Advertisement

Arrested: ಡ್ರಗ್ಸ್‌ ದಂಧೆ: ನೇತ್ರತಜ್ಞ, 3 ವಿದೇಶಿಗರ ಸೆರೆ

11:02 AM Feb 28, 2024 | Team Udayavani |

ಬೆಂಗಳೂರು: ಮಾದಕ ವಸ್ತು ಮಾರಾಟ ಹಾಗೂ ಸಾಗಾಟ ಆರೋಪದ ಮೇಲೆ ಒಬ್ಬ ಪ್ರತಿಷ್ಠಿತ ಆಸ್ಪತ್ರೆಯ ನೇತ್ರ ತಜ್ಞ, ಮೂವರು ವಿದೇಶಿ ಪ್ರಜೆಗಳನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿಗಳಿಂದ 2.35 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Advertisement

ನೇತ್ರತಜ್ಞ ಬಂಧನ: ನೆದರ್‌ಲ್ಯಾಂಡ್‌ನಿಂದ ಭಾರತಕ್ಕೆ ಇಂಡಿಯನ್‌ ಪೋಸ್ಟ್‌ ಮೂಲಕ ಹೈಡ್ರೋಗಾಂಜಾ ತರಿಸಿಕೊಳ್ಳುತ್ತಿದ್ದ ಮಾದಕ ವಸ್ತು ವ್ಯಸನಿ ನೇತ್ರ ತಜ್ಞ ನಿಖಿಲ್‌ ಗೋಪಾಲಕೃಷ್ಣನ್‌(29) ಎಂಬಾತನನ್ನು ಬಂಧಿಸಲಾಗಿದೆ. ಈತನಿಂದ 3 ಲಕ್ಷ ರೂ. ಮೌಲ್ಯದ 42 ಗ್ರಾಂ ಹೈಡ್ರೋ ಗಾಂಜಾ ಮತ್ತು ಒಂದು ಐಫೋನ್‌ ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್‌ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ತಮಿಳುನಾಡು ಮೂಲದ ಡಾ.ನಿಖಿಲ್‌ ಗೋಪಾಲ ಕೃಷ್ಣನ್‌ ಪೋಷಕರ ಜತೆ ಕೆಲ ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದಿದ್ದು, ವೈಟ್‌ಫೀಲ್ಡ್‌ ಭಾಗದಲ್ಲಿ ಪೋಷಕರು ವಾಸವಾಗಿದ್ದಾರೆ. ಈತ ಯಶವಂತಪುರದ ಪ್ಲಾಟಿನಂ ಸಿಟಿ ಅಪಾರ್ಟ್‌ಮೆಂಟ್‌ನಲ್ಲಿ ಒಬ್ಬನೇ ವಾಸವಾಗಿದ್ದ. ಈ ಮಧ್ಯೆ ಮಾದಕ ಪದಾರ್ಥಗಳ ವ್ಯಸನಿ ಯಾಗಿ ರುವ ಆರೋಪಿ, ನೆದರ್‌ಲ್ಯಾಂಡ್‌ನಿಂದ ಇಂಡಿಯನ್‌ ಪೋಸ್ಟ್‌ ಮೂಲಕ ಭಾರತಕ್ಕೆ ಹೈಡ್ರೋ ಗಾಂಜಾ ತರಿಸಿಕೊಂಡು ಸೇವಿಸುತ್ತಿದ್ದ. ಈ ಮಾಹಿತಿ ಮೇರೆಗೆ ಆತನ ಫ್ಲಾಟ್‌ ಮೇಲೆ ದಾಳಿ ನಡೆಸಿ ಮಾಲು ಸಮೇತ ಆರೋಪಿ ಬಂಧಿಸಲಾಗಿದೆ ಎಂದು ಹೇಳಿದರು.

ಮೂವರು ವಿದೇಶಿ ಪ್ರಜೆಗಳ ಬಂಧನ: ಸೋಲದೇವನ ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ವಿದೇಶಿ ಪ್ರಜೆ ಗಳನ್ನು ಬಂಧಿಸಲಾಗಿದೆ. ಆಫ್ರಿಕಾದ ಘಾನಾ ದೇಶದ ಇಮ್ಯಾನ್ಯೂಯಲ್‌ ಕೌಸಿ(32) ಮತ್ತು ಚೈನಾಸಾ ಕ್ರಿಪ್ಲಿನ್‌ ಓಕಯ್‌(38)ಹಾಗೂ ನೈಜಿರಿಯಾದ ಕಾಲು ಚೌಕಾ(40) ಬಂಧಿತರು. ಆರೋಪಿಗಳಿಂದ 2.5 ಕೋಟಿ ರೂ. ಮೌಲ್ಯದ ಮಾದಕ ವಸ್ತು ವಶಕ್ಕೆ ಪಡೆಯಲಾಗಿದೆ.

ಈ ಆರೋಪಿಗಳ ಪೈಕಿ ಇಮ್ಯಾನ್ಯೂಯಲ್‌ ಕೌಸಿ ಮತ್ತು ಚೈನಾಸಾ ಕ್ರಿಪ್ಲಿನ್‌ ಓಕಯ್‌ ಪ್ರವಾಸಿ ವೀಸಾ ಪಡೆದು ಭಾರತಕ್ಕೆ ಬಂದಿದ್ದಾರೆ. ಈ ಪೈಕಿ ಇಮ್ಯಾನ್ಯೂಯಲ್‌ ಕೌಸಿ ಮುಂಬೈನಲ್ಲಿ ಎನ್‌ಡಿಪಿಎಸ್‌ ಕೇಸ್‌ನಲ್ಲಿ ಜೈಲು ಸೇರಿ, ಬಿಡುಗಡೆಯಾಗಿದ್ದಾನೆ. ಮತ್ತೂಬ್ಬ ಆರೋಪಿ ವಿರುದ್ಧ ಅವಧಿ ಮೀರಿ ನೆಲೆಸಿದ ಆರೋಪ ದಡಿ ದೆಹಲಿಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಇಬ್ಬರು ಬೆಂಗಳೂರಿಗೆ ಬಂದು, ಸೋಲದೇವನಹಳ್ಳಿಯಲ್ಲಿ ವಾಸವಾಗಿದ್ದರು. ನಗರದ ಕೆಲ ಡ್ರಗ್ಸ್‌ ಪೆಡ್ಲರ್‌ಗಳಿಂದ  ಮಾದಕ ವಸ್ತುಗಳನ್ನು ಖರೀದಿಸಿ, ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರು. ಆರೋಪಿಗಳಿಂದ 51 ಲಕ್ಷ ರೂ. ಮೌಲ್ಯದ  ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಆಯುಕ್ತರು ಹೇಳಿದ್ದಾರೆ.

Advertisement

ಮತ್ತೂಬ್ಬ ವಿದೇಶಿ ಪ್ರಜೆ ನೈಜಿರಿಯಾದ ಕಾಲು ಚೌಕಾ(40) 2023ರ ಫೆಬ್ರವರಿಯಲ್ಲಿ ವ್ಯವಹಾರಿಕಾ ವೀಸಾ ಪಡೆದು ಭಾರತಕ್ಕೆ ಬಂದಿದ್ದು, ಪರಿಚಯಸ್ಥ ಮತ್ತು ಇತರೆ ವಿದೇಶಿ ಪ್ರಜೆಗಳ ಮೂಲಕ ಮಾದಕ ವಸ್ತುಗಳನ್ನು ಖರೀದಿಸಿ ಮಾರಾಟ ಮಾಡುತ್ತಿದ್ದ. ಈತನಿಂದ 1,81 ಕೋಟಿ ರೂ. ಮೌಲ್ಯದ 236 ಎಂಡಿಎಂಎ ಕ್ರಿಸ್ಟಲ್‌,  ಮೊಬೈಲ್‌ ವಶಕ್ಕೆ ಪಡೆಯ ಲಾಗಿದೆಂದು   ಆಯುಕ್ತ ದಯಾನಂದ ತಿಳಿಸಿದ್ದಾರೆ.

ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಇನ್ಸ್‌ಪೆಕ್ಟರ್‌ ಮುಕರ್ರಮ್‌ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

ಬಂಧಿತ ನೇತ್ರ ತಜ್ಞ ಚಿನ್ನದ ಪದಕ ವಿಜೇತ! :

ನಿಖಿಲ್‌ ಗೋಪಾಲಕೃಷ್ಣನ್‌ ಕರಾವಳಿ ಭಾಗದ ಪ್ರತಿಷ್ಠಿತ ಮೆಡಿಕಲ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗ ಉತ್ತಮ ಅಂಕಗಳಿಸಿ ಚಿನ್ನದ ಪದಕ ಪಡೆದುಕೊಂಡಿದ್ದಾನೆ. ಅಲ್ಲದೆ, ಬೆಂಗಳೂರಿನಲ್ಲಿ ವ್ಯಾಸಂಗ ಮಾಡುವಾಗಲೂ ಚಿನ್ನದ ಪದಕ ಪಡೆದುಕೊಂಡಿದ್ದಾನೆ. ಸದ್ಯ ಎಂಎಸ್‌ ಪದವಿ ಪಡೆದುಕೊಂಡಿರುವ ಈತ, ನಗರದ ಪ್ರತಿಷ್ಠಿತ ಕಣ್ಣಿನ ಆಸ್ಪತ್ರೆಯಲ್ಲಿ ಫೆಲೋಶಿಪ್‌ ವಿದ್ಯಾರ್ಥಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾನೆ. ಇದರೊಂದಿಗೆ ಮಾದಕ ವಸ್ತು ಚಟಕ್ಕೆ ಬಿದ್ದು, ಟೆಲಿಗ್ರಾಂನ ಲಿಂಕ್‌ವೊಂದರಲ್ಲಿ ಸಿಕ್ಕ ಆ್ಯಪ್‌ ಮೂಲಕ ಕ್ರಿಪ್ಟೋ ಕರೆನ್ಸಿ ಮತ್ತು ಬಿಟ್‌ಕಾಯಿನ್‌ ಮೂಲಕ ಹಣ ಪಾವತಿಸಿ ವಿದೇಶದಿಂದ ಹೈಡ್ರೋ ಗಾಂಜಾ ತರಿಸಿಕೊಳ್ಳುತ್ತಿದ್ದ ಎಂದು ಆಯುಕ್ತರು ಮಾಹಿತಿ ನೀಡಿದರು. ಈತನ ವಿರುದ್ಧ ಆರ್‌ಎಂಸಿ ಯಾರ್ಡ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next