Advertisement

ಬಾಲಿವುಡ್‌ನಿಂದ ಸ್ಯಾಂಡಲ್‌ವುಡ್‌ : ಬೆಂಗಳೂರು ಕಾರ್ಪೊರೇಟರ್‌ ಪುತ್ರನಿಗೆ ನೋಟಿಸ್‌

01:15 AM Sep 07, 2020 | Hari Prasad |

ಬೆಂಗಳೂರು: ಸ್ಯಾಂಡಲ್‌ವುಡ್‌ನ‌ಲ್ಲಿ ಬೆಳಕಿಗೆ ಬಂದ ಡ್ರಗ್‌ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಈಗ ರಾಜ್ಯದ ಪ್ರಕರಣಕ್ಕೂ ಬಾಲಿವುಡ್‌ ಮಾದಕವಸ್ತು ಪ್ರಕರಣಕ್ಕೂ ಸಂಬಂಧ ಇರುವ ವಾಸನೆ ಬಡಿಯುತ್ತಿದೆ.

Advertisement

ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವು ಪ್ರಕರಣದಲ್ಲಿ ಮಾದಕ ವಸ್ತು ವಿಚಾರ ಕೇಳಿಬಂದ ಹಿನ್ನೆಲೆಯಲ್ಲಿ ತನಿಖೆ ತೀವ್ರಗೊಳಿಸಿದ ಮುಂಬಯಿ ಮತ್ತು ದಿಲ್ಲಿ ಎನ್‌ಸಿಬಿ ಅಧಿಕಾರಿಗಳು ಜಂಟಿಯಾಗಿ ದೇಶದ ವಿವಿಧೆಡೆ ಡ್ರಗ್ಸ್‌ ಪೆಡ್ಲರ್‌ಗಳ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುತ್ತಿದ್ದಾರೆ.

ಇದರ ಬೆನ್ನಲ್ಲೇ ಎನ್‌ಸಿಬಿ ಮತ್ತಿತರ ಸಂಸ್ಥೆಗಳ ಮಾಹಿತಿ ಆಧರಿಸಿ ರಾಜ್ಯದಲ್ಲೂ ತನಿಖೆ ಏರುಗತಿಯಲ್ಲಿ ಸಾಗುತ್ತಿದ್ದು, ಬಂಧಿತ ಆರೋಪಿಗಳ ಛಾಯೆ ಬಾಲಿವುಡ್‌ ಅಂಗಳದಲ್ಲೂ ಕಾಣುತ್ತಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ರವಿವಾರ ಬೆಂಗಳೂರಿನ ಮಹಾ ಲಕ್ಷ್ಮೀ ಲೇಔಟ್‌ನ ಬಿಬಿಎಂಪಿ ಪಾಲಿಕೆ ಸದಸ್ಯ ಕೇಶವಮೂರ್ತಿ ಪುತ್ರ ಯಶಸ್‌ ಎಂಬವನಿಗೆ ಬೆಂಗಳೂರಿನ ಎನ್‌ಸಿಬಿಯ ಗುಪ್ತಚರ ವಿಭಾಗದ ಅಧಿಕಾರಿಗಳು ನೋಟಿಸ್‌ ನೀಡಿ, ಸೆ. 7ರಂದು ಮುಂಬಯಿಯಲ್ಲಿರುವ ಎನ್‌ಸಿಬಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಇದೇ ವೇಳೆ ವಿಚಾರಣೆಗೆ ಹಾಜ ರಾಗದೆ ನಿರ್ಲಕ್ಷ್ಯ ಮಾಡಿದರೆ ಕಠಿನ ಕಾನೂನು ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆಯನ್ನೂ ಎನ್‌ಸಿಬಿ ನೀಡಿದೆ.

ಕೆಲವು ತಿಂಗಳುಗಳ ಹಿಂದೆ ಮುಂಬಯಿಯಲ್ಲಿ ನಡೆದ ಎನ್‌ಸಿಬಿ ಕಾರ್ಯಾಚರಣೆ ವೇಳೆ ಗೋವಾ ಸಂಪರ್ಕದ ಬಗ್ಗೆ ಮಾಹಿತಿ ಸಿಕ್ಕಿತ್ತು. ಗೋವಾದ ರೆಸಾರ್ಟ್ ವೊಂದರಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎಫ್. ಅಹ್ಮದ್‌ ಎಂಬಾತ ಬೆಂಗಳೂರಿನಲ್ಲಿರುವ ಗಣ್ಯರಿಗೆ ಗಾಂಜಾ ಸರಬರಾಜು ಮಾಡುತ್ತಿದ್ದ ಎಂಬುದು ತಿಳಿದುಬಂದಿತ್ತು.

Advertisement

ಬೆಂಗಳೂರಿನಲ್ಲಿ ಮಾದಕ ವಸ್ತು ಸ್ವೀಕರಿಸುವ ವ್ಯಕ್ತಿಗಳು ಅದನ್ನು ಪೇಜ್‌ 3 ಸೆಲೆಬ್ರಿಟಿಗಳಿಗೆ ಪೂರೈಸುತ್ತಿದ್ದರು. ಜತೆಗೆ ಮುಂಬಯಿಯ ಬಾಲಿವುಡ್‌ ಜತೆ ಸಂಪರ್ಕ ಆತನಿಗಿದೆ ಎಂಬ ಅನುಮಾನದಿಂದ ಎನ್‌ಸಿಬಿ ಹೆಚ್ಚಿನ ವಿಚಾರಣೆಗೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಆರೋಪಿ ಅಹ್ಮದ್‌ ವಿಚಾರಣೆ ಸಂದರ್ಭದಲ್ಲಿ ಬೆಂಗಳೂರಿನ ಯಶಸ್‌ ಹೆಸರು ಪ್ರಸ್ತಾವವಾಗಿತ್ತು. ಹೀಗಾಗಿ ಯಶಸ್‌ಗೆ ನೋಟಿಸ್‌ ಜಾರಿ ಮಾಡಲಾಗಿದೆ. ಎನ್‌ಸಿಬಿ ಬೆಂಗಳೂರಿನ ಕಚೇರಿ ಬದಲಾಗಿ ಮುಂಬಯಿ ವಿಭಾಗೀಯ ಕಚೇರಿಗೆ ವಿಚಾರಣೆಗೆ ಬರಲು ಸೂಚಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಬಾಲಿವುಡ್‌ನಿಂದ ಸ್ಯಾಂಡಲ್‌ವುಡ್‌ಗೆ ?
ಡ್ರಗ್ಸ್‌ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ದಿಲ್ಲಿ ಮೂಲದ ವೀರೇನ್‌ ಖನ್ನಾ ಸ್ವಂತ ಈವೆಂಟ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆ ನಡೆಸುತ್ತಿದ್ದಾನೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ. ಈ ಮೂಲಕ ಮುಂಬಯಿ, ಬೆಂಗಳೂರು, ದಿಲ್ಲಿ ಸಹಿತ ಸಹಿತ ದೇಶದ ವಿವಿಧೆಡೆ ಸೆಲೆಬ್ರಿಟಿಗಳಾಗಿಯೇ ದೊಡ್ಡ ದೊಡ್ಡ ಪಾರ್ಟಿಗಳನ್ನು ಆಯೋಜಿಸುತ್ತಿದ್ದ. ಇದರಲ್ಲಿ ವಿವಿಧ ರಾಜ್ಯಗಳ ಚಿತ್ರರಂಗ ಕಲಾವಿದರು ಭಾಗಿಯಾಗುತ್ತಿದ್ದರು ಎಂದು ತನಿಖೆ ವೇಳೆ ಗೊತ್ತಾಗಿದೆ.

ಬೆಂಗಳೂರಿನ ಸಿಸಿಬಿ ಪ್ರಕರಣದ ಆರೋಪಿಗಳಾದ ನಟಿ ರಾಗಿಣಿ, ರಾಹುಲ್‌ ಟೋನ್ಸಿ, ಮಾಜಿ ಸಚಿವರ ಪುತ್ರ ಆದಿತ್ಯ ಆಳ್ವ, ರವಿಶಂಕರ್‌ ಮತ್ತು ಇತರ ಆರೋಪಿಗಳು ಬಾಲಿವುಡ್‌ ಕಲಾವಿದರು ಭಾಗಿಯಾಗುತ್ತಿದ್ದ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಇಲ್ಲಿ ಮಾದಕ ವಸ್ತು ಬಳಕೆಯಾಗುತ್ತಿತ್ತು ಎಂದು ಹೇಳಲಾಗಿದೆ. ಇದರಲ್ಲಿ ಯಾವೆಲ್ಲ ನಟ-ನಟಿಯರು ಮತ್ತು ಸೆಲೆಬ್ರಿಟಿಗಳು ಪಾಲ್ಗೊಳ್ಳುತ್ತಿದ್ದರು ಎಂದು ವಿಚಾರಣೆ ನಡೆಯುತ್ತಿದೆ.

ಆದಿತ್ಯ ಆಳ್ವ ಬಾಲಿವುಡ್‌ ನಟರೊಬ್ಬರ ಸಂಬಂಧಿ. ರಾಹುಲ್‌ ಟೋನ್ಸಿ ಕೂಡ ಬೆಂಗಳೂರು ಮಾತ್ರವಲ್ಲದೆ, ಮುಂಬಯಿ, ಶ್ರೀಲಂಕಾದಲ್ಲಿಯೂ ಪಾರ್ಟಿಗಳನ್ನು ಆಯೋಜಿಸುತ್ತಿದ್ದ. ಈ ಪಾರ್ಟಿಗಳಲ್ಲಿಯೂ ಬಾಲಿವುಡ್‌ ಮತ್ತು ಸ್ಯಾಂಡಲ್‌ವುಡ್‌ ಸಹಿತ ಹಲವು ಕಲಾವಿದರು ಪಾಲ್ಗೊಳ್ಳುತ್ತಿದ್ದರು ಎಂಬುದು ಗೊತ್ತಾಗಿದೆ.
ಹೀಗಾಗಿ ಎನ್‌ಸಿಬಿ ಮತ್ತು ಬೆಂಗಳೂರಿನ ಸಿಸಿಬಿ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ಆರಂಭಿಸಿದ್ದಾರೆ.

ಅಮೆರಿಕದಿಂದ ಆಮದು
ಯುಎಸ್‌ಎ ಮತ್ತು ಕೆನಡಾದಿಂದ ಅಕ್ರಮವಾಗಿ ಗಾಂಜಾ ಆಮದು ಮಾಡಿಕೊಳ್ಳಲಾಗುತ್ತಿದ್ದು, ವಿದೇಶಿ ಅಂಚೆ ಕಚೇರಿಗಳಿಂದ ಈ ಮಾದಕ ದ್ರವ್ಯವನ್ನು ವಶಕ್ಕೆ ಪಡೆದಾಗ ಅವುಗಳ ಸಂಪರ್ಕ ಕೊಂಡಿಗಳು ಬೆಳಕಿಗೆ ಬಂದಿವೆ. ನಿಖರ ಸುಳಿವಿನ ಮೇರೆಗೆ ಈ ಕಾರ್ಯಾಚರಣೆ ನಡೆಸಲಾಗಿದೆ.

ಗಾಂಜಾವನ್ನು ದಿಲ್ಲಿಯಿಂದ ಮುಂಬಯಿಗೆ, ಅಲ್ಲಿಂದ ಗೋವಾಕ್ಕೆ ಮತ್ತು ಗೋವಾದಿಂದ ಬೆಂಗಳೂರಿಗೆ ಸರಬರಾಜು ಮಾಡಲಾಗುತ್ತಿತ್ತು. ಬಾಲಿವುಡ್‌, ಸ್ಯಾಂಡಲ್‌ವುಡ್‌ನ‌ ಕೆಲವು ಗಣ್ಯರೂ ಡ್ರಗ್ಸ್‌ ಜಾಲದಲ್ಲಿ ಇರುವ ಸಾಧ್ಯತೆ ಇದೆ ಎಂದು ಎನ್‌ಸಿಬಿ ಮೂಲಗಳು ಶಂಕಿಸಿವೆ.

ಡಾರ್ಕ್‌ನೆಟ್‌ ವೆಬ್‌ಸೈಟ್‌ ಮೂಲಕವೇ ಗಾಂಜಾ ವ್ಯವಹಾರ ನಡೆಸುತ್ತಿದ್ದರು. ಖರೀದಿಸುವವರು ಮತ್ತು ಮಾರಾಟಗಾರರ ನಡುವೆ ಪರಿಚಯವಾಗದಂತೆ ನೋಡಿಕೊಳ್ಳಲಾಗುತ್ತದೆ. ಈ ರೀತಿಯ ಅಂತಾ ರಾಷ್ಟ್ರೀಯ ಡ್ರಗ್ಸ್‌ ಕಳ್ಳಸಾಗಣೆಯು ಬಹುತೇಕ ಕ್ರಿಪ್ಟೋ ಕರೆನ್ಸಿ ಮತ್ತು ಬಿಟ್‌ ಕಾಯಿನ್‌ ಮೂಲಕ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next