ಬೆಂಗಳೂರು: ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಕೃಷಿ ಚಟುವಟಿಕೆಗಳಿಗೆ ನೀರಿನ ಕೊರತೆಯಿದ್ದು, ಬ್ಯಾರೇಜ್, ಕಾಲುವೆ ನೀರಾವರಿ ಇರುವ ಕಡೆಗಳಲ್ಲಿ ಮಾತ್ರ ಭತ್ತ ಬೆಳೆಯಲಾಗುತ್ತಿದೆ. ಆದರೆ, ಹನಿ ನೀರಾವರಿ ವಿಧಾನದಲ್ಲಿಯೂ ಭತ್ತ ಬೆಳೆಯಬಹುದು ಎಂಬ ಅಂಶ ಕೃಷಿಮೇಳದಲ್ಲಿ ಅನಾವರಣಗೊಂಡಿದೆ.
ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸಾಂಪ್ರದಾಯಿಕ ಭತ್ತ ಬೆಳೆಯುವ ವಿಧಾನಕ್ಕೆ ಪರ್ಯಾಯವಾಗಿ ಮೂರು ಹೊಸ ವಿಧಾನಗಳ ಮೂಲಕವೂ ಭತ್ತ ಬೆಳೆಯಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅದರಂತೆ “ಶ್ರೀ’ ವಿಧಾನ, “ನೇರ ಬಿತ್ತನೆ’ ಹಾಗೂ “ಹನಿ ನೀರಾವರಿ’ ಮೂಲಕ ಭತ್ತ ಬೆಳೆದು ಹೆಚ್ಚುವರಿ ಇಳುವರಿ ಪಡೆಯಬಹುದಾಗಿದೆ.
ವಿವಿಯ ವಿದ್ಯಾರ್ಥಿಗಳು ಜಿಕೆವಿಕೆಯ ಎರಡು ಎಕರೆ ಜಮೀನಿನಲ್ಲಿ ಹನಿ ನೀರಾವರಿ ಹಾಗೂ ಒಂದು ಎಕರೆ ಜಾಗದಲ್ಲಿ ಶ್ರೀ ವಿಧಾನದ ಮೂಲಕ ಭತ್ತ ಬೆಳೆದಿದ್ದು, ಉತ್ತಮ ಫಸಲು ಬಂದಿದೆ. ಮುಖ್ಯವಾಗಿ ಹನಿ ನೀರಾವರಿ ವಿಧಾನದಲ್ಲಿ, ಸಾಂಪ್ರದಾಯಿಕ ವಿಧಾನಕ್ಕಿಂತಲೂ ಶೇ.20ರಷ್ಟು ಹೆಚ್ಚು ಇಳುವರಿ ಬರಲಿದ್ದು, ಶೇ.55ರಿಂದ 60ರಷ್ಟು ನೀರು ಉಳಿತಾಯವಾಗುತ್ತದೆ ಎನ್ನುತ್ತಾರೆ ವಿದ್ಯಾರ್ಥಿಗಳು.
ಸಾಂಪ್ರದಾಯಿಕ ವಿಧಾನದಲ್ಲಿ ಭತ್ತ ಬೆಳೆಯುವಾಗ ಕನಿಷ್ಠ 5 ಸೆಂ.ಮೀ ನೀರು ಕಾಯ್ದುಕೊಳ್ಳಬೇಕಾಗುತ್ತದೆ. ಆದರೆ, ಶ್ರೀ ವಿಧಾನದಲ್ಲಿ ಮಣ್ಣು ತೇವಾಂಶದಿಂದ ಕೂಡಿದ್ದರೆ ಸಾಕಾಗುತ್ತದೆ. ಈ ವಿಧಾನದಿಂದ ಶೇ.30ರಷ್ಟು ನೀರು ಉಳಿಸಬಹುದಾಗಿದೆ. ಜತೆಗೆ ಸಾಂಪ್ರದಾಯಿಕ ವಿಧಾನದಂತೆ ಇಲ್ಲಿಯೂ ಪೈರು ನಾಟಿ ಮಾಡಬೇಕಾಗುತ್ತದೆ. ಆದರೆ, “ನೇರ ಬಿತ್ತನೆ’ ವಿಧಾನದಲ್ಲಿ ಪೈರು ಬದಲಿಗೆ, ತೇವಾಂಶದಿಂದ ಕೂಡಿರುವ ಮಣ್ಣಿಗೆ ನೇರವಾಗಿ ಬಿತ್ತನೆ ಭತ್ತ ಎಸೆಯಲಾಗುತ್ತದೆ.
ಇನ್ನು ಹನಿ ನೀರಾವರಿ ವಿಧಾನದಲ್ಲಿ ಪೈರು ನಾಟಿ ಮಾಡುವಾಗ ಪ್ರತಿ ಸಾಲಿನ ನಡುವೆ 25-30 ಸೆಂ.ಮೀ ಅಂತರ ಕಾಯ್ದುಕೊಳ್ಳಬೇಕು. ನಂತರ ಡ್ರಿಪ್ ಪೈಪುಗಳ ಮೂಲಕ ಪೈರಿನ ಬೇರಿಗೆ ನೀರು ಹೋಗುವಂತೆ ವ್ಯವಸ್ಥೆ ಮಾಡಬೇಕಾಗುತ್ತದೆ. ಇದರಿಂದ ಶೇ.20ರಷ್ಟು ಹೆಚ್ಚುವರಿ ಇಳುವರಿ ಪಡೆಯುವ ಜತೆಗೆ, ಶೇ.60ರಷ್ಟು ನೀರು ಉಳಿತಾಯವಾಗಲಿದೆ ಎನ್ನುತ್ತಾರೆ ಸಂಶೋಧನಾ ವಿದ್ಯಾರ್ಥಿ ಸತೀಶ್.