ಗಂಗಾವತಿ : ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ಬೆಳೆ ಬೆಳೆಯಲು ರೈತರು ಅಧಿಕ ಹಣ ಖರ್ಚು ಮಾಡುತ್ತಿದ್ದು, ಖರ್ಚು ಕಡಿಮೆ ಮಾಡಲು ಕೃಷಿ ವಿವಿ ಹಾಗೂ ಕೃಷಿ ಇಲಾಖೆ ಹಲವು ಕೃಷಿ ಉಪಕರಣಗಳನ್ನು ಸಂಶೋಧನೆ ಮಾಡಿದ್ದು ಡ್ರಮ್ ಸೀಡರ್‌ನಿಂದ ಭತ್ತದ ನಾಟಿ ಮಾಡುವಂತೆ ವಡ್ರಟ್ಟಿಯ ಪ್ರಗತಿಪರ ರೈತ ಜಿ. ರವಿಬಾಬು ಸಲಹೆ ನೀಡಿದ್ದಾರೆ.
ತಾಲೂಕಿನ ವಡ್ಡರಹಟ್ಟಿಯ 4 ಎಕರೆ ಜಮೀನಿನಲ್ಲಿ ಡ್ರಮ್ ಸೀಡರ್‌ನಿಂದ ನಾಟಿ ಮಾಡಲಾಯಿತು. ಮೊದಲಿಗೆ ಜಮೀನನಲ್ಲಿ ನೀರು ಒಣಗಿಸಿ 2 ಬಾರಿ ಪಡ್ಲಿಂಗ್ ಮಾಡಿ ಒಂದು ಬಾರಿ ಬಲ್
ಹೊಡೆಯುವುದರ ಮುಖಾಂತರ ಭೂಮಿಯನ್ನು ಸಮಗೊಳಿಸಬೇಕು. ಭತ್ತದ ಬೀಜವನ್ನು 24 ತಾಸು ನೀರಿನಲ್ಲಿ ನೆನೆಸಿ ನಂತರ ಬಿತ್ತುವ ಮೊದಲು 30 ನಿಮಿಷ ನೆರಳಿನಲ್ಲಿ ಒಣಗಿಸಿ ಪ್ರತಿ ಡ್ರಮ್ ಗೆ ಒಂದೂವರೆ ಕೆ.ಜಿ. ಬೀಜವನ್ನು ಒಟ್ಟಾರೆ 4 ಡ್ರಮ್‌ನಿಂದ 6-8 ಕೆ.ಜಿ. ಬೀಜವನ್ನು ಹಾಕಿ ಒಂದು ಎಕರೆಗೆ ನಾಟಿ ಮಾಡಬೇಕು.
ಡ್ರಮ್ ಸೀಡರ್‌ನ್ನು ಪ್ಲಾಸ್ಟಿಕ್ ಅಥವಾ ತೆಳು ಕಬ್ಬಿಣದಿಂದ ರಚಿಸಲಾಗಿದ್ದು, ಇದು ರೈತರಿಗೆ ಕಡಿಮೆ ಭಾರದಿಂದ ಕೂಡಿದ್ದು, ಸುಮಾರು 5000-6000 ಸಾವಿರ ರೂಪಾಯಿಗಳಲ್ಲಿ ದೊರೆಯುತ್ತದೆ. ಇನ್ನೆನ್ನು ಮೊಳಕೆ ಬರುವಂತಹ ಭತ್ತದ ಬೀಜಗಳನ್ನು ನೇರವಾಗಿ ಕೇಸರ ಗದ್ದೆಯಲ್ಲಿ 20 ಸೆ.ಮೀ. ಅಂತರ ಸಾಲುಗಳಲ್ಲಿ ಬಿತ್ತಬಹುದು. ಇದರಿಂದ ರೈತರಿಗೆ ನರ್ಸರಿ ಮಾಡುವ ಖರ್ಚು ಹಾಗೂ ನೀರಿನ ಉಳಿತಾಯವನ್ನು ಮಾಡಬಹುದು ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ : ಎಲ್ಲ ಸಾಹಿತ್ಯ ಪ್ರಕಾರಕ್ಕೂ ಜನಪದವೇ ಬೇರು : ನೀನಾಸಂ ಇಸ್ಮಾಯಿಲ್