ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಜಾಲದ ಜತೆಗಿನ ನಂಟಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿಯನ್ನು ಸಿಸಿಬಿ ಅಧಿಕಾರಿಗಳು ಹಲವು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದ್ದು, ಏತನ್ಮಧ್ಯೆ ಜಯನಗರ ಆರ್ ಟಿಒ ಕಚೇರಿಯ ಸಹಾಯಕ ಕ್ಲರ್ಕ್ ರವಿಶಂಕರ್ ಹಾಗೂ ಇಂಟಿರಿಯರ್ ಡಿಸೈನರ್ ರಾಹುಲ್ ನನ್ನು ಬಂಧಿಸಿರುವುದಾಗಿ ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂಥ್ ತಿಳಿಸಿದ್ದಾರೆ.
ಶುಕ್ರವಾರ (ಸೆಪ್ಟೆಂಬರ್ 04, 2020) ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈವರೆಗಿನ ಪ್ರಕರಣಕ್ಕೆ ಸಂಬಂಧಿಸಿದ ವಿವರಗಳ ಕುರಿತು ಮಾಹಿತಿ ನೀಡಿದರು. ಕಳೆದ ಒಂದು ತಿಂಗಳಿನಿಂದ ಪೊಲೀಸರು ಡ್ರಗ್ಸ್ ಜಾಲದ ಬೆನ್ನತ್ತಿದ್ದು, ಹಲವರನ್ನು ವಿಚಾರಣೆಗೊಳಪಡಿಸಿದ್ದು, ಇಬ್ಬರನ್ನು ಬಂಧಿಸಲಾಗಿದೆ ಎಂದು ಹೇಳಿದರು.
ರಾಹುಲ್ ಮತ್ತು ರವಿಶಂಕರ್ ವಿದೇಶಿ ಪ್ರಜೆಗಳಿಂದ ಮಾದಕ ವಸ್ತು ಪಡೆಯುತ್ತಿದ್ದು, ನಂತರ ತಾವೂ ಸೇವನೆ ಮಾಡಿ ನಂತರ ಬೇರೆಯವರಿಗೆ ಮಾರಾಟ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ. ರಾಗಿಣಿ ಆಪ್ತ ರವಿಶಂಕರ್ ನೀಡಿದ್ದ ಮಾಹಿತಿ ಆಧಾರದ ಮೇಲೆ ಇಂದು ರಾಗಿಣಿ ನಿವಾಸದ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ನಂತರ ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ರವಿಶಂಕರ್ ಮತ್ತು ರಾಗಿಣಿ ದ್ವಿವೇದಿ ಇಬ್ಬರು ಆಪ್ತರಾಗಿದ್ದು, ಇಬ್ಬರು ಹಲವಾರು ಪಾರ್ಟಿಗಳಲ್ಲಿ ಭಾಗವಹಿಸಿದ್ದರು.ಡಿಜಿಟಲ್ ಸಾಕ್ಷ್ಯಾಧಾರದ ಮೇಲೆ ರಾಗಿಣಿ ಮನೆ ಮೇಲೆ ದಾಳಿ ನಡೆಸಲಾಗಿತ್ತು. ಈವರೆಗೂ ಆಕೆಯನ್ನು ಬಂಧಿಸಿಲ್ಲ ಎಂದು ಪಂಥ್ ಹೇಳಿದರು.
ರಾಗಿಣಿ ವಿರುದ್ಧ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಲಾಗಿದೆ. ಒಟ್ಟು 12 ಮಂದಿ ಆರೋಪಿಗಳ ಹೆಸರಿದ್ದು, ತನಿಖೆಯ ಹಂತದಲ್ಲಿರುವುದರಿಂದ ಯಾರ ಹೆಸರನ್ನೂ ಬಹಿರಂಗೊಳಿಸುವುದಿಲ್ಲ ಎಂದು ಪಂತ್ ತಿಳಿಸಿದರು.
ರಾಗಿಣಿಗೆ ಬಂಧನ ಭೀತಿ ಕೋರ್ಟ್ ಮೊರೆ:
ಡ್ರಗ್ಸ್ ಜಾಲದ ವಿಚಾರದಲ್ಲಿ ಸುದೀರ್ಘ ವಿಚಾರಣೆಗೆ ಒಳಗಾಗಿರುವ ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿ ಪರ ವಕೀಲರು ಶುಕ್ರವಾರ ಸಂಜೆ ಸಿಟಿ ಸಿವಿಲ್ ಕೋರ್ಟ್ ಮೊರೆ ಹೋಗಿದ್ದು, ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿರುವುದಾಗಿ ತಿಳಿದು ಬಂದಿದೆ. ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಬಂಧಿಸಬಹುದು ಎಂಬ ಭೀತಿಯಲ್ಲಿರುವ ರಾಗಿಣಿ ಇದೀಗ ಕೋರ್ಟ್ ಮೊರೆ ಹೋಗಿರುವುದಾಗಿ ವರದಿ ತಿಳಿಸಿದೆ.