ತಿ.ನರಸೀಪುರ: ಸಂವಿಧಾನದ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಜವಾಬ್ದಾರಿಯುತ ಓರ್ವ ಜಪ್ರತಿನಿಧಿಯಾಗಿ ಶಾಸನ ಸಭೆಗೆ ಆಯ್ಕೆಗೊಂಡು ಸಂವಿಧಾನದ ಬಗ್ಗೆ ಹಗುರವಾಗಿ ಮಾತನಾಡಿರುವ ವಿಧಾನ ಪರಿಷತ್ ಮಾಜಿ ಸದಸ್ಯ ಗೋ.ಮಧುಸೂದನ್‌ರನ್ನು ದೇಶದಿಂದಲೇ ಗಡಿಪಾರು ಮಾಡುವಂತೆ ಆಗ್ರಹಿಸಿ ತಾಲೂಕು ಕಚೇರಿ ಮುಂಭಾಗ ಮಂಗಳವಾರ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಹಾಗೂ ಮುಖಂಡರು ಪ್ರತಿಭಟನೆ ನಡೆಸಿದರು.
ಪಟ್ಟಣದ ತಾಲೂಕು ಕಚೇರಿ ಮಿನಿ ವಿಧಾನಸೌಧದ ಮುಂಭಾಗ ಜಮಾವಣೆಗೊಂಡ ರಾಜ್ಯ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಹಾಗೂ ಮುಖಂಡರು, ಸಂವಿಧಾನಿಕ ಹುದ್ದೆಯಾದ ವಿಧಾನ ಪರಿಷತ್ ಸದಸ್ಯತ್ವ ಪಡೆದುಕೊಂಡು ಫಲಾನುಭವಿಯಾಗಿರುವ ಮಾಜಿ ಸದಸ್ಯ ಗೋ.ಮಧುಸೂದನ ದೃಶ್ಯಮಾಧ್ಯಮದ ಸಂವಾದದಲ್ಲಿ ಸಂವಿಧಾನದ ಬಗ್ಗೆ ತುತ್ಛವಾಗಿ ಮಾತನಾಡಿರುವುದು ಸರಿಯಲ್ಲ.
ಆತನ ವಿರುದ್ಧ ಹಾಗೂ ಬಿಜೆಪಿ ಕೇಂದ್ರ ಸರ್ಕಾರದ ವಿರುದ್ಧವೂ ಧಿಕ್ಕಾರ ಘೋಷಣೆ ಕೂಗುತ್ತಾ ಪ್ರತಿಭಟನಾ ಧರಣಿ ನಡೆಸಿದರು. ಪ್ರತಿಭಟನೆ ನೇತೃತ್ವವನ್ನು ವಹಿಸಿದ್ದ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಆಲಗೂಡು ಚಂದ್ರಶೇಖರ, ಯಾವಾಗಲೂ ವಿವಾದಾತ್ಮಕ ಹೇಳಿಕೆ ಕೊಡುವ ಮೂಲಕ ಗೋ.ಮಧುಸೂದನ್ ಸಾಮಾಜಿಕ ಸಾಮರಸ್ಯ ಕದಡುತ್ತಿದ್ದಾರೆ.
ದಲಿತರು ಸಂವಿಧಾನವನ್ನು ಒಪ್ಪುವುದಿಲ್ಲ ಎನ್ನುವ ಮೂಲಕ ದೇಶದ ಒಕ್ಕೂಟದ ವ್ಯವಸ್ಥೆಗೆ ಧಕ್ಕೆ ತರುವ ಮಾತನ್ನಾಡಿದ್ದಾರೆ. ಇಂತಹ ಕೋಮುವಾದಿಯನ್ನು ದೇಶದಿಂದಲೇ ಗಡಿಪಾರು ಮಾಡಬೇಕು. ಸಂವಿಧಾನಕ್ಕೆ ಅಪಚಾರ ಮಾಡಿದ್ದರಿಂದ ಮಾಜಿ ಶಾಸಕರಿಗೆ ನೀಡುವ ಸರ್ಕಾರಿ ಸವಲತ್ತುಗಳನ್ನು ರಾಜ್ಯ ಸರ್ಕಾರ ಹಿಂಪಡೆದುಕೊಂಡು ಎಸ್ಸಿ, ಎಸ್ಟಿ ದೌರ್ಜನ್ಯ ಕಾಯ್ದೆಯಡಿ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ದಸಂಸ ತಾಲೂಕು ಸಂಘಟನಾ ಸಂಚಾಲಕ ಯರಗನಹಳ್ಳಿ ಸುರೇಶ, ವಾಟಾಳು ನಾಗರಾಜು, ಮುಖಂಡರಾದ ಸೋಸಲೆ ಜಿ.ದೇವರಾಜು, ಟಿ.ಜಯರಾಮು, ರಾಜಣ್ಣ, ಮಹದೇವಸ್ವಾಮಿ, ಮಾದಿಗಹಳ್ಳಿ ರಾಮು, ಮಹೇಶಪ್ರಭು, ಬಸವರಾಜು, ಹೆಮ್ಮಿಗೆ ಶಿವಣ್ಣ, ಚಂದ್ರಪ್ಪ, ಸಚಿನ್, ರಾಘವೇಂದ್ರ, ಸಿದ್ದಾರ್ಥ, ದಿನೇಶ ಇದ್ದರು.