ಚಾಮರಾಜನಗರ: ಹಳೆ ಮೈಸೂರು ಭಾಗದಲ್ಲಿ ಪಕ್ಷವನ್ನು ಸಂಘಟಿಸಲು ಹಾಗೂ ದಲಿತ ನಾಯಕರೊಬ್ಬರನ್ನು ಪ್ರಬಲವಾಗಿ ಬೆಳೆಸಲು ಆರ್. ಧ್ರುವನಾರಾಯಣ ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ ನೀಡಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಹಳೆ ಮೈಸೂರು ಭಾಗದಲ್ಲಿ ಬಿಜೆಪಿಯ ವಿ. ಶ್ರೀನಿವಾಸಪ್ರಸಾದ್ ಪ್ರಬಲ ದಲಿತ ನಾಯಕರು. ಅವರು ಕಾಂಗ್ರೆಸ್‌ನಲ್ಲಿದ್ದಾಗ ಪಕ್ಷಕ್ಕೆ ಈ ಭಾಗದಲ್ಲಿ ಪ್ರಬಲ ದಲಿತ ನಾಯಕರೊಬ್ಬರ ನಾಯಕತ್ವ ಪಕ್ಷಕ್ಕಿತ್ತು. ಇನ್ನೊಂದೆಡೆ ಕಾಂಗ್ರೆಸ್‌ಗೆ ಹೆಗಲಾಗಿ ಎಚ್ .ಸಿ.ಮಹದೇವಪ್ಪ ಇದ್ದರು. ಆದರೆ, ಕಳೆದ ವಿಧಾನಸಭಾ ಚುನಾವಣೆಯ ನಂತರ ಎಚ್‌ಸಿಎಂ ಪಕ್ಷದ ಕಾರ್ಯಕ್ರಮಗಳಲ್ಲಿ, ಸಂಘಟನೆಯಲ್ಲಿ ಸಕ್ರಿಯವಾಗಿ ಕಾಣಿಸಿಕೊಳ್ಳುತ್ತಿಲ್ಲ. ಒಂದು ರೀತಿಯ ಅಸಮಾಧಾನ ಅವರಲ್ಲಿದೆ. ಇಂಥ ಸನ್ನಿವೇಶದಲ್ಲಿ ಮೈಸೂರು ಚಾಮರಾಜನಗರ ಭಾಗದಲ್ಲಿ ಕಾಂಗೆಸ್‌ಗೆ ಪ್ರಬಲ ದಲಿತ ನಾಯಕತ್ವದ ಕೊರತೆಯಿದೆ. ಅಷ್ಟು ಮಾತ್ರವಲ್ಲ, ಎಚ್.ಎಸ್.ಮಹದೇವಪ್ರಸಾದ್ ನಿಧನದ ನಂತರ ಚಾಮರಾಜನಗರ ಜಿಲ್ಲೆಯಲ್ಲೇ ಪಕ್ಷಕ್ಕೆ ಪ್ರಭಾವಿ ನಾಯಕತ್ವದ ಕೊರತೆಯಿದೆ.
ಈ ಎಲ್ಲ ಕೊರತೆಗಳನ್ನೂ ಸರಿದೂಗಿಸಲು ಧ್ರುವನಾರಾಯಣಗೆ ಕಾರ್ಯಾಧ್ಯಕ್ಷ ಸ್ಥಾನ ನೀಡಿದೆ ಎಂಬುದು ಹೊರ ನೋಟಕ್ಕೇ ಗೊತ್ತಾಗುವ ಸಂಗತಿ. ಕಾಂಗ್ರೆಸ್ ನಿರ್ವಾತ ತುಂಬಲು ಪಕ್ಷಕ್ಕೆ ಇದೀಗ ಧ್ರುವ ಬಲ ಸಿಕ್ಕಿದೆ. ಧ್ರುವನಾರಾಯಣ ಪಕ್ಷದೊಳಗೆ ಎಲ್ಲ ನಾಯಕರ ಜೊತೆ ವಿಶ್ವಾಸದಿಂದಿದ್ದು, ಎಲ್ಲರೂ ಒಪ್ಪುವ ಮೃದು ಸ್ವಭಾವದ ವ್ಯಕ್ತಿ. ಅವರು 2 ಬಾರಿ ಶಾಸಕರಾಗಿ, 2 ಬಾರಿ ಸಂಸದರಾಗಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಈ ಭಾಗದಲ್ಲಿ ಜನಜನಿತ. ಸಂಸದರಾಗಿದ್ದ ಅವಧಿಯಲ್ಲಿ ಅವರು ತಮ್ಮ ಲೋಕಸಭಾ ಕ್ಷೇತ್ರಕ್ಕೆ ಕೇಂದ್ರದಿಂದ ತರಬಹುದಾದ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಹಗಲು ರಾತ್ರಿಯೆನ್ನದೆ ಶ್ರಮಿಸಿರುವುದು ಈ ಭಾಗದ ಜನರಿಗೆ ಚೆನ್ನಾಗಿ ಗೊತ್ತು.
ಸಂಸದರೊಬ್ಬರು ಇಷ್ಟೊಂದು ಕೆಲಸ ಮಾಡಲು ಸಾಧ್ಯವೆಂಬುದನ್ನು ಧ್ರುವ ತೋರಿಸಿಕೊಟ್ಟಿದ್ದಾರೆ ಎಂದು ಪ್ರತಿಪಕ್ಷ ನಾಯಕರು ಸಹ ಒಪ್ಪುತ್ತಾರೆ. ಚಾಮರಾಜನಗರದ ಕೇಂದ್ರೀಯ ವಿದ್ಯಾಲಯದ ಉದ್ಘಾಟನೆಗೆ ಆಗಮಿಸಿದ್ದ ಅಂದಿನ ಕೇಂದ್ರ ಸಚಿವ ದಿ. ಅನಂತಕುಮಾರ್ ಅವರು, ಅಂದಿನ ತಮ್ಮ ಭಾಷಣದಲ್ಲಿ ವಿರೋಧ ಪಕ್ಷದವರು ಎಂಬ ಭೇದ ತೋರದೆ ಧ್ರುವ ಅತ್ಯುತ್ತಮ ಸಂಸದ ಎಂದು ಬಣ್ಣಿಸಿದ್ದರು. ಸಂಸ್ಥೆಯೊಂದು ನಡೆಸಿದ ಸಂಸದರ ಅಭಿವೃದ್ಧಿ ಕಾರ್ಯಗಳ ಮೌಲ್ಯಮಾಪನದಲ್ಲಿ ಧ್ರುವ, ದೇಶದ ನಾಲ್ಕನೇ ಹಾಗೂ ಕರ್ನಾಟಕದ ಮೊದಲ ಸಂಸದರಾಗಿದ್ದರು.
ಧ್ರುವನಾರಾಯಣ ದಲಿತ ವರ್ಗದೊಡನೆ ಮಾತ್ರವಲ್ಲ, ಇತರ ವರ್ಗಗಳೊಡನೆಯೂ ವಿಶ್ವಾಸ ಹೊಂದಿದ್ದಾರೆ. ಬೇರೆ ಸಮುದಾಯದ ನಾಯಕರೊಡನೆ ಒಡನಾಟ ಇಟ್ಟುಕೊಂಡಿದ್ದಾರೆ. ಶಾಸಕ, ಸಂಸದರಾಗಿದ್ದಾಗ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳು ಎಲ್ಲ ವರ್ಗಗಳಿಗೂ ಪ್ರಯೋಜನಕಾರಿಯಾಗಿವೆ. ಹೀಗಾಗಿ ಎಲ್ಲ ಸಮುದಾಯದ ಜನರ ವಿಶ್ವಾಸ ಗಳಿಸಿಕೊಂಡಿದ್ದಾರೆ. ಕ್ರಿಯಾಶೀಲ, ಮೃದು ಸ್ವಭಾವದ ವ್ಯಕ್ತಿತ್ವ, ಪಕ್ಷದಲ್ಲಿ ಎಲ್ಲರೊಡನೆ ಹೊಂದಿಕೊಂಡು ಹೋಗುವ ಗುಣ ಇವೆಲ್ಲವನ್ನೂ ಪರಿಗಣಿಸಿದ ಕಾಂಗ್ರೆಸ್ ಪಕ್ಷ ಮೈಸೂರು ಭಾಗದ ಸಂಘಟನೆಗಾಗಿ ಹಾಗೂ ಕೆಪಿಸಿಸಿಯ ಉನ್ನತ ಹುದ್ದೆಯಲ್ಲಿ ದಲಿತ ನಾಯಕರೊಬ್ಬರನ್ನು ಪ್ರತಿನಿಧಿಸಲು ಧ್ರುವನಾರಾಯಣ ಅವರನ್ನೇ ಆಯ್ಕೆ ಮಾಡಿದೆ. ಈ ಜವಾಬ್ದಾರಿಯನ್ನು ಅವರು ಯಾವ ರೀತಿ ನಿಭಾಯಿಸಿಕೊಂಡು ಹೋಗುತ್ತಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ.
ಕೆ.ಎಸ್.ಬನಶಂಕರ ಆರಾಧ್ಯ