Advertisement

Drought: 223 ತಾಲೂಕುಗಳ ರೈತರಿಗೆ ತಲಾ 2 ಸಾವಿರ ರೂ.ಬರ ಪರಿಹಾರ- ಸಿಎಂ

12:52 AM Dec 01, 2023 | Team Udayavani |

ಬೆಂಗಳೂರು: ಬರ ಘೋಷಿತ 223 ತಾಲೂಕುಗಳ ರೈತರಿಗೆ ಮೊದಲ ಕಂತಿನಲ್ಲಿ ಗರಿಷ್ಠ 2 ಸಾವಿರ ರೂ.ವರೆಗೆ ಬೆಳೆ ನಷ್ಟ ಪರಿಹಾರ ಕೊಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದರು.

Advertisement

ರಾಜ್ಯದ 236 ತಾಲೂಕುಗಳ ಪೈಕಿ ಎನ್‌ಡಿಆರ್‌ಎಫ್ ಮಾರ್ಗಸೂಚಿಯ ಪ್ರಕಾರ 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. 48.19 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆ ನಷ್ಟ ಆಗಿದೆ. 18,171.44 ಕೋಟಿ ರೂ. ಆರ್ಥಿಕ ನೆರವಿಗಾಗಿ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದೇವೆ. ಕೇಂದ್ರದ ಪರಿಹಾರಕ್ಕೆ ಕಾಯದೆ ಮುಂಗಡವಾಗಿ ನಾವೇ ಪರಿಹಾರ ಮೊತ್ತ ಬಿಡುಗಡೆ ಮಾಡುತ್ತಿದ್ದೇವೆ ಎಂದು ಗುರುವಾರ ಗೃಹಕಚೇರಿ “ಕೃಷ್ಣಾ”ದಲ್ಲಿ ಅವರು ಪತ್ರಿಕಾಗೋಷ್ಠಿಯಲ್ಲಿ ಅವರು ವಿವರ ನೀಡಿದರು.

ನಮ್ಮ ರೈತರಿಗೆ ಸಮಸ್ಯೆ ಆಗಬಾರದು ಎಂದು ನಾವೇ ಮೊದಲ ಕಂತಿನಲ್ಲಿ ತಲಾ 2 ಸಾವಿರ ರೂ.ವರೆಗೆ ಮುಂಗಡ ಪರಿಹಾರ ನೀಡಲು ನಿರ್ಧರಿಸಿದ್ದೇವೆ, ನಾಲ್ಕೈದು ದಿನಗಳಲ್ಲಿ ಈ ಬಗ್ಗೆ ಆದೇಶ ಹೊರಬೀಳ ಲಿದೆ. ಸದ್ಯಕ್ಕೆ ಜಮೀನಿನ ಅಳತೆ ಆಧಾರದ ಮೇಲೆ ನಷ್ಟವಾಗಿರುವ ಬೆಳೆಯ ಪ್ರಮಾಣ ಆಧರಿಸಿ ಪರಿಹಾರ ಕೊಡಲಾಗುತ್ತದೆ. ಫ್ರೂಟ್ಸ್‌ ತಂತ್ರಾಂಶದ ಮೂಲಕ ನೋಂದಣಿ ಮಾಡಿಕೊಂಡಿರುವ ರೈತರ ಸಹಿತ ಜಿಲ್ಲಾಧಿ ಕಾರಿಗಳಿಂದ ವರದಿ ಪಡೆದು ರೈತರ ಬ್ಯಾಂಕ್‌ ಖಾತೆಗೆ ನೇರವಾಗಿ ಹಣ ಜಮೆ ಮಾಡಲಾಗುತ್ತದೆ. ಕೇಂದ್ರ ಸರಕಾರ ಕೊಡುವ ಪರಿಹಾರ ಕಡಿಮೆಯಾದರೆ ಅಂತಿಮ ಕಂತಿನಲ್ಲಿ ರಾಜ್ಯ ಸರಕಾರವೇ ವ್ಯತ್ಯಾಸ ಸರಿಪಡಿಸಲು ಕೂಡ ತೀರ್ಮಾನಿಸಿದೆ ಎಂದು ಭರವಸೆ ನೀಡಿದರು.

ಸ್ಪಂದಿಸದ ಕೇಂದ್ರ
ಬರ ಪರಿಹಾರಕ್ಕಾಗಿ ಕೇಂದ್ರ ಸರಕಾರಕ್ಕೆ ಇದುವರೆಗೆ ಎರಡು-ಮೂರು ಬಾರಿ ಪತ್ರ ಬರೆಯಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಬರ ಇರುವಲ್ಲೆಲ್ಲ ನಾನೇ ಸಿಎಂ ಆಗಿದ್ದೇನಾ?
ಬರ ಪರಿಹಾರದ ವಿಚಾರದಲ್ಲಿ ಕೇಂದ್ರ ಸರಕಾರದ ಕಡೆಗೆ ಬೊಟ್ಟು ಮಾಡುವ ರಾಜ್ಯ ಸರಕಾರ ರೈತರಿಗಾಗಿ ಏನು ಮಾಡಿದೆ ಎಂಬ ಬಿಜೆಪಿಯವರ ಪ್ರಶ್ನೆಗೆ ಉತ್ತರವಾಗಿ ಈ ಬರ ಪರಿಹಾರವನ್ನು ನೀಡುತ್ತಿಲ್ಲ ಎಂದು ಸಿಎಂ ತಿರು ಗೇಟು ನೀಡಿದರು. ಅಧಿವೇಶನದಲ್ಲಿ ಈ ವಿಚಾರ ಪ್ರಸ್ತಾವಿಸುತ್ತಾರೆ ಎಂದು ಅಂಜಿಯೂ ಕೊಡುತ್ತಿಲ್ಲ. ಕೇಂದ್ರ ಸರಕಾರ ಕೊಡದ ಕಾರಣ ನಮ್ಮ ರೈತರಿಗೆ ತೊಂದರೆ ಆಗಬಾರದೆಂದು ಕೊಡುತ್ತಿದ್ದೇವೆ. ರಾಜ್ಯದಲ್ಲಿ 86.07 ಲಕ್ಷ ರೈತರಿದ್ದರೆ ಕಿಸಾನ್‌ ಸಮ್ಮಾನ್‌ ಯೋಜನೆಯಡಿ 47-53 ಲಕ್ಷ ರೈತರಿಗೆ ಮಾತ್ರ ಹಣ ಕೊಡುತ್ತಿದ್ದರು. ಬರಗಾಲದ ಹಿನ್ನೆಲೆಯಲ್ಲಿ ನರೇಗಾದ ಅಡಿ 100 ದಿನ ಇರುವ ಮಾನವ ದಿನಗಳನ್ನು 150ಕ್ಕೆ ಹೆಚ್ಚಿಸಲು ಅನುಮತಿ ಕೇಳಿದರೂ ಕೊಡುತ್ತಿಲ್ಲ. ನಾನು ಸಿಎಂ ಆದ ಮೇಲೆ ಬರ ಬಂದಿದೆ ಎನ್ನುವ ಬಿಜೆಪಿಯವರು ದೇಶದಲ್ಲಿ ಬರ ಪರಿಸ್ಥಿತಿ ಎದುರಿಸುತ್ತಿರುವ ಇತರ 12 ರಾಜ್ಯಗಳಲ್ಲಿಯೂ ನಾನೇ ಮುಖ್ಯಮಂತ್ರಿ ಆಗಿದ್ದೇನೆಯೇ ಎಂಬ ಪ್ರಶ್ನೆಗೆ ಉತ್ತರಿಸಬೇಕು ಎಂದು ಸಿಎಂ ಹೇಳಿದರು.

Advertisement

ಕೇಂದ್ರದ ಪರಿಹಾರಕ್ಕೆ ಕಾಯುವುದಿಲ್ಲ
ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ ಮಳೆಯಾಶ್ರಿತ ಪ್ರದೇಶದಲ್ಲಿ ಬೆಳೆ ನಷ್ಟಕ್ಕೆ ಪ್ರತೀ ಹೆಕ್ಟೇರ್‌ಗೆ 8,550 ರೂ., ನೀರಾವರಿ ಪ್ರದೇಶಕ್ಕೆ 17 ಸಾವಿರ ರೂ. ಹಾಗೂ ಬಹುವಾರ್ಷಿಕ ಬೆಳೆ ಬೆಳೆಯುವ ಭೂಮಿಗೆ 22,500 ರೂ. ಇನ್‌ಪುಟ್‌ ಸಬ್ಸಿಡಿಯನ್ನು ಕೇಂದ್ರ ಸರಕಾರ ಕೊಡಬೇಕು. ಕೇಂದ್ರ ಸರಕಾರ ಬರ ಪರಿಹಾರ ಕೊಡುವುದು ತಡ ಆಗಿರುವುದರಿಂದ ಕಾಯಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next