Advertisement

ಡ್ರಗ್ಸ್: ಸದನದಲ್ಲಿ ಶಾಸಕರೇ ಕಣ್ಣೀರಿಟ್ಟಿದ್ದರು; ಚಂದನವನ ನಟ-ನಟಿಯರಿಗೆ NCB ನೋಟಿಸ್‌?

03:18 PM Aug 29, 2020 | Nagendra Trasi |

ಬೆಂಗಳೂರು: ಸ್ಯಾಂಡಲ್‌ ವುಡ್‌ ನಟ-ನಟಿಯರು ಹಾಗೂ ಸಂಗೀತಗಾರರಿಗೂ ಮಾದಕ ವಸ್ತು ಮಾರಾಟ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಕ ವಸ್ತು ನಿಯಂತ್ರಣ ಘಟಕ ಅಧಿಕಾರಿಗಳು ಕೆಲ ನಟ-ನಟಿಯರಿಗೆ ಸದ್ಯದಲ್ಲೇ ನೋಟಿಸ್‌ ಜಾರಿ ಮಾಡಲಿದ್ದಾರೆ ಎಂಬ ಸುದ್ದಿಯ ಬೆನ್ನ ಹಿಂದೆಯೇ ರಾಜ್ಯ ರಾಜಧಾನಿಯಲ್ಲಿನ ಡ್ರಗ್ಸ್ ಜಾಲ ದೊಡ್ಡ ಮಟ್ಟದಲ್ಲಿ ಸದ್ದು ಮಾಡತೊಡಗಿದೆ.

Advertisement

ಬೆಂಗಳೂರಿನಲ್ಲಿ ಡ್ರಗ್ಸ್ ಜಾಲ ದೊಡ್ಡದಾಗಿಯೇ ಇದೆ ಎಂಬುದಾಗಿ ಅಬಕಾರಿ ಸಚಿವ ಎಚ್.ನಾಗೇಶ್ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ. ಡ್ರಗ್ಸ್ ಜಾಲಕ್ಕೆ ಯುವಪೀಳಿಗೆ ಬಲಿಯಾಗುತ್ತಿದ್ದು, ಅದನ್ನು ತಡೆಗಟ್ಟುವಲ್ಲಿ ಪೊಲೀಸ್ ಹಾಗೂ ಅಬಕಾರಿ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸುವುದಾಗಿ ತಿಳಿಸಿದ್ದಾರೆ.

ಸ್ಯಾಂಡಲ್ ವುಡ್ ಘಟಾನುಘಟಿಗಳ ಹೆಸರನ್ನು ಬಾಯ್ಬಿಟ್ಟ ಕಿಂಗ್ ಪಿನ್ ಅನಿಕಾ!

ಪ್ರಕರಣದ ಕಿಂಗ್‌ ಪಿನ್‌ ಅನಿಕಾಳ ಹೇಳಿಕೆಯನ್ನಾಧರಿಸಿ ಈಗಾಗಲೇ ಹತ್ತಾರು ಮಂದಿಯ ನಟ-ನಟಿಯರು ಹಾಗೂ ಸಂಗೀತಗಾರರ ಹೆಸರಿನ ಪಟ್ಟಿ ಸಿದ್ಧಪಡಿಸಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಎಲ್ಲರಿಗೂ ನೋಟಿಸ್‌ ಜಾರಿ ಮಾಡಲಾಗುವುದು ಎಂದು ಎನ್‌ಸಿಬಿ ಮೂಲಗಳು ತಿಳಿಸಿತ್ತು. ಆ.21ರಂದು ಎನ್‌ಸಿಬಿ ದಾಳಿ ವೇಳೆ ಅನಿಕಾಳ ಮನೆಯಲ್ಲಿ ಡೈರಿಯೊಂದು ಪತ್ತೆಯಾಗಿದೆ. ಆ ಡೈರಿಯಲ್ಲಿ ಗ್ರಾಹಕರು, ಮಧ್ಯವರ್ತಿಗಳ ಹೆಸರು ಉಲ್ಲೇಖಿಸಲಾಗಿತ್ತು. ಅದನ್ನು ಆಧರಿಸಿ ನೋಟಿಸ್‌ ಜಾರಿ ಮಾಡಲಾಗುತ್ತಿದೆ. ನೋಟಿಸ್‌ನಲ್ಲಿ ಅನಿಕಾಳಿಗೂ ತಮಗೂ ಏನು ಸಂಬಂಧ? ಎಷ್ಟು ವರ್ಷಗಳಿಂದ ಆಕೆಯ ಪರಿಚಯವಿದೆ? ಎಂಬೆಲ್ಲ ಪ್ರಶ್ನೆಗಳನ್ನು ಉಲ್ಲೇಖಿಸಿ ನೋಟಿಸ್‌ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಅಂದು ಸದನದಲ್ಲೇ ವೇದನೆ ಬಿಚ್ಚಿಟ್ಟಿದ್ದ ಬಿಜೆಪಿ ಶಾಸಕ:

Advertisement

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ವಿಚಾರದಲ್ಲಿ ಡ್ರಗ್ಸ್ ಸಂಬಂಧ ಹೊರಬೀಳುತ್ತಿದ್ದಂತೆಯೇ ಸ್ಯಾಂಡಲ್ ವುಡ್ ನಲ್ಲಿಯೂ ಡ್ರಗ್ಸ್ ಜಾಲದ ಮಾಹಿತಿ ಹೊರಬೀಳತೊಡಗಿದೆ. ಆದರೆ ಈ ವಿಷಯ ಹಲವಾರು ಬಾರಿ ಹಿಂದೆಯೂ ಪ್ರಸ್ತಾಪವಾಗಿತ್ತು ಎಂಬುದನ್ನು ನೆನಪಿಸಿಕೊಳ್ಳಬೇಕು.

ಅಂದು ಡ್ರಗ್ಸ್ ದಂಧೆ ಕುರಿತು ಪಕ್ಷಬೇಧ ಮರೆತು ವಿಧಾನಸಭೆಯಲ್ಲಿ ಶಾಸಕರು ಆತಂಕ ವ್ಯಕ್ತಪಡಿಸಿದದರು. ಅದಕ್ಕೆ ಕಾರಣವಾಗಿದ್ದು, ಬಿಜೆಪಿ ಶಾಸಕ ಕಳಕಪ್ಪ ಬಂಡಿ(2018ರಲ್ಲಿ) ಅವರು ತಾನು ಅನುಭವಿಸಿದ ವೇದನೆಯನ್ನು ಸದನದಲ್ಲಿ ಬಿಚ್ಚಿಟ್ಟಿದ್ದು!

ಬೆಂಗಳೂರು ಕಾಲೇಜಿಗೆ ಸೇರ್ಪಡೆಗೊಂಡಿದ್ದ ತಮ್ಮ ಪುತ್ರ ಕೆಲ ದಿನಗಳಲ್ಲೇ ಡ್ರಗ್ಸ್ ಚಟ ಅಂಟಿಸಿಕೊಂಡುಬಿಟ್ಟಿದ್ದ. ಈ ವಿಚಾರ ನಮಗೆ ಆರು ತಿಂಗಳ ಬಳಿಕ ಗೊತ್ತಾಗಿತ್ತು. ಅದರಿಂದ ಆತನನ್ನು ಹೊರತರಲು ತಾನು ಪಟ್ಟ ಕಷ್ಟ ಅಷ್ಟಿಷ್ಟಲ್ಲ ಎಂದು ಹೇಳಿಕೊಂಡಿದ್ದರು. ಇಂತಹ ಸ್ಥಿತಿ ಯಾವ ಪೋಷಕರಿಗೂ ಬರಬಾರದು, ಸಮಾಜಕ್ಕೆ ಪಿಡುಗಾಗಿ ಪರಿಣಮಿಸಿರುವ ಡ್ರಗ್ಸ್ ದಂಧೆ ಮಟ್ಟ ಹಾಕಲು ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿಕೊಂಡಿದ್ದರು!.

ಅಂದು ಗೃಹ ಸಚಿವರು, ಉಪಮುಖ್ಯಮಂತ್ರಿ ಆಗಿದ್ದ ಜಿ.ಪರಮೇಶ್ವರ್ ಅವರು ಮಾತನಾಡಿ, ಬೆಂಗಳೂರಿಗೆ ಡ್ರಗ್ಸ್ ಕಾಲಿಟ್ಟಿರುವುದು ಇದೇ ಮೊದಲೇನಲ್ಲ. ಮೂವತ್ತು ವರ್ಷಗಳ ಹಿಂದೆ ತಾವು ಬೆಂಗಳೂರಿನ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ವಿದ್ಯಾರ್ಥಿಯೊಬ್ಬ ಈ ವ್ಯಸನಕ್ಕೆ ದಾಸನಾಗಿದ್ದ. ಆದರೆ ಕರ್ನಾಟಕವನ್ನು ಯಾವುದೇ ಕಾರಣಕ್ಕೂ ಪಂಜಾಬ್ ಆಗಲು ಬಿಡುವುದಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next