Advertisement

ಅಂತೂ ಬಂತು ಬರ ಪರಿಹಾರ: ರಾಜ್ಯಕ್ಕೆ 3,454 ಕೋ.ರೂ. ಬರ ಪರಿಹಾರ ಬಿಡುಗಡೆ

01:54 AM Apr 28, 2024 | Team Udayavani |

ಬೆಂಗಳೂರು: ಉತ್ತರ ಕರ್ನಾಟಕ ಭಾಗದ 14 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮೇ 7ರಂದು ನಡೆಯಲಿರುವ 2ನೇ ಹಂತದ ಮತದಾನಕ್ಕೆ ಚುನಾವಣ ಪ್ರಕ್ರಿಯೆ ಬಿಸಿಯೇರುತ್ತಿರುವ ಹೊಸ್ತಿಲಲ್ಲೇ ಕೇಂದ್ರ ಸರಕಾರವು 3,454 ಕೋಟಿ ರೂ. ಬರ ಪರಿಹಾರ ನೆರವನ್ನು ರಾಜ್ಯ ಸರಕಾರಕ್ಕೆ ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ಪರಿಹಾರ ಬಿಡುಗಡೆಯ ಹೆಗ್ಗಳಿಕೆ ಪಡೆಯುವುದಕ್ಕಾಗಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರ ಮಧ್ಯೆ ವಾಗ್ಯುದ್ಧ ಪ್ರಾರಂಭವಾಗಿದೆ.

Advertisement

ಕೇಂದ್ರ ಸರಕಾರವು ಒಟ್ಟು 3,498.82 ಕೋ.ರೂ. ಬಿಡುಗಡೆಯನ್ನು ಅನುಮೋದಿಸಿದೆ. ಎಸ್‌ಡಿಆರ್‌ಎಫ್ ನಿಧಿಗೆ 2023ರ ಎಪ್ರಿಲ್‌ನಲ್ಲಿ ಕೇಂದ್ರ ಸರಕಾರ ಬಿಡುಗಡೆ ಮಾಡಿದ್ದ ನೆರವಿನ ಪೈಕಿ 44.60 ಕೋ.ರೂ. ಮಿಗತೆಯಿದ್ದು, ಅದನ್ನು ಕಳೆದು ಈಗ 3,454.22 ಕೋ.ರೂ. ನೆರವು ಲಭ್ಯವಾಗಲಿದೆ.

ಸುಮಾರು 18,000 ಕೋಟಿ ರೂ. ಅನುದಾನ ನೀಡಬೇಕೆಂದು ರಾಜ್ಯ ಸರಕಾರ 2023ರ ಸೆಪ್ಟಂಬರ್‌ನಲ್ಲಿ ಮನವಿ ಸಲ್ಲಿಸಿತ್ತು. ಅದಕ್ಕೆ ಕೇಂದ್ರ ಸ್ಪಂದಿಸಿಲ್ಲ ಎಂದು ಕಾಲಕಾಲಕ್ಕೆ ಹೋರಾಟ ರೂಪಿಸಿದ ರಾಜ್ಯ ಸರಕಾರ ಅಂತಿಮವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಈ ಬಗ್ಗೆ ಮನವಿ ಸಲ್ಲಿಸಿತ್ತು. ವಿಚಾರಣೆ ಸಂದರ್ಭದಲ್ಲಿ ವಾರದೊಳಗಾಗಿ ಕ್ರಮ ಕೈಗೊಳ್ಳುವುದಾಗಿ ಪ್ರಮಾಣ ಪತ್ರ ಸಲ್ಲಿಸಿದ ಕೇಂದ್ರ, ಬಾಕಿ ಸೇರಿದಂತೆ ಈಗ 3,454 ಕೋಟಿ ರೂ.ಗಳನ್ನು ಎನ್‌ಡಿಆರ್‌ಎಫ್ ನಿಯಮಾವಳಿಗಳ ಅನ್ವಯ ಬಿಡುಗಡೆ ಮಾಡಿದೆ.

ಆದರೆ ಕೇಂದ್ರದ ಈ ಕ್ರಮದ ಬಗ್ಗೆ ರಾಜ್ಯ ಸರಕಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನಾವು ಕೇಳಿದ ಅನುದಾನದಲ್ಲಿ ಶೇ. 20ರಷ್ಟನ್ನೂ ನೀಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸಿಡಿಮಿಡಿ ವ್ಯಕ್ತಪಡಿಸಿದ್ದು, ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ನೀಡಿದಂತಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಆದರೆ ಬಿಜೆಪಿ ಮಾತ್ರ ಈ ಬಗ್ಗೆ ತೀವ್ರ ಸಂಭ್ರಮ ವ್ಯಕ್ತಪಡಿಸಿದ್ದು, ಬರದಿಂದ ಕಂಗೆಟ್ಟಿದ್ದ ರಾಜ್ಯಕ್ಕೆ ಪ್ರಧಾನಿ ಮೋದಿ ನೆರವಿನ ಹಸ್ತ ಚಾಚಿದ್ದಾರೆ ಎಂದು ಧನ್ಯವಾದ ಸಮರ್ಪಿಸಿದೆ.

ಗೆಲುವಿನ ಕದನ
ಇದು ನಮ್ಮ ಕಾನೂನು ಹೋರಾಟಕ್ಕೆ ಸಿಕ್ಕ ಜಯ ಎಂದು ಕಾಂಗ್ರೆಸ್‌ ಹೇಳಿದೆ. ಇದಕ್ಕೆ ತಿರುಗೇಟು ನೀಡಿದ ಬಿಜೆಪಿ, “ನಿಮ್ಮ ಹೋರಾಟಕ್ಕೆ ಸಿಕ್ಕಿದ ಜಯವಾಗಿದ್ದರೆ ಕರ್ನಾಟಕಕ್ಕೆ ಮಾತ್ರ ಅನುದಾನ ಸಿಗಬೇಕಿತ್ತು. ತಮಿಳು ನಾಡಿಗೂ ನೆರವು ನೀಡಲಾಗಿದೆ. ಚುನಾವಣ ಆಯೋಗ ಹಣ ಬಿಡುಗಡೆಗೆ ಒಪ್ಪಿಗೆ ನೀಡಿದ್ದರಿಂದ ಕೇಂದ್ರ ನೆರವಿಗೆ ಧಾವಿಸಿದೆ. ಇದರಲ್ಲೂ ಕಾಂಗ್ರೆಸ್‌ ಲಾಭ-ನಷ್ಟದ ಲೆಕ್ಕಾಚಾರ ನಡೆಸಬೇಕಿಲ್ಲ’ ಎಂದು ಹೇಳಿಕೊಂಡಿದೆ.

Advertisement

ಬರ ಪರಿಹಾರ
ಕದನದ ಹಿನ್ನೋಟ
-ಸೆಪ್ಟಂಬರ್‌ನಲ್ಲಿ ಕೇಂದ್ರಕ್ಕೆೆ ಮೊದಲ ಮನವಿ
-ಸಿಎಂ ಸಿದ್ದರಾಮಯ್ಯ ಅವರಿಂದ ಪ್ರಧಾನಿ ಭೇಟಿ
-ರಾಜ್ಯ ಸಚಿವರ ನಿಯೋಗದಿಂದ ಅಮಿತ್‌ ಶಾ ಹಾಗೂ ನಿರ್ಮಲಾ ಸೀತಾರಾಮನ್‌ ಭೇಟಿ
-ಕೇಂದ್ರದಿಂದ ಸೂಕ್ತ ಸ್ಪಂದನೆ ಲಭಿಸದ ಕಾರಣಕ್ಕೆ ಬಹಿರಂಗ ವಾಗ್ವಾದ
-ಜಿಎಸ್‌ಟಿ ಸಭೆ ಬಳಿಕ ಮತ್ತೆ ಕೇಂದ್ರ ವಿತ್ತ ಸಚಿವರನ್ನು ಭೇಟಿ ಮಾಡಿದ ಕೃಷ್ಣ ಬೈರೇಗೌಡ
-ಕೇಂದ್ರ ತಂಡದಿಂದ ನವೆಂಬರ್‌ ವೇಳೆಗೆ ರಾಜ್ಯ ಪ್ರವಾಸ
-ರಾಜ್ಯದಿಂದ ಪ್ರಸ್ತಾವ ಸಲ್ಲಿಕೆಯಲ್ಲಿ ವಿಳಂಬ ಎಂದ ಹಣಕಾಸು ಇಲಾಖೆ
-ರಾಜ್ಯ ಸರಕಾರದಿಂದ “ನನ್ನ ತೆರಿಗೆ ನನ್ನ ಪಾಲು’ ಅಭಿಯಾನ
-ಸಿದ್ದರಾಮಯ್ಯ ನೇತೃತ್ವದಲ್ಲಿ ದಿಲ್ಲಿಯಲ್ಲಿ ಸಚಿವರು- ಶಾಸಕರೊಂದಿಗೆ ಕೇಂದ್ರದ ವಿರುದ್ಧ ಪ್ರತಿಭಟನೆ
-ರಾಜ್ಯ ವಿಧಾನಸಭೆಯಲ್ಲಿ ಕೇಂದ್ರದ ವಿರುದ್ಧ ನಿರ್ಣಯ ಮಂಡನೆ
-ಸು. ಕೋರ್ಟ್‌ನಲ್ಲಿ ಕೇಂದ್ರದ ವಿರುದ್ಧ ದಾವೆ
-ವಿಳಂಬಕ್ಕೆ ಚುನಾವಣ ಆಯೋಗದತ್ತ ಬೆರಳು ತೋರಿದ ನಿರ್ಮಲಾ
-ಸುಪ್ರೀಂನಲ್ಲಿ ಕೇಂದ್ರಕ್ಕೆ ಹಿನ್ನಡೆ, ವಾರದಲ್ಲಿ ಬಿಡುಗಡೆ ಮಾಡುವ ಭರವಸೆ
-ಈಗ ಷರತ್ತುಗಳೊಂದಿಗೆ ಹಣ ಬಿಡುಗಡೆ

ಕೇಂದ್ರದ ಆದೇಶದಲ್ಲಿ ಏನಿದೆ?
-ಇದು 2024-25ನೇ ಸಾಲಿನ ಎನ್‌ಡಿಆರ್‌ಎಫ್ ನೆರವು
-ನೈಸರ್ಗಿಕ ವಿಕೋಪಕ್ಕಾಗಿ ಪರಿಹಾರ ನೆರವು
-ಕಳೆದ ಅಕ್ಟೋಬರ್‌ ತಿಂಗಳಲ್ಲಿ ಕೇಂದ್ರ ಗೃಹ ಇಲಾಖೆ ಮಾಡಿದ ಶಿಫಾರಸಿನ ಅನ್ವಯ ಬಿಡುಗಡೆ
-ನಿಗದಿತ ಹಣವನ್ನು ಆರ್‌ಬಿಐ ತತ್‌ಕ್ಷಣ ರಾಜ್ಯಕ್ಕೆ ಬಿಡುಗಡೆ ಮಾಡಬೇಕು
-15ನೇ ಹಣಕಾಸು ಆಯೋಗದ ಶಿಫಾರಸಿನ ಅನ್ವಯ ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರವೇ ಹಣ ಖರ್ಚು ಮಾಡಬೇಕು

ಎಸ್‌ಡಿಆರ್‌ಎಫ್ನಲ್ಲಿ ಮಿಗತೆ
44.60 ಕೋ.ರೂ. ಕಳೆದು ಲೆಕ್ಕ
ಕರ್ನಾಟಕ ಹಾಗೂ ತಮಿಳುನಾಡುಗಳಿಗೆ ಸೇರಿ ಒಟ್ಟು 3,730.30 ಕೋಟಿ ರೂ. ಘೋಷಣೆಯಾಗಿದ್ದು, ಅದರಲ್ಲಿ ಕರ್ನಾಟಕಕ್ಕೆ ಬರ ಪರಿಹಾರವಾಗಿ ಎಸ್‌ಡಿಆರ್‌ಎಫ್ನಲ್ಲಿ ಈಗಾಗಲೇ ಮಿಗತೆಯಾಗಿರುವ 44.60 ಕೋಟಿ ರೂ.ಗಳನ್ನು ಕೇಂದ್ರ ಗೃಹ ಇಲಾಖೆ ಅನುಮೋದಿಸಿರುವ 3,498.82 ಕೋಟಿ ರೂ.ಗಳಿಂದ ಕಳೆದು 3,454.22 ಕೋಟಿ ರೂ. ನೆರವು ಸಿಗಲಿದೆ. ಚಂಡಮಾರುತ ಹಾಗೂ ಪ್ರವಾಹದಿಂದ ತಮಿಳುನಾಡಿನಲ್ಲಿ ಸೃಷ್ಟಿಯಾದ ಅನಾಹುತಗಳಿಗೆ ಸಂಬಂಧಿಸಿದಂತೆ 115.49 ಕೋಟಿ ರೂ. ಮತ್ತು 160.61 ಕೋಟಿ ರೂ. ಸೇರಿ ಒಟ್ಟು 276.1 ಕೋಟಿ ರೂ.ಗಳನ್ನು ಘೋಷಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next