ಬೀದರ: ದೇವದಾಸಿ ಕುಟುಂಬದಿಂದ ಬಂದ ಎಂ.ಎಸ್.ಸುಬ್ಬಲಕ್ಷ್ಮೀ ಅವರು ತಮ್ಮ ಕಲೆಯ ಮೂಲಕ ವಿಶ್ವದೆಲ್ಲೆಡೆ ಖ್ಯಾತಿ ಪಡೆದು ಸ್ತ್ರೀಕುಲಕ್ಕೆ ಮಾದರಿಯಾಗಿದ್ದಾರೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ| ವಿಕ್ರಮ ವಿಸಾಜಿ ಹೇಳಿದರು.
ನಗರದ ಕರ್ನಾಟಕ ಸಾಹಿತ್ಯ ಸಂಘದಲ್ಲಿ ಸಂಸ್ಕೃತಿ ಇಲಾಖೆ, ಅಕ್ಕಮಹಾದೇವಿ ಮಹಿಳಾ ಮಂಡಳದ ಆಶ್ರಯದಲ್ಲಿ ನಡೆದ ಡಾ| ಎಂ.ಎಸ್. ಸುಬ್ಬಲಕ್ಷ್ಮೀಯವರ ಜನ್ಮ ಶತಮಾನೋತ್ಸವ ಹಾಗೂ ಜಾನಪದ ಪರಿಷತ್ ಜಿಲ್ಲಾ ಮಹಿಳಾ ಘಟಕ ಉದ್ಘಾಟನಾ ಸಮಾರಂಭದ ಸಮಾರೋಪ ಭಾಷಣ ಮಾಡಿದ ಅವರು, ಜಾನಪದ ಹಾಡುಗಳು ಕೇವಲ ಕೊರಳಿನಿಂದ ಬರುವ ಧ್ವನಿಯಾಗದೇ ಅದು ನಾಡು- ನುಡಿ, ನೆಲ-ಜಲ, ಆಚಾರ-ವಿಚಾರಗಳನ್ನು ಉಳಿಸಿ ಬೆಳೆಸುವ ನಾಡ ಧ್ವನಿಯಾಗಲಿ. ಜಾನಪದ ಎಂಬುದು ನಿಸ್ವಾರ್ಥದಿಂದ ಮಾಡುವ ಸೇವೆ. ಹೀಗಾದಾಗ ಮಾತ್ರ ಕಲಾವಿದರು ಬೆಳೆಯಲು ಸಾಧ್ಯ ಎಂದರು.
ಗಡಿ ಜಿಲ್ಲೆ ಬೀದರನಲ್ಲಿ ಕಲೆ- ಕಲಾವಿದರನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಜಾನಪದ ಪರಿಷತ್ತು ಮಾಡುತ್ತಿದೆ. ಕರ್ನಾಟಕದ ಭೂಪಟದಲ್ಲಿ ಬೀದರ ಕೇವಲ ಹೆಸರಿಗೆ ಮಾತ್ರ ಕುಟವಾಗಿತ್ತು. ಆದರೆ, ಇಲ್ಲಿರುವ ಸಾಧಕರ ಗುರುತಿಸುವಿಕೆ ಮತ್ತು ಪ್ರಗತಿ ಗಿರಲಿಲ್ಲ. ಇಂದು ಅನೇಕ ಕಲಾವಿದರು ಶಾಸ್ತ್ರೀಯ, ಕರ್ನಾಟಕ ಸಂಗೀತ, ಜಾನಪದ ನೃತ್ಯದಂತಹ ಅನೇಕ ಕಲೆಯನ್ನು ದೇಶ ವಿದೇಶದಲ್ಲಿ ಪ್ರದರ್ಶಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಹೇಳಿದರು.
ಶಂಭುಲಿಂಗ ವಾಲದೊಡ್ಡಿ ಮಾತನಾಡಿ, ಪ್ರಶಸ್ತಿಗಳು ಸಾಧಕರ ಜವಾಬ್ದಾರಿ ಹೆಚ್ಚಿಸುತ್ತವೆ. ಸಾಧಕನು ಮೊದಲು ಮನೆ ಗೆದ್ದು ನಂತರ ಸಮಾಜ ಗೆಲ್ಲಲು ಪ್ರಯತ್ನಿಸಬೇಕು ಎಂದರು. ರಾಜಕುಮಾರ ಹೆಬ್ಟಾಳೆ, ಸಂಜುಕುಮಾರ ಜುಮ್ಮಾ, ಎಸ್.ಬಿ. ಕುಚಬಾಳ, ಪ್ರೊ|ಸ್.ಬಿ. ಬಿರಾದಾರ, ನಿಜಲಿಂಗಪ್ಪ ತಗಾರೆ, ಮಹಾರುದ್ರ ಡಾಕುಳಗಿ ವೇದಿಕೆಯಲ್ಲಿದ್ದರು. ಸುನೀತಾ ದಾಡಗೆ ನಿರೂಪಿಸಿದರು. ಮಲ್ಲಮ್ಮಾ ಸಂತಾಜಿ ಸ್ವಾಗತಿಸಿದರು. ಸರ್ವಮಂಗಳಾ ವಂದಿಸಿದರು.
ಸಂಗೀತ ಮತ್ತು ನೃತ್ಯ ಅಕಾಡೆಮಿ ಸದಸ್ಯ ಪ್ರೊ| ಎಸ್.ವಿ.ಕಲ್ಮಠ, ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ, ದತ್ತಿ ಪ್ರಶಸ್ತಿ ಪುರಸ್ಕೃತ ಶಂಭುಲಿಂಗ ವಾಲದೊಡ್ಡಿ, ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯೆ ಡಾ| ಜಯದೇವಿ ಗಾಯಕವಾಡ, ಜಾನಪದ ಗಾಯನದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಲಕ್ಷ್ಮಣರಾವ್ ಕಾಂಚೆ ಮತ್ತು ಕಾಶಿನಾಥ ಪಾಟೀಲ ಅವರನ್ನು ಸನ್ಮಾನಿಸಲಾಯಿತು.