ಬೆಂಗಳೂರು: ವಿದ್ಯಾರ್ಥಿಗಳ ಬ್ಯಾಂಕ್ ಖಾತೆ ಬಳಸಿ ಡ್ರಗ್ಸ್ ವ್ಯವಹಾರ ನಡೆಸುತ್ತಿದ್ದ ವಿದೇಶಿ ಪ್ರಜೆ ಸಂಪಿಗೆಹಳ್ಳಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಆಫ್ರಿಕಾ ಮೂಲದ ಪ್ರಿನ್ಸ್ ಬಂಧಿತ.
ಆರೋಪಿಯಿಂದ 75 ಸಾವಿರ ರೂ. ಮೌಲ್ಯದ ಗಾಂಜಾ ಜಪ್ತಿ ಮಾಡಲಾಗಿದೆ. ಆರೋಪಿ ಪ್ರಿನ್ಸ್ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಮಾದಕ ವಸ್ತುಗಳಿಗೆ ದಾಸರಾಗಿರುವ ವಿದ್ಯಾರ್ಥಿಗಳ ಬ್ಯಾಂಕ್ ಖಾತೆ ಮಾಹಿತಿ ಪಡೆಯುತ್ತಿದ್ದ. ಆ ವಿದ್ಯಾರ್ಥಿಗಳಿಗೆ ಖರ್ಚಿಗೆಂದು ತಿಂಗಳಿಗೆ ಎರಡರಿಂದ ಮೂರು ಸಾವಿರ ರೂ. ಬ್ಯಾಂಕ್ ಖಾತೆಗೆ ಜಮೆ ಮಾಡುತ್ತಿದ್ದ. ನಂತರ ಅವರ ಡೆಬಿಟ್ ಕಾರ್ಡ್ ಬಳಸಿ ಅವರ ಬ್ಯಾಂಕ್ ಖಾತೆ ಬಳಸಿಕೊಂಡು ಡ್ರಗ್ಸ್ ದಂಧೆ ನಡೆಸುತ್ತಿದ್ದ. ಆದರೆ, ಈ ಸಂಗತಿ ಬ್ಯಾಂಕ್ ಖಾತೆ ಮಾಹಿತಿ ಕೊಟ್ಟ ವಿದ್ಯಾರ್ಥಿಗಳ ಗಮನಕ್ಕೆ ಬಂದಿರಲಿಲ್ಲ. ತನ್ನ ಗ್ರಾಹಕರಿಗೆ ವಾಟ್ಸಾಪ್ ಮೂಲಕ ಲೊಕೇಷನ್ ಶೇರ್ ಮಾಡಿ ನಂತರ ನಿಗದಿತ ಸ್ಥಳದಲ್ಲಿ ಡ್ರಗ್ಸ್ ಅಡಗಿಸಿಡುತ್ತಿದ್ದ. ಒಂದು ಪೇಮೇಂಟ್ ಲಿಂಕ್ ಕಳಿಸಿ ಪೇಮೆಂಟ್ ಆದ ಬಳಿಕ ಡ್ರಗ್ಸ್ ಹಾಗೂ ಅದನ್ನು ಇಟ್ಟಿರುವ ಜಾಗದ ಫೋಟೋ ಹಾಕಿ ಸ್ಥಳದ ವಿವರ ನೀಡುತ್ತಿದ್ದ.
ಡ್ರಗ್ಸ್ ಮಾರಾಟ ಮಾಡಿದ ಬಳಿಕ ವಿದ್ಯಾರ್ಥಿಗಳ ಅಕೌಂಟ್ ನಂಬರ್ ನೀಡಿ ಅದಕ್ಕೆ ಗೂಗಲ್ ಪೇ ಮಾಡಿಸುತ್ತಿದ್ದ. ನಂತರ ವಿದ್ಯಾರ್ಥಿಗಳ ಹೆಸರಿನಲ್ಲಿರುವ ಡೆಬಿಟ್ ಕಾರ್ಡ್ ಬಳಸಿ ಹಣ ಡ್ರಾ ಮಾಡುತ್ತಿದ್ದ. ಡ್ರಗ್ಸ್ ಮಾರಾಟ ಮಾಡಲು ತನ್ನದೇ ದೇಶದ ಸ್ನೇಹಿತರ ಸಹಾಯ ಪಡೆಯುತ್ತಿದ್ದ. ಇತ್ತೀಚೆಗೆ ಸಂಪಿಗೆಹಳ್ಳಿಯಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿತ್ತು. ಕೂಡಲೇ ಆಕೆಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಅಸಲಿ ಸಂಗತಿ ಬೆಳಕಿಗೆ ಬಂದಿದೆ.