ಬೆಂಗಳೂರು: ಕಳೆದೊಂದು ತಿಂಗಳಲ್ಲಿ ಮಾದಕ ವಸ್ತು ದಂಧೆ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿರುವ ನಗರ ಪೊಲೀಸರು ಮೂವರು ವಿದೇಶಿ ಪ್ರಜೆಗಳು ಸೇರಿ 45 ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತರಿಂದ 117 ಕೆ.ಜಿ. ಗಾಂಜಾ , 11 ಕೆ.ಜಿ ಅಫೀಮು, 400 ಗ್ರಾಂ ಅಸೀಷ್ ಆಯಿಲ್, 50 ಗ್ರಾಂ ಕೊಕೇನ್, 236 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜೂನ್‌ನಲ್ಲಿ ಮಾದಕ ವಸ್ತು ಮಾರಾಟ ದಂಧೆಕೋರರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದು, ಅಕ್ರಮವಾಗಿ ನೆಲೆಸಿದಲ್ಲದೆ, ನೆರೆ ರಾಜ್ಯಗಳಿಂದ ಡ್ರಗ್ಸ್‌ಗಳನ್ನು ತರಿಸಿಕೊಂಡು ಮಾರಾಟ ಮಾಡುತ್ತಿದ್ದ ಮೂವರು ವಿದೇಶಿ ಪೆಡ್ಲರ್ ಗಳು ಮತ್ತು ಸ್ಥಳೀಯ 42 ಮಂದಿ ಸೇರಿ 45 ಮಂದಿ ಡ್ರಗ್ಸ್ ಪೆಡ್ಲರ್‌ಗಳನ್ನು ಬಂಧಿಸಲಾಗಿದೆ ಎಂದರು.
ಇದೇ ವೇಳೆ ಜೂನ್‌ನಲ್ಲಿ ಮಟ್ಕಾ, ಜೂಜಾಟ, ಕ್ರಿಕೆಟ್ ಬೆಟ್ಟಿಂಗ್ ಪ್ರಕರಣಗಳನ್ನು ಭೇದಿಸಲಾಗಿದೆ. ಅಲ್ಲದೆ, ಸಂಚಾರ ನಿಯಮ ಪಾಲಿಸದಿರುವುದು, ಶಸ್ತ್ರಾಸ್ತ್ರ ಕಾಯ್ದೆ, ಅನಧಿಕೃತ ಬಡ್ಡಿ ವ್ಯವಹಾರ ಸೇರಿ ವಿವಿಧ ಆರೋಪಗಳಡಿ ನಗರದ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ 179 ಪ್ರಕರಣಗಳಲ್ಲಿ 324 ಮಂದಿಯನ್ನು ಬಂಧಿಸಲಾಗಿದೆ.
ಹಾಗೆಯೇ ನಗರದ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ 10-20 ವರ್ಷಗಳ ಹಳೇಯ ಪ್ರಕರಣಗಳ ಆರೋಪಿಗಳನ್ನು ಬಂಧಿಸಿ ಕೋರ್ಟ್‌ಗೆ ಹಾಜರು ಪಡಿಸಲಾಗಿದ್ದು, ಪೋಕೊÕà ಪ್ರಕರಣ, ಕೊಲೆ ಸೇರಿ ಹಲವಾರು ಪ್ರಕರಣಗಳಲ್ಲಿ ಬಂಧನಕ್ಕೊಳಗಾಗಿದ್ದ ಆರೇಳು ಮಂದಿಗೆ ಕಠಿಣ ಕಾರಾಗೃಹ ಶಿಕ್ಷೆಯನ್ನು ಕೋರ್ಟ್ ವಿಧಿಸಿದೆ ಎಂದು ಮಾಹಿತಿ ನೀಡಿದರು.