ಮೈಸೂರು: ಬರಗಾಲದ ಹಿನ್ನೆಲೆಯಲ್ಲಿ ಮೈಸೂರು ತಾಲೂಕಿನಲ್ಲಿ ಕುಡಿಯುವ ನೀರು ಹಾಗೂ ಮೇವಿನ ಸಮಸ್ಯೆ ಬಗೆಹರಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಮಿನಿ ವಿಧಾನಸೌಧದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ತಾಲೂಕು ಮಟ್ಟದ ಕೆಡಿಪಿ ಸಭೆಯಲ್ಲಿ ಮಾತನಾಡಿ, ನರೇಗಾ ಯೋಜನೆಯಲ್ಲಿ ಕೋಟ್ಯಂತರ ರೂ. ಅನುದಾನ ನೀಡಲಾಗಿದೆ. ಆದರೂ ಜಿಲ್ಲೆಯಲ್ಲಿ ಉಂಟಾಗಿರುವ ಬರಗಾಲದ ಹಿನ್ನೆಲೆಯಲ್ಲಿ ನರೇಗಾ ಯೋಜನೆಯಡಿ ಉದ್ಯೋಗ ನೀಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದು, ತಾಲೂಕಿನಲ್ಲಿ 37 ಪಂಚಾಯಿತಿಗಳ ಪಿಡಿಒಗಳಿದ್ದರೂ ಯಾರೊಬ್ಬರು ಕೆಲಸ ಮಾಡುತ್ತಿಲ್ಲ. ನರೇಗಾದಡಿ ಕೆಲಸ ಮಾಡಿರುವ ಬಗ್ಗೆ ವರದಿ ನೀಡುವಂತೆ ತಾಕೀತು ಮಾಡಿದರು.
ಪಶುಸಂಗೋಪನಾ ಇಲಾಖೆ ಸಹಾಯಕ ಉಪನಿರ್ದೇಶಕ ತಿರುಮಲೇಗೌಡ ಮಾತನಾಡಿ, ಬರಗಾಲದ ಹಿನ್ನೆಲೆಯಲ್ಲಿ ತಾಲೂಕಿನ ಇಲವಾಲ, ಜಯಪುರ, ಬೀರಿಹುಂಡಿಗಳಲ್ಲಿ ಮೇವು ಕೇಂದ್ರವನ್ನು ಆರಂಭಿಸಿ 180.20 ಮೆಟ್ರಿಕ್ ಟನ್ ಮೇವು ವಿತರಿಸಲಾಗಿದೆ. ಈಗಾಗಲೇ 10 ಸಾವಿರ ಮೇವು ಕಾರ್ಡ್ ವಿತರಿಸಲಾಗಿದ್ದು, ಇದರೊಂದಿಗೆ 5 ಸಾವಿರ ಕಾರ್ಡ್ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಇದೇ ವೇಳೆ ಮಾತನಾಡಿದ ತಾಪಂ ಸದಸ್ಯೆ ರಜಿನಿ, ಜಯಪುರ ಕ್ಷೇತ್ರದಲ್ಲಿ ಕಳಪೆ ಹುಲ್ಲು ನೀಡಲಾಗಿದ್ದು, ಮೇವು ಕೇಳಲು ಹೋದ ರೈತರಿಗೆ ಅಧಿಕಾರಿಗಳು ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ ತಿರುಮಲೇಗೌಡ, ಗುಣಮಟ್ಟದ ಮೇವು ನೀಡಲು ಕ್ರಮವಹಿಸಲಾಗಿದೆ ಎಂದರು. ಸದಸ್ಯ ಕನ್ನೇಗೌಡ ಮಾತನಾಡಿ, ನಗರದಲ್ಲಿ ಇತ್ತೀಚೆಗೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾಮಟ್ಟದ ಕೆಡಿಪಿ ಸಭೆಯಲ್ಲಿ ತಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಭಾಗವಹಿಸಲು ಅವಕಾಶ ನೀಡದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನಲ್ಲಿ ಹಲವು ಸಮಸ್ಯೆಗಳಿದ್ದು, ಈ ಬಗ್ಗೆ ಚರ್ಚಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ತಾಪಂ ಇಒ, ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಯಾವುದೇ ರೀತಿಯ ಶಿಷ್ಟಾಚಾರ ಉಲ್ಲಂಘನೆಯಾಗಿಲ್ಲ ಎಂದು ಸ್ಪಷ್ಟನೆ ನೀಡಿದರು. ಆದರೂ ಸಮಾಧಾನಗೊಳ್ಳದ ಸದಸ್ಯ ಕನ್ನೇಗೌಡ, ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಗೆ ತಾಪಂ ಅಧ್ಯಕ್ಷರು, ಉಪಾಧ್ಯಕ್ಷರನ್ನು ಆಹ್ವಾನಿಸುವ ವಿಷಯದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದ್ದು, ತಾಪಂನಲ್ಲಿ ನಡೆಯುವ ಕೆಡಿಪಿ ಸಭೆಗೆ ಸಿಎಂ ಬಾರದಿರುವುದು ನಮ್ಮ ಸಂಕಟ ಎಂದು ಬೇಸರ ವ್ಯಕ್ತಪಡಿಸಿದರು. ಸಭೆಯಲ್ಲಿ ಉಪಾಧ್ಯಕ್ಷ ಎಚ್.ಬಿ.ಮಂಜು, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಮಹದೇವನಾಯ್ಕ, ಅಧಿಕಾರಿಗಳು ಹಾಜರಿದ್ದರು.