒಂದು ಅಥವಾ ಎರಡು ಪಟ್ಟು ಹೆಚ್ಚು ಸಂಬಳ ಪಡೆಯುತ್ತಾನೆ. ಅವನು ತೆಗೆದುಕೊಳ್ಳುವ ಸಂಬಳದಲ್ಲಿ ಅರ್ಧದಷ್ಟು ಮನೆ ಬಾಡಿಗೆಗೆ ಹೋಗಿರುತ್ತದೆ, ಇನ್ನು ಮಕ್ಕಳು ಇದ್ದರೆ ಅವರುಗಳಿಗೆ ಶಾಲಾ ಖರ್ಚು, ದಿನಸಿ ಖರ್ಚು ಎಂದು ದುಡಿದ ಹಣ ಹೆಚ್ಚು ಕಡಿಮೆ ಇಲ್ಲಿಯೇ ಮುಗಿದು ಹೋಗಿರುತ್ತದೆ.
ಇನ್ನು ಡಾಕ್ಟರ್‌ಗಳಿಗೂ ವ್ಯವಸ್ಥಿತ ಸಂಬಳವಿದೆ. ದುಡಿದದ್ದನ್ನು ಉಳಿಸಬೇಕೆಂದರೆ ಹಲವಾರು ಯೋಜನೆಗಳನ್ನು ಜಾರಿಗೆ ತರಬೇಕಾಗುತ್ತದೆ. ಐಷಾರಾಮಿ ಜೀವನಕ್ಕೆ ಕಡಿವಾಣ ಖಂಡಿತಾ ಬೇಕಾಗುತ್ತೆ. ದುಬೈನಲ್ಲಿ ನೆಲೆಸಿದ ಭಾರತೀಯರಿಗೆ ಹೆಚ್ಚಿನ ಖರ್ಚು ಎಂದರೆ ಊರಿಗೆ ಹಿಂತಿರುಗಲು ತಗುಲುವ ವಿಮಾನ ಪ್ರಯಾಣದ ಖರ್ಚು. ಕೆಲವರಂತೂ 5- 6 ವರ್ಷವಾದರೂ ಊರಿನತ್ತ ಮುಖ ಮಾಡುವುದಿಲ್ಲ, ಕಾರಣ, ಮನೆ- ಸಂಸಾರದ ಜವಾಬ್ದಾರಿಗಳು. ಪ್ರತಿ ತಿಂಗಳು ಮನೆಗೆ ಸುಮಾರು 10 ಸಾವಿರ ಕಳುಹಿಸುತ್ತಿದ್ದರೆ ಕೂಡಿಡಲು 5 ಸಾವಿರ ಮಾಡುತ್ತಾನೆ.
2 ವರ್ಷಕ್ಕೆ ಮನೆಗೆ ಹೋಗುತ್ತಾನೆ ಎಂದರೆ ಅಕ್ಕ, ತಮ್ಮ, ಅಪ್ಪ, ಅಮ್ಮ, ಹೆಂಡತಿ, ಸಂಬಂಧಿಕರು ಎಂದು ಎಲ್ಲರಿಗೂ ಉಡುಗೊರೆಯನ್ನು ಕೊಂಡುಕೊಳ್ಳಬೇಕಾಗುತ್ತದೆ. ಉಡುಗೊರೆ ಎಂದರೆ ಹತ್ತಿರದವರಗೆ ಚಿನ್ನ, ಮಿಕ್ಕವರಿಗೆ ಬಟ್ಟೆ-ಬರೆ, ಎಲೆಕ್ಟ್ರಾನಿಕ್ಸ್ ಸಾಮಗ್ರಿ ಹೀಗೆ ಹತ್ತು ಹಲವು. ವಿಮಾನಕ್ಕೆ, 25 ರಿಂದ 30 ಸಾವಿರ ಖರ್ಚು ತಗುಲುತ್ತದೆ. ಹೀಗಾಗಿ ಅದಕ್ಕಾಗಿ ವರ್ಷಗಳಿಂದ ತಯಾರಿ ಮಾಡಿಕೊಳ್ಳಬೇಕಾಗುತ್ತದೆ. ಆಲ್ಕೊಹಾಲ್ ಸೇವನೆ ಅಲ್ಲಿ ನಿಷಿದ್ಧವಾಗಿರುವುದರಿಂದ, ಕೇವಲ ಆಯ್ದ ಸ್ಥಳಗಳಲ್ಲಿ ಮಾತ್ರವೇ ಸಿಗುತ್ತದೆ. ಹೀಗಾಗಿ ಕುಡಿತದ ಚಟಕ್ಕೆ ದಾಸರಾಗುವ ಅಪಾಯವೇ ಇಲ್ಲ.
ಗಲ್ಫ್ ದೇಶಗಳ ಸಾಮಾಜಿಕ ವ್ಯವಸ್ಥೆ1. ಕೆಳ ವರ್ಗ: ಈ ವರ್ಗದ ಕಾರ್ಮಿಕರು ಮೂವತ್ತರಿಂದ ನಲವತ್ತು ಸಾವಿರದವರೆಗೆ ಸಂಬಳ ಪಡೆಯುತ್ತಾರೆ. ಗಲ್ಫ್ನಲ್ಲಿ ಅದುವೇ ತಳಮಟ್ಟ! ಈ ವರ್ಗದವರ ಸಂಬಳದದಲ್ಲಿ ಹೆಚ್ಚಿನ ಮೊತ್ತ ವಸತಿ, ಸಾರಿಗೆ, ಆಹಾರ, ಫೋನ್ ಬಿಲ್‌ನಲ್ಲೇ ತೀರುತ್ತದೆ. ಈ ವರ್ಗದವರಲ್ಲಿ ಭಾರತೀಯರು, ಫಿಲಿಪೈನ್ಸ್, ಪಾಕಿಸ್ತಾನಿಯರು, ಬಾಂಗ್ಲಾದೇಶೀಯರು, ಶ್ರೀಲಂಕನ್ನರು, ಈಜಿಪ್ಟಿಯನ್ನರು ಸೇರಿದ್ದಾರೆ. 2. ಮಧ್ಯಮ ವರ್ಗ: ಒಂದು ಲಕ್ಷದಿಂದ ಐದು ಲಕ್ಷದ ರೂ. ಗಳ ತನಕ ದುಡಿಯುವವರು ಈ ವರ್ಗದವರು. ನಮ್ಮಲ್ಲಿ ಅವರೇ ಶ್ರೀಮಂತ ವರ್ಗವೆಂದು ಕರೆಯಿಸಿಕೊಂಡರೆ ಗಲ್ಫ್ ರಾಷ್ಟ್ರಗಳಲ್ಲಿ ಅದು ಮಧ್ಯಮ ವರ್ಗ. ಈ ವರ್ಗದವರಲ್ಲಿ ಹೆಚ್ಚಾಗಿ ಕಂಡುಬರುವವರು ಭಾರತೀಯರು, ಅರಬ್ಬರು, ಯುರೋಪಿಯನ್ನರು ಮತ್ತು ಅಮೆರಿಕನ್ನರು. ಈ ವರ್ಗದವರಿಗೆ ಅಲ್ಲಿನ ಸಮಾಜ ವ್ಯವಸ್ಥೆಯಲ್ಲಿ ಹಲವು ಸವಲತ್ತುಗಳಿವೆ. 3. ಉನ್ನತ ವರ್ಗ: ಆರೂವರೆ ಲಕ್ಷದಿಂದ 50 ಲಕ್ಷ ರೂ. ಗಳ ತನಕ ದುಡಿಯುವ ವರ್ಗ ಇದಾಗಿರುವುದರಿಂದ ಇಲ್ಲಿ ಸ್ಥಾನ ಪಡೆದವರು ಶ್ರೀಮಂತರು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇವರಲ್ಲಿ ಹೆಚ್ಚಿನವರು ಉದ್ಯಮಪತಿಗಳಿದ್ದಾರೆ. ಮಾಧ್ಯಮಗಳಲ್ಲಿ ಅತ್ಯಾಕರ್ಷಕವಾಗಿ ತೋರಿಸುವ ದುಬೈನ ಐಷಾರಾಮಿ ಬದುಕನ್ನು ಬದುಕುತ್ತಿರುವವರು ಈ ವರ್ಗಕ್ಕೆ ಸೇರಿದವರು. ದುಬೈ ಎನ್ನುವುದು ಕಾಸಿಗೆ ತಕ್ಕ ಕಜ್ಜಾಯವನ್ನು ನೀಡುವ ನಗರಿ. ಕಡಿಮೆ ಬೆಲೆಯ ಕಬೂಸ್ (ನಾಲ್ಕು ಕಬೂಸ್‌ಗೆ 30 ರುಪಾಯಿ) ಮತ್ತು ಒಂದು ಪಾಕೆಟ್ ಮೊಸರಿಗೆ 25 ರೂ ಕೊಟ್ಟು ದಿನದ ಊಟ ಮುಗಿಸಿ, ಮಿಗಿಸಿದ ಹಣದಲ್ಲಿ ಮಂಗಳೂರಿನಲ್ಲಿ ಮನೆ ಕಟ್ಟಿದವರೂ ಇದ್ದಾರೆ. ದುಬೈನ ಐಷಾರಾಮಕ್ಕೆ ಮರುಳಾಗಿ ಹಣ ಕಳೆದುಕೊಂಡವರೂ ಇದ್ದಾರೆ. ಬಂದ ಶುರುವಿನ 3- 4 ವರ್ಷವಂತೂ ಯಾವ ವ್ಯಕ್ತಿ ಯಾವುದೇ ದರ್ಜೆಯ ಕೆಲಸವಾಗಿರಲಿ, ಹಣ ಕೂಡಿಡುವುದು ಕಷ್ಟ ಸಾಧ್ಯ. ಇಲ್ಲಿನ ಜೀವನಕ್ಕೆ ಹೊಂದಿಕೊಂಡು, ಖರ್ಚು ವೆಚ್ಚ ತೀರಿಸಿಕೊಂಡು ಉಳಿತಾಯದತ್ತ ಮುಖ ಮಾಡಬೇಕೆಂದರೆ ಕನಿಷ್ಠ 3 ವರ್ಷಗಳೇ ಬೇಕಾಗುತ್ತದೆ. ಇವೆಲ್ಲಾ ಸವಾಲುಗಳನ್ನು ಮೆಟ್ಟಿ ನಿಲ್ಲುತ್ತೇನೆ ಎನ್ನುವವರಿಗೆ ದುಬೈ ಎನ್ನುವುದು ಕನಸಲ್ಲ, ಬದುಕಿನ ಆಶಾಕಿರಣ. “ಬೆಡ್ ಸ್ಪೇಸ್’ ಎಂಬ ಉಳಿತಾಯದ ವಸತಿ: ಕೆಲವೊಂದು ಕಂಪನಿಗಳಲ್ಲಿ ಉಳಿಯಲು ಉಚಿತ ವಸತಿ, ಊಟವನ್ನು ಕೊಡುತ್ತಾರೆ, ಆದರೆ ಸಂಬಳ ಮಾತ್ರ ತೀರಾ ಕಡಿಮೆಯಿರುತ್ತದೆ. ತಿಂಗಳಿಗೆ 30,000 ರೂ. ದುಡಿಯುವ ವ್ಯಕ್ತಿ, ಊಟ ಮತ್ತು ವಸತಿ ಖರ್ಚು ಹೊರತುಪಡಿಸಿ, ಸುಮಾರು 20,000ವನ್ನಾದರೂ ಉಳಿಸಬಹುದು. ಸಾಮಾನ್ಯವಾಗಿ ಊಟ- ವಸತಿ ಮಾತ್ರದಿಂದಲೇ ಹೆಚ್ಚಿನ ಪ್ರಮಾಣ ದುಡ್ಡನ್ನು ಉಳಿಸಬಹುದಾದ್ದರಿಂದ ಹೆಚ್ಚಿನವರು ಕಂಪನಿಯನ್ನು ಅದಕ್ಕಾಗಿ ಅವಲಂಬಿಸುವುದಿಲ್ಲ. ಮೂರು ನಾಲ್ಕು ಜನರು ಕೂಡಿ ಒಂದು ಮನೆಯನ್ನು ಬಾಡಿಗೆಗೆ ಪಡೆಯುತ್ತಾರೆ. ಅಲ್ಲಿ ಅವರು ಸ್ವಂತ ಅಡುಗೆಯನ್ನಾದರೂ ಮಾಡಿಕೊಳ್ಳಬಹುದು ಇಲ್ಲವೇ ಹೊರಗೆ ಕಡಿಮೆ ಬೆಲೆಯ ರೆಸ್ಟೋರೆಂಟಿನಲ್ಲಿ ಊಟ ಮಾಡಬಹುದು. ಪಿ.ಜಿ ಥರದ ಈ ವ್ಯವಸ್ಥೆಯನ್ನು “ಬೆಡ್ ಸ್ಪೇಸ್’ ಎಂದು ಕರೆಯುತ್ತಾರೆ. ಮನೆ ಬಾಡಿಗೆ ಸುಮಾರು 25 ಸಾವಿರವಿರುತ್ತದೆ (ಒಂದೊಂದು ಏರಿಯಾಗಳಲ್ಲಿ ಒಂದೊಂದು ಬೆಲೆ) ಎಂದರೆ ಅದನ್ನು ನಾಲ್ಕು ಜನರೂ ಸಮನಾಗಿ ಹಂಚಿಕೊಳ್ಳುತ್ತಾರೆ. ಇದರಲ್ಲಿ ಒಬ್ಬ ವ್ಯಕ್ತಿಗೆ 6000 ದಿಂದ 7000 ರೂ. ಬಾಡಿಗೆಗೆ ಹೋಗುತ್ತದೆ. ಇನ್ನು ಊಟಕ್ಕೆ ಹೋಟಲ್ ನಂಬಿ ಕುಳಿತರೆ ತಿಂಗಳಿಗೆ 5000, ಇಲ್ಲವೇ ಸ್ನೇಹಿತರೆಲ್ಲರೂ ಕೂಡಿ ಮನೆ ಸಾಮಗ್ರಿಗಳನ್ನೆಲ್ಲ ತಂದು ಅಡುಗೆ ಮಾಡಿಕೊಂಡರೆ ಅಲ್ಪಸ್ವಲ್ಪ ಉಳಿಸಬಹುದು. ಗಲ್ಫ್ ದೇಶಗಳಲ್ಲಿ ನೆಲೆ ನಿಲ್ಲುವ ಮುನ್ನದ ಖರ್ಚು: ವಿಸಿಟ್ ವೀಸಾದಿಂದ ವರ್ಕ್ ವೀಸಾಗೆ ಬದಲಾಯಿಸಿಕೊಳ್ಳಲು ಶುಲ್ಕ, ವೈದ್ಯಕೀಯ ಪರೀಕ್ಷಾ ವೆಚ್ಚ, ಗುರುತಿನ ಚೀಟಿ (ಸಿವಿಲ್ ಐಡಿ) ಶುಲ್ಕ, ಇನ್ಷೊರೆನ್ಸ್ ಮೊತ್ತ- ಇವಿಷ್ಟನ್ನು ಅಭ್ಯರ್ಥಿ ಭರಿಸಬೇಕು. ಕೆಲವೊಮ್ಮೆ ಈ ಖರ್ಚನ್ನು ಉದ್ಯೋಗದಾತ ಸಂಸ್ಥೆಯೇ ಭರಿಸುವುದುಂಟು. ಗಲ್ಫ್ ರಾಷ್ಟ್ರಗಳಿಗೆ ತೆರಳುವ ಮುನ್ನ ಭಾರತದಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸಬೇಕು. ತಪಾಸಣಾ ಕೇಂದ್ರ ಕೆಲವೆಡೆ ಮಾತ್ರ ಇವೆ. ವೈದ್ಯಕೀಯ ಪರೀಕ್ಷೆ ವೆಚ್ಚ ಭರಿಸಬೇಕಾಗುತ್ತದೆ. ಭಾರತದ ಕುವೈತ್ embassy ನಲ್ಲಿ ವೀಸಾ ನೋಂದಾಯಿಸಿ ಕುವೈತಿಗೆ ಬರಬೇಕು. ಈ ಎಲ್ಲಾ ವೆಚ್ಚ ಸುಮಾರು 25,000ರೂ. ಆಗಬಹುದು. ಅಲ್ಲಿಗೆ ಬಂದ ಮೇಲೆ ಒಂದು ವರ್ಷಕ್ಕೆ ರೆಸಿಡೆನ್ಸಿ ಪರ್ಮಿಟ್ ಮಾಡಿಸಬೇಕು. ಇದಕ್ಕೆ ಸುಮಾರು 25,000 ರೂ. ಆಗಬಹುದು. ಈ ಮೊತ್ತವನ್ನು ಕಂಪನಿ ಭರಿಸುತ್ತದೆ. ಆಗ, ಕನಿಷ್ಠ ಒಂದು ವರ್ಷ ನಾವು ಆ ಕಂಪನಿಯಲ್ಲಿ ಕೆಲಸ ಮಾಡಬೇಕು. ಒಂದು ವೇಳೆ ಒಂದು ವರ್ಷದ ಒಳಗೆ ಕೆಲಸ ಬಿಟ್ಟರೆ ಆ ವೆಚ್ಚ ನಾವು ಭರಿಸಬೇಕಾಗುತ್ತದೆ. ಕಾರ್ಮಿಕ ನೀತಿ ಅಲ್ಲಿ ಕಟ್ಟುನಿಟ್ಟಾಗಿರುವುದರ ದ್ಯೋತಕವಿದು. * ಸುಗುಣಾ ಮಹೇಶ್, ಕುವೈತ್