ಮುಂಬಯಿ: ಐಶಾರಾಮಿ ಹಡಗಿನಲ್ಲಿನ ಡ್ರಗ್ಸ್ ಪ್ರಕರಣ ಭಾರತೀಯ ಜನತಾ ಪಕ್ಷದ ವ್ಯವಸ್ಥಿತ ಸಂಚು ಇದಾಗಿದೆ ಎಂದು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಆರೋಪಿಸಿದ್ದು, ಇದು ಬಾಲಿವುಡ್ ಅನ್ನು ಮುಂಬೈನಿಂದ ಸ್ಥಳಾಂತರಿಸುವ ಬಿಜೆಪಿಯ ಪಿತೂರಿಯಾಗಿದೆ ಎಂದು ಹೇಳಿದರು.
ಇದನ್ನೂ ಓದಿ:ಡ್ರಗ್ಸ್ ವಿರುದ್ಧ ನಾನು ಯುದ್ಧ ಸಾರಿದ್ದೇನೆ: ಸಿಎಂ ಬಸವರಾಜ ಬೊಮ್ಮಾಯಿ
ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇತ್ತೀಚೆಗೆ ನೋಯ್ಡಾದಲ್ಲಿ ಫಿಲ್ಮ್ ಸಿಟಿ ಸ್ಥಾಪಿಸುವ ಕುರಿತು ಸಿನಿಮಾ ಕ್ಷೇತ್ರದ ಗಣ್ಯರ ಜತೆ ಸಭೆಗಳನ್ನು ನಡೆಸಿರುವ ಬಗ್ಗೆ ಮಲಿಕ್ ಉಲ್ಲೇಖಿಸಿದ್ದಾರೆ.
ಬಾಲಿವುಡ್ ಅನ್ನು ಮಹಾರಾಷ್ಟ್ರದಿಂದ ಸ್ಥಳಾಂತರಿಸುವ ಬಿಜೆಪಿ ಸಂಚು ಇದಾಗಿದೆ ಎಂದು ನವಾಬ್ ಮಲಿಕ್ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಹೇಳಿದರು. ಎನ್ ಸಿಬಿ ಅಧಿಕಾರಿ ಸಮೀರ್ ವಾಂಖೇಡೆ ಭಯದಿಂದ ಬಂಧನದಿಂದ ರಕ್ಷಣೆ ಕೋರಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿರುವುದಾಗಿ ಮಲಿಕ್ ತಿಳಿಸಿದ್ದಾರೆ.
ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಆರ್ಯನ್ ಖಾನ್ ನನ್ನು ಎನ್ ಸಿಬಿ ಕಚೇರಿಗೆ ಎಳೆದ ವ್ಯಕ್ತಿ(ಕಿರಣ್ ಗೋಸಾವಿ) ಜೈಲು ಕಂಬಿ ಎಣಿಸುತ್ತಿದ್ದಾರೆ.ಆರ್ಯನ್ ಖಾನ್ ಮತ್ತು ಇತರರಿಗೆ ಜಾಮೀನು ನೀಡದಂತೆ ನೋಡಿಕೊಂಡಿದ್ದ ವ್ಯಕ್ತಿ ಇದೀಗ ಸ್ವತಃ ನಿನ್ನೆ ಕೋರ್ಟ್ ಬಾಗಿಲು ಬಡಿಯುವಂತಾಗಿದೆ ಎಂದು ಮಲಿಕ್ ವ್ಯಂಗ್ಯವಾಡಿರುವುದಾಗಿ ವರದಿ ತಿಳಿಸಿದೆ.
ಕಿರಣ್ ಗೋಸ್ವಾಮಿ ಡ್ರಗ್ಸ್ ಪ್ರಕರಣದ ಸಾಕ್ಷಿದಾರನಾಗಿದ್ದು, ಈತನನ್ನು 2018ರ ವಂಚನೆ ಪ್ರಕರಣದಲ್ಲಿ ಪುಣೆ ಪೊಲೀಸರು ಬುಧವಾರ ರಾತ್ರಿ ಬಂಧಿಸಿದ್ದರು. ಅಕ್ಟೋಬರ್ 3ರಂದು ಗೋವಾ ಮೂಲದ ಐಶಾರಾಮಿ ಹಡಗಿನ ಮೇಲೆ ಎನ್ ಸಿಬಿ ದಾಳಿ ನಡೆಸಿದ್ದ ಸಂದರ್ಭದಲ್ಲಿ ಆರ್ಯನ್ ಖಾನ್ ಜತೆ ಸೆಲ್ಫಿ ತೆಗೆದುಕೊಂಡಿದ್ದ ಕಿರಣ್ ಗೋಸಾವಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.