Advertisement

ಡ್ರಗ್ ಪ್ರಕರಣ: ನಟಿ ಸಂಜನಾ ಗಲ್ರಾನಿಗೆ ರಿಲೀಫ್, ಜಾಮೀನು ಮಂಜೂರು

03:53 PM Dec 11, 2020 | keerthan |

ಬೆಂಗಳೂರು: ಡ್ರಗ್ಸ್ ಮಾರಾಟ ಜಾಲದ ಜೊತೆ ನಂಟು ಹೊಂದಿದ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟಿ ಸಂಜನಾ ಗಲ್ರಾನಿಗೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

Advertisement

ಅನಾರೋಗ್ಯದ ಕಾರಣಗಳ ಹಿನ್ನೆಲೆಯಲ್ಲಿ 85 ದಿನಗಳ ಬಳಿಕ ಕೊನೆಗೂ ಸಂಜನಾ ಗಲ್ರಾನಿಗೆ ಬಂಧನದಿಂದ ಮುಕ್ತ ಸಿಕ್ಕಿದೆ. ಷರತ್ತು ಬದ್ಧ ಜಾಮೀನು ಮಂಜೂರು ಮಾಡಿ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.

3 ಲಕ್ಷ ಮೊತ್ತಕ್ಕೆ ಭದ್ರತಾ ಠೇವಣಿ ಹಾಗೂ ಇಬ್ಬರ ಶ್ಯೂರಿಟಿ ನೀಡಬೇಕು. ತಿಂಗಳಿಗೆ ಎರಡು ಬಾರಿ ತನಿಖಾಧಿಕಾರಿಗಳ ಎದುರು ಹಾಜರಾಗಬೇಕು, ತನಿಖೆಗೆ ಸಹಕರಿಸಬೇಕು, ಸಾಕ್ಷ್ಯ ನಾಶಪಡಿಸಬಾರದು ಎಂದು ಷರತ್ತುಗಳನ್ನು ವಿಧಿಸಲಾಗಿದೆ.

ನಟಿ ಸಂಜನಾ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ, ಹೀಗಾಗಿ ಅವರಿಗೆ ಜಾಮೀನು ನೀಡಬೇಕು ಎಂದು ಸಂಜನಾ ಪರ ವಕೀಲರು ವಾದ ಮಂಡಿಸಿದ್ದರು. 2018ರಲ್ಲಿ ಸರ್ಜರಿಗೆ ಒಳಗಾಗಿದ್ದ ಸಂಜನಾ 2019ರಿಂದ ಅಸ್ತಮಾ ಮತ್ತು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ವಕೀಲರು ಕೋರ್ಟ್ ಗೆ ತಿಳಿಸಿದ್ದರು. ಹೀಗಾಗಿ ಸಂಜನಾ ಆರೋಗ್ಯ ತಪಾಸಣೆ ಮಾಡಿ, ವರದಿ ಸಲ್ಲಿಸಲು ಕೋರ್ಟ್ ಆದೇಶಿಸಿತ್ತು.

ಡ್ರಗ್ ಪ್ರಕರಣದಲ್ಲಿ ಸಂಜನಾ ಹೆಸರು ಕೇಳಿಬಂದ ಹಿನ್ನಲೆ ಸಿಸಿಬಿ ಪೊಲೀಸರು ನಟಿಯ ಮನೆಗೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದರು. ನಂತರ ಸಂಜನಾರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿ ಬಂಧನಕ್ಕೊಳಪಡಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next