ಮೈಸೂರು: ಶ್ರೀರಂಗಪಟ್ಟಣದಲ್ಲಿನ ಟಿಪ್ಪು ಸುಲ್ತಾನ್ ಕಾಲದ ಮದ್ದಿನಮನೆ ಸ್ಥಳಾಂತರಕ್ಕೆ ದಿನಾಂಕ ನಿಗದಿಯಾಗಿದ್ದು, ಮೈಸೂರು- ಕೊಡಗು ಸಂಸದ ಪ್ರತಾಪಸಿಂಹ ಸ್ಥಳ ಪರಿಶೀಲನೆ ನಡೆಸಿದರು. ಕಡೆಗೂ ಕಾಲ ಕೂಡಿ ಬಂದಿದ್ದು, ಎಲ್ಲವೂ ನಿಗದಿಯಂತೆ ನಡೆದರೆ ಮಾರ್ಚ್ ಅಂತ್ಯದೊಳಗೆ ಮದ್ದಿನಮನೆ ಸ್ಥಳಾಂತರಗೊಂಡು, ಮೈಸೂರು- ಬೆಂಗಳೂರು ಜೋಡಿ ರೈಲು ಮಾರ್ಗ ಕಾಮಗಾರಿ ಪೂರ್ಣಗೊಳ್ಳಲಿದೆ.
ಮೈಸೂರು- ಬೆಂಗಳೂರು ನಡುವೆ ಜೋಡಿ ರೈಲು ಹಳಿ ಕಾಮಗಾರಿಗೆ ಮದ್ದಿನಮನೆ ಅಡ್ಡಿಯಿಂದಾಗಿ ಒಂದೂವರೆ ಕಿ.ಮೀ.ನಷ್ಟು ಹಳಿ ಕಾಮಗಾರಿ ಸಂಪೂರ್ಣ ವಿಳಂಬವಾಗಿತ್ತು. ಹೀಗಾಗಿ ಪುರಾತನವಾದ ಮದ್ದಿನಮನೆ ಕಟ್ಟಡವನ್ನು ಅತ್ಯಾಧುನಿಕ ತಂತ್ರಜಾnನ ಬಳಕೆ ಮಾಡಿಕೊಂಡು ಸ್ಥಳಾಂತರಿಸುವ ಸಲುವಾಗಿ ಈಗಾಗಲೇ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ನೆನೆಗುದಿಗೆ ಬಿದ್ದಿದ್ದ ಮದ್ದಿನಮನೆ ಸ್ಥಳಾಂತರ ಕಾಮಗಾರಿ ಹಿನ್ನೆಲೆಯಲ್ಲಿ ಸಂಸದ ಪ್ರತಾಪ್ ಸಿಂಹ ಗುರುವಾರ ಸ್ಥಳ ಪರಿಶೀಲನೆ ನಡೆಸಿದರು. ಕಟ್ಟಡದ ಸ್ಥಳಾಂತರಕ್ಕೆಂದು ಮಾಡಿಕೊಳ್ಳಲಾಗಿರುವ ಸಿದ್ಧತೆ, ಬಳಸಲಾಗುತ್ತಿರುವ ತಂತ್ರಜಾnನ ಹಾಗೂ ಸ್ಥಳಾಂತರ ಮಾಡುವುದರಿಂದ ಕಟ್ಟಡಕ್ಕೆ ಯಾವುದೇ ಹಾನಿಯುಂಟಾಗದಿರುವುದು ಸೇರಿದಂತೆ ಇನ್ನಿತರ ವಿಷಯಗಳ ಕುರಿತಂತೆ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮದ್ದಿನಮನೆ ಕಟ್ಟಡ ಸ್ಥಳಾಂತರ ಕಾರ್ಯ ಸುಸೂತ್ರವಾಗಿ ನಡೆಯಲಿದೆ. ಮಾರ್ಚ್ 3ರಂದು ಕಟ್ಟಡವನ್ನು ಸ್ಥಳಾಂತರಗೊಳಿಸುವ ಕೆಲಸ ಆರಂಭವಾಗಲಿದ್ದು, ಇದು ಮುಗಿದ ಬಾಕಿ ಇರುವ ಬಳಿಕ ಜೋಡಿರೈಲು ಹಳಿ ಕಾಮಗಾರಿ ಮುಗಿಯಲಿದ್ದು, ಏಪ್ರಿಲ್ ಅಂತ್ಯದೊಳಗೆ ಅದು ಸಹ ಪೂರ್ಣಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಧಿಕಾರಿಗಳಿಂದ ಗೊಂದಲ: ಜೋಡಿ ರೈಲು ಮಾರ್ಗ ಕಾಮಗಾರಿ ಆರಂಭವಾದಾಗಲೇ ಟಿಪ್ಪು ಕಾಲದ ಮದ್ದಿನಮನೆ ಕಟ್ಟಡ ಇರುವುದು ರೈಲ್ವೆ ಅಧಿಕಾರಿಗಳ ಗಮನಕ್ಕೆ ಬಂದಿದೆ. ಹೀಗಾಗಿ ಅಲ್ಲಿಯವರೆಗೂ ಸುಮ್ಮನಿದ್ದ ಪ್ರಾಚ್ಯವಸ್ತು, ಪುರಾತತ್ವ ಮತ್ತು ಪರಂಪರೆ ಇಲಾಖೆ ಅಧಿಕಾರಿಗಳು ಸ್ಥಳಾಂತರ ಮಾಡುವ ಬಗ್ಗೆ ಗೊಂದಲ, ವಿವಾದ ಹುಟ್ಟುಹಾಕಿದರು.
ಪಾರಂಪರಿಕ ಕಟ್ಟಡಗಳು ಪಾಳುಬಿದ್ದು ಜನರಿಂದ ಮರೆಯಾಗುತ್ತಿದ್ದರೂ ಸುಮ್ಮನಿರುವ ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳು ಅಭಿವೃದ್ಧಿ ಕಾಮಗಾರಿ ಕೈಗೊಂಡಾಗ ವಿವಾದ ಹುಟ್ಟುಹಾಕುವಲ್ಲಿ ನಿಸ್ಸೀಮರು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ರೈಲ್ವೆ ಇಲಾಖೆ ನಿರ್ಮಾಣ ವಿಭಾಗದ ಸಿವಿಲ್ ಎಂಜಿನಿಯರ್ ರವಿಚಂದ್ರನ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದರು.
ಅಧುನಿಕ ತಂತ್ರಜಾnನ ಬಳಕೆ
ಮದ್ದಿನಮನೆ ತಳಪಾಯದಲ್ಲಿ ಅತ್ಯಾಧುನಿಕ ಗುಣಮಟ್ಟದ ಕಬ್ಬಿಣ ಹಾಕಲಾಗಿದೆ. ಮಾರ್ಚ್ 3 ಮತ್ತು 4ರಂದು ಕಟ್ಟಡ ಸ್ಥಳಾಂತರ ಕಾರ್ಯ ಆರಂಭಿಸಲಾಗುತ್ತಿದ್ದು, ದಿನಕ್ಕೆ 30-40 ಮೀಟರ್‌ವರೆಗೆ ಕಟ್ಟಡವನ್ನು ಸ್ಥಳಾಂತರ ಮಾಡಬಹುದಾಗಿದೆ. ಇದಾದ ಬಳಿಕ ಕಟ್ಟಡವನ್ನು ನಿಗದಿತ ಸ್ಥಳದಲ್ಲಿ ಇರಿಸಲು ಹಲವು ದಿನಗಳ ಅಗತ್ಯವಿದೆ. ಅಲ್ಲದೆ, ಕಟ್ಟಡ ಸ್ಥಳಾಂತರ ಮಾಡುವ ಸಂದರ್ಭದಲ್ಲಿ ಕಟ್ಟಡದಲ್ಲಿ ಯಾವುದೇ ಬಿರುಕು ಕಾಣಿಸದಂತೆ ಸುಣ್ಣದ ಚೂರು, ಹಾಲೋಬ್ರಿಕ್ಸ್ ಇಟ್ಟಿಗೆ ಜತೆಗೆ ಕಬ್ಬಿಣವನ್ನು ಬಳಸಲಾಗುತ್ತಿದೆ.