ಬೆಂಗಳೂರು: ವಿದೇಶದಲ್ಲೇ ಕುಳಿತು ಬೆಂಗಳೂರಿನಲ್ಲಿ ಮಾದಕ ವಸ್ತು ದಂಧೆ ನಡೆಸುತ್ತಿದ್ದ ತಾಯಿ, ಮಗಳು ಸೇರಿ ಮೂವರ ವಿರುದ್ಧ ಬೆಂಗಳೂರು ಕೇಂದ್ರ ಅಪರಾಧ ದಳದ(ಸಿಸಿಬಿ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಲಹಂಕ ನಿವಾಸಿ ಆಯಾಜ್ ಮೊಹಮ್ಮದ್ ಎಂಬುವರು ನೀಡಿದ ದೂರಿನ ಮೇರೆಗೆ ದುಬೈನಲ್ಲಿ ವಾಸವಾಗಿರುವ ಲೀನಾ ವೀರ್ವಾನಿ ಮತ್ತು ಆಕೆಯ ಪುತ್ರಿ ನಥಾಲಿಯಾ ವಿರ್‌ವಾನಿ ಹಾಗೂ ಬೆಂಗಳೂರಿನ ರಂಜನ್ ಎಂಬುವರ ವಿರುದ್ಧ ಸಿಸಿಬಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ದೂರುದಾರ ಆಯಾಜ್ ಮೊಹಮ್ಮದ್, ತನ್ನ 23 ವರ್ಷದ ಪುತ್ರ ಆಯಾನ್ ಮೊಹಮ್ಮದ್ ಮಾದಕ ವಸ್ತು ವ್ಯಸನಿಯಾಗುವಂತೆ ರಂಜನ್ ಕುಮಾರ್ ಮೂಲಕ ತಾಯಿ-ಮಗಳು ಪರೋಕ್ಷವಾಗಿ ಒತ್ತಾಯಿಸಿದ್ದಾರೆ. ಅದನ್ನು ತಿಳಿದು ವಿಚಾರ ಮಾಡಿದಾಗ, ತಾಯಿ, ಮಗಳ ದಂಧೆ ವಿಚಾರ ಗೊತ್ತಾಗಿದೆ. ಹೀಗಾಗಿ ತಾಯಿ-ಮಗಳು ಹಾಗೂ ಈ ಇಬ್ಬರಿಗೂ ಸಹಾಯ ಮಾಡುತ್ತಿರುವ ರಂಜನ್ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಆಯಾಜ್ ಮೊಹಮ್ಮದ್ ದೂರಿನಲ್ಲಿ ಕೋರಿದ್ದಾರೆ.
ದುಬೈನಲ್ಲಿರುವ ನಥಾಲಿಯಾ ವಿರ್‌ವಾನಿ, ಆಕೆಯ ತಾಯಿ ಲೀನಾ, ಹೈಡ್ರೋ ಗಾಂಜಾ ಮತ್ತು ಎಂಡಿಎಂಎ ಕ್ರಿಸ್ಟಲ್ ಸೇರಿ ವಿವಿಧ ಮಾದರಿಯ ಮಾದಕ ವಸ್ತುಗಳನ್ನು ವಿದೇಶದಿಂದಲೇ ಬೆಂಗಳೂರಿಗೆ ಪೂರೈಕೆ ಮಾಡುತ್ತಿದ್ದಾರೆ. ನಥಾಲಿಯ ತನ್ನ ಬ್ಯಾಂಕ್ ಖಾತೆಗೆ ಯುವಕರಿಂದ ಹಣ ವರ್ಗಾವಣೆ ಮಾಡಿಸಿಕೊಂಡು, ರಂಜನ್ ಮೂಲಕ ಮಾದಕ ವಸ್ತು ಪೂರೈಸುತ್ತಿದ್ದಾಳೆ. ಅದಕ್ಕೆ ಆಕೆಯ ತಾಯಿ ಕೂಡ ಸಹಕಾರ ನೀಡುತ್ತಿದ್ದಾಳೆ. ಇನ್ನು ರಂಜನ್, ನಗರದಲ್ಲಿರುವ ಕೆಲ ವಿದ್ಯಾರ್ಥಿಗಳು ಹಾಗೂ ಇತರೆ ಗ್ರಾಹಕರಿಗೆ ಬೇಕಾದ ಡ್ರಗ್ಸ್ ಅನ್ನು ಪೂರೈಕೆ ಮಾಡುತ್ತಿದ್ದಾನೆ ಎಂಬುದು ಗೊತ್ತಾಗಿದೆ.
ಮತ್ತೂಂದೆಡೆ ನಥಾಲಿಯ, ಆಗಾಗ್ಗೆ ಬೆಂಗಳೂರಿನಿಂದ ದುಬೈ, ದುಬೈನಿಂದ ಬೆಂಗಳೂರಿಗೆ ಪ್ರಯಾಣಿಸುವಾಗ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದಾಳೆ ಎಂದು ಆಯಾಜ್ ಮೊಹಮ್ಮದ್ ದೂರಿನಲ್ಲಿ ಗಂಭೀರ ಆರೋಪ ಮಾಡಿದ್ದಾರೆ. ಹೀಗಾಗಿ ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ಆರೋಪಿ ರಂಜನ್ ವಿಳಾಸ ಪತ್ತೆಯಾಗಿದ್ದು, ಆತ ನಾಪತ್ತೆಯಾಗಿದ್ದಾನೆ. ವಿದೇಶದಲ್ಲಿರುವ ತಾಯಿ-ಮಗಳಿಗೆ ನಗರದ ಸಂಪರ್ಕ ಹೇಗೆ? ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.