ನರೇಗಲ್ಲ: ಮುಂಗಾರು ವೈಫಲ್ಯದಿಂದ ಸಂಕಷ್ಟದ ಸ್ಥಿತಿಯಲ್ಲಿರುವ ಹೋಬಳಿ ಅನ್ನದಾತರಿಗೆ ಮತ್ತೊಂ ದು ಸಂಕಷ್ಟ ಎದುರಾಗಿದೆ. ಮಳೆ ಅಭಾವದಿಂದ ನರೇಗಲ್ಲ ಹೋಬಳಿ ವ್ಯಾಪ್ತಿಯಲ್ಲಿ ಶೇ. 75ಕ್ಕೂ ಹೆಚ್ಚು ಭೂಮಿಯಲ್ಲಿ ಹಿಂಗಾರು ಬಿತ್ತನೆಯಾಗಿಲ್ಲ. ಭೂಮಿಯಲ್ಲಿ ಅಲ್ಪಸ್ವಲ್ಪ ಬಿತ್ತನೆಯಾಗಿದ್ದರೂ ತೇವಾಂಶದ ಕೊರತೆಯಿಂದ ಬಿತ್ತಿದ ಬೆಳೆಗಳೆಲ್ಲ ನಾಟಿ ಹಂತದಲ್ಲಿಯೇ ಬಿಸಿಲಿನ ಧಗೆಗೆ ಬಾಡಲಾರಂಭಿಸಿವೆ.
ಹಿಂಗಾರು ಹಂಗಾಮಾದರೂ ಒಂದಿಷ್ಟು ಕೈ ಹಿಡಿದೀತು ಎಂಬ ನಿರೀಕ್ಷೆ ರೈತರದಾಗಿತ್ತು. ಹಿಂಗಾರು ಮಳೆಗಳೆಲ್ಲವೂ ಅವಕೃಪೆ ತೋರಿದ ಕಾರಣ ಪ್ರಸಕ್ತ ಕೃಷಿ ಚಟುವಟಿಕೆಗಳು ಸ್ತಬ್ಧಗೊಂಡಿವೆ. ಪ್ರಮುಖ ಮಳೆಗಳಾದ ಹುಬ್ಬೆ, ಉತ್ತರೆ, ಹಸ್ತ, ಚಿತ್ತಿ, ಸ್ವಾತಿ ಮಳೆಗಳು ಸಂಪೂರ್ಣ ಕೈಕೊಟ್ಟಿದ್ದರಿಂದ ಬೀಜ, ಗೊಬ್ಬರಕ್ಕೆ ಖರ್ಚು ಮಾಡಿ ಬಿತ್ತನೆ ಮಾಡುವುದರಲ್ಲಿ ಅರ್ಥವೇ ಇಲ್ಲವೆಂದು ಬಹುತೇಕ ರೈತರು ಬಿತ್ತನೆ ಮಾಡುವ ಗೋಜಿಗೆ ಹೋಗಲಿಲ್ಲ. ಮುಂದೆ ಮಳೆಯಾಗಬಹುದು ಎಂಬ ಆಶಾಭಾವನೆಯಿಂದ ಅಲ್ಪಸ್ವಲ್ಪ ರೈತರು ಬಿತ್ತನೆ ಮಾಡಿದರಾದರೂ ಮಳೆಯಾಗದ ಕಾರಣ ಭೂಮಿಯಲ್ಲಿ ತೇವಾಂಶದ ಕೊರತೆಯಾಗಿ ಬಿತ್ತಿದ ಬೆಳೆಗಳೆಲ್ಲ ಬಾಡಲಾರಂಭಿಸಿವೆ.
23,500 ಸಾವಿರ ಹೆಕ್ಟೇರ್ ಬಿತ್ತನೆ: ನರೇಗಲ್ಲ ಹೋಬಳಿ ವ್ಯಾಪ್ತಿಯಲ್ಲಿ 32 ಸಾವಿರ ಹೆಕ್ಟೇರ್ ಒಣಬೇಸಾಯದ ಹಿಂಗಾರು ಬಿತ್ತನೆಗೆ ಗುರಿ ಹೊಂದಲಾಗಿತ್ತು. ಆದರೆ, ಇದುವರೆಗೂ ಬಿತ್ತನೆಯಾದ ಕ್ಷೇತ್ರ 23,500 ಸಾವಿರ ಹೆಕ್ಟೇರ್ ಎಂದು ಕೃಷಿ ಇಲಾಖೆ ಮೂಲಗಳು ಹೇಳಿವೆ. ವಾಸ್ತವಾಗಿ ಈ ಪ್ರಮಾಣದ ಬಿತ್ತನೆಯಾಗಿಲ್ಲ ಎಂಬುದು ರೈತರ ಅಭಿಪ್ರಾಯವಾಗಿದೆ. ಬಿತ್ತನೆಯಾದ 23,500 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ 5 ಸಾವಿರ ಹೆಕ್ಟೇರ್ ಜೋಳ, 18 ಸಾವಿರ ಹೆಕ್ಟೇರ್ ಕಡಲೆ, 500 ಹೆಕ್ಟೇರ್ ಕ್ಷೇತ್ರದಲ್ಲಿ ಗೋವಿನ ಜೋಳ, ಸೂರ್ಯಕಾಂತಿ, ಕುಸುಬೆ ಸೇರಿದಂತೆ ಇತರೆ ಬೆಳೆ ಬಿತ್ತಲಾಗಿದೆ ಎಂದು ಕೃಷಿ ಅಧಿಕಾರಿ ಸಾವಿತ್ರಿ ಶಿವನಗೌಡ್ರ ತಿಳಿಸಿದ್ದಾರೆ. ಬಿತ್ತಿದ ಬೆಳೆಗಳೆಲ್ಲವೂ ಬಾಡುವ ಹಂತದಲ್ಲಿದ್ದರೂ ಮುಂದೆ ಮಳೆಯಾಗಬಹುದೆಂಬ ಭರವಸೆಯೊಂದಿಗೆ ಕೀಟ ನಿಯಂತ್ರಣಕ್ಕೆ ರೈತರು ಕ್ರಿಮಿನಾಶಕ ಔಷಧ ಸಿಂಪರಣೆ ಮಾಡುವಲ್ಲಿ ನಿರತರಾಗಿದ್ದಾರೆ. ಇದರಿಂದ ರೈತರ ಸಾಲದ ಮೊತ್ತ ಮತ್ತಷ್ಟು ಹೆಚ್ಚುತ್ತಲೇ ಇದೆ.
ಬಿತ್ತನೆಯಾದ ಬೆಳೆ ಉಳಿಯಬೇಕಾದರೆ ಕಾರ್ತಿಕ ಮಳೆ ಉತ್ತಮವಾಗಿ ಸುರಿದರೆ ಮಾತ್ರ ಹಿಂಗಾರು ಹಂಗಾಮು ಅಷ್ಟು ಇಷ್ಟು ಫಸಲು ನೀಡಲಿದೆ. ಇಲ್ಲದಿದ್ದರೆ ಬೆಳೆಗಳು ಹಾನಿಗೀಡಾಗಿ ಜನರಿಗೆ ಕಾಳು, ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿ ಕೃಷಿ ಕಾರ್ಮಿಕರು ಕೆಲಸ ಹುಡುಕಿಕೊಂಡು ಗುಳೆ ಹೋಗುವುದು ಅನಿವಾರ್ಯವಾಗಲಿದೆ.
ಬಿತ್ತನೆಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡಿದ ರೈತರ ಮುಖದಲ್ಲಿ ಚಿಂತೆಯ ಕಾರ್ಮೋಡಗಳು ಕವಿಯಲಾರಂಭಿಸಿವೆ. ಬಿತ್ತನೆ ಸಂದರ್ಭದಲ್ಲಿ ಅಲ್ಪಸ್ವಲ್ಪ ಮಳೆಯಾಗಿದ್ದರಿಂದ ಹಸಿಯಾಗಿದ್ದ ಭೂಮಿಯಲ್ಲಿ ಬೀಜಗಳು ಮೊಳಕೆ ಒಡೆದು ನೆಲ ಬಿಟ್ಟು ಮೇಲೆ ಬಂದಿದ್ದು, ಈ ಸಮಯದಲ್ಲಿ ಮಳೆಯಾಗದಿದ್ದರೆ ಬೆಳೆಗಳು ತೇವಾಂಶ ಕೊರತೆಯಿಂದ ಬಿಸಿಲಿಗೆ ಕಮರಿ ಹೋಗುತ್ತಿರುವುದು ನಡೆದಿದೆ.
ಯಲ್ಲಪ್ಪ ಕುರಿ, ನರೇಗಲ್ಲ ರೈತ
ಒಂದು ವಾರದೊಳಗೆ ಭೂಮಿ ಹಸಿಯಾಗುವಷ್ಟು ಮಳೆ ಬಾರದಿದ್ದರೆ ಬೆಳೆದು ನಿಂತ ಬೆಳೆಗಳು ಕಮರಿಹೋಗಲಿವೆ. ಸಾಲ ಮಾಡಿ ಬಿತ್ತನೆ ಮಾಡಿದ್ದರೂ ಮಳೆ ಬಾರದಿದ್ದರೆ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗುವ ಪರಿಸ್ಥಿತಿ ಬರಲಿದೆ.
ರಮೇಶ ಹತ್ತಿಕಟ್ಟಗಿ, ರೈತ
ಸಿಕಂದರ ಎಂ. ಆರಿ