Advertisement

Drought: ಫ್ರುಟ್ಸ್‌ ಸಾಫ್ಟ್‌ವೇರ್‌ ಆಧರಿಸಿಯೇ ಬರ ಪರಿಹಾರ: ಕೃಷ್ಣ ಭೈರೇಗೌಡ

10:03 PM Nov 10, 2023 | Team Udayavani |

ಬೆಂಗಳೂರು: ಫ್ರುಟ್ಸ್‌ ತಂತ್ರಾಂಶದಲ್ಲಿರುವ ದಾಖಲೆ ಆಧರಿಸಿಯೇ ಈ ಬಾರಿ ರೈತರಿಗೆ ಬರ ಪರಿಹಾರ ನೀಡಲು ರಾಜ್ಯ ಸರಕಾರ ನಿರ್ಧರಿಸಿದ್ದು, ಮುಂದಿನ 15 ದಿನಗಳ ಅವಧಿಯಲ್ಲಿ ಅಭಿಯಾನ ಸ್ವರೂಪದಲ್ಲಿ ರೈತರಿಂದ ಫ್ರುಟ್ಸ್‌ ತಂತ್ರಾಂಶದಲ್ಲಿ ಜಮೀನು ದಾಖಲೆ ನೋಂದಣಿಗೆ ಕಂದಾಯ ಇಲಾಖೆ ನಿರ್ಧರಿಸಿದೆ.

Advertisement

ಡಿ.ಸಿ.ಗಳು, ಎ.ಸಿ.ಗಳು ಹಾಗೂ ತಹಶೀಲ್ದಾರ್‌ ಸಹಿತ ಇಲಾಖೆಯ ಹಿರಿಯ ಅಧಿಕಾರಿಗಳ ಜತೆಗೆ ಸಭೆ ನಡೆಸಿದ ಬಳಿಕ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ್ದು, ಫ್ರುಟ್ಸ್‌ ತಂತ್ರಾಂಶದಲ್ಲಿ ನೋಂದಣಿಯಾದವರಿಗೆ ಮಾತ್ರ ಬರ ಪರಿಹಾರ ನೀಡಲು ನಿರ್ಧರಿಸಲಾಗಿದೆ. ಪಿಎಂ-ಕಿಸಾನ್‌ ಸಹಿತ ರೈತರಿಗೆ ಸಂಬಂಧಪಟ್ಟ ಹಲವು ಅನುದಾನಗಳನ್ನು ಫ್ರುಟ್ಸ್‌ ತಂತ್ರಾಂಶ ಆಧರಿಸಿಯೇ ವಿತರಿಸಲಾಗಿದ್ದು, ಸದ್ಯಕ್ಕೆ ನಮ್ಮಲ್ಲಿ ಲಭ್ಯವಿರುವ ವಿಶ್ವಾಸಾರ್ಹ ದತ್ತಾಂಶ ಇದಾಗಿದೆ ಎಂದರು.

ಬಹುತೇಕ ರೈತರು ಫ್ರುಟ್ಸ್‌ ತಂತ್ರಾಂಶದಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಆದರೆ ಪೂರ್ತಿ ಜಮೀನಿನ ವಿವರ ದಾಖಲಿಸಿಲ್ಲ. ಐದು ಎಕ್ರೆ ಜಮೀನು ಹೊಂದಿದ್ದರೆ ಎರಡು ಎಕ್ರೆ ಮಾತ್ರ ನೋಂದಣಿಯಾಗಿದೆ. ಹೀಗಾಗಿ 15 ದಿನಗಳ ಅವಧಿಯಲ್ಲಿ ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಅಭಿಯಾನ ರೂಪದಲ್ಲಿ ರೈತರ ನೋಂದಣಿ ನಡೆಸಬೇಕು. ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಒಟ್ಟು ರೈತರ ಪೈಕಿ ಶೇ.65ರಷ್ಟು ಜನರು ನೋಂದಣಿಯಾಗಿದ್ದು, ಉಳಿದವರು ಆದಷ್ಟು ಬೇಗ ಹೆಸರು ದಾಖಲಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಳೆದ ಬಾರಿ ಬರ ಪರಿಹಾರ ನೀಡುವಾಗ ಅವ್ಯವಹಾರವಾಗಿದೆ. ಅಧಿಕಾರಿಗಳು ತಮ್ಮ ಸಂಬಂಧಿಗಳ ಖಾತೆಗೆ ಹಣ ಜಮೆ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿತ್ತು. ಹೀಗಾಗಿ ಸಾಂಪ್ರದಾಯಿಕ ನೋಂದಣಿ ವಿಧಾನ ಬೇಡ ಎಂದು ತೀರ್ಮಾನಿಸಲಾಗಿದ್ದು, ತಂತ್ರಾಂಶ ಆಧರಿಸಿಯೇ ಪರಿಹಾರ ನೀಡುತ್ತೇವೆ. ಕೇಂದ್ರ ಸರಕಾರ ಬರಿಹಾರ ಬಿಡುಗಡೆ ಮಾಡಿದ ಕೂಡಲೇ ರೈತರ ಖಾತೆಗೆ ಹಣ ವರ್ಗಾಯಿಸುವುದಕ್ಕೆ ಅನುಕೂಲವಾಗಲಿ ಎಂದು ಈ ಸಿದ್ಧತೆ ನಡೆಸಿದ್ದೇವೆ ಎಂದು ಹೇಳಿದರು.

ಮೊದಲೇ ಟೆಂಡರ್‌
ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಈಗಿನಿಂದಲೇ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಈಗಲೇ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದ್ದು, ದೂರು ಬಂದ 24 ಗಂಟೆಗಳಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಸಲು ಸಾಧ್ಯವಾಗುತ್ತದೆ. ಸದ್ಯಕ್ಕೆ ಮೇವಿನ ಕೊರತೆ ಇಲ್ಲ. ಮುಂದಿನ ತಿಂಗಳು ಸೃಷ್ಟಿಯಾಗಬಹುದು. ಹೀಗಾಗಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದ್ದು, ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್ಪೋರ್ಸ್‌ ರಚಿಸಲಾಗಿದೆ ಎಂದರು.

Advertisement

ಪ್ರಕರಣ ಇತ್ಯರ್ಥಕ್ಕೆ ಕ್ರಮ
ಕಂದಾಯ ಇಲಾಖೆಯಲ್ಲಿ ಬಾಕಿ ಇರುವ ಕೋರ್ಟ್‌ ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸಲು ಪೂರಕ ಕ್ರಮ ಕೈಗೊಳ್ಳಲಾಗುತ್ತಿದೆ. ಇದಕ್ಕಾಗಿ ಅಧಿಕಾರಿಗಳಿಗೆ ಗಡುವು ನೀಡಲಾಗಿದೆ. ತಾಲೂಕು ದಂಡಾಧಿಕಾರಿಗಳು ಹಾಗೂ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲೇ ಹೆಚ್ಚು ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇದ್ದವು. 5-10 ವರ್ಷದ ಕಡತ ಬಾಕಿ ಇತ್ತು. ನಾನು ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ಬಳಿಕ 1 ವರ್ಷದೊಳಗಿನ 2,215 ಪ್ರಕರಣಗಳ ಪೈಕಿ 750 ಮಾತ್ರ ಈಗ ಇತ್ಯರ್ಥಕ್ಕೆ ಉಳಿದುಕೊಂಡಿದೆ. ಇತ್ಯರ್ಥದ ಅವಧಿಯನ್ನು ಸರಾಸರಿ 212 ದಿನಗಳಿಂದ 134ಕ್ಕೆ ಇಳಿಸಲಾಗಿದೆ. ಅದನ್ನು 90 ದಿನಕ್ಕೆ ಇಳಿಸುವ ಗುರಿ ಹೊಂದಿದ್ದೇವೆ ಎಂದರು.

ಇ-ಕಡತ
ಕಡತ ವಿಲೇವಾರಿ ವಿಳಂಬ ನಿಯಂತ್ರಿಸುವುದಕ್ಕೆ ಎಲ್ಲ ಕಚೇರಿಗಳಿಗೆ ಸೂಚನೆ ನೀಡಲಾಗಿದೆ. ಡಿಸೆಂಬರ್‌ ಅಂತ್ಯದೊಳಗೆ ಎಲ್ಲ ತಹಶೀಲ್ದಾರ್‌ಗಳು ಕಡ್ಡಾಯವಾಗಿ ಹೊಸ ಕಡತಗಳನ್ನು ಇ-ಸ್ವರೂಪದಲ್ಲೇ ಸಲ್ಲಿಸಬೇಕೆಂದು ಸೂಚನೆ ನೀಡಲಾಗಿದೆ ಎಂದರು.

ಸರ್ವರ್‌ ಸಮಸ್ಯೆಗೆ ಪರಿಹಾರ
ನಾಡಕಚೇರಿ ಸೇರಿ ಕಂದಾಯ ಇಲಾಖೆಯ ಕಚೇರಿಗಳಲ್ಲಿ ಸರ್ವರ್‌ ಸಮಸ್ಯೆ ನಿವಾರಣೆಗೆ ಈಗ ಕಂದಾಯ ಇಲಾಖೆ ಮುಂದಾಗಿದೆ.
ಸರ್ವರ್‌ ಹಾಗೂ ನೆಟ್‌ವರ್ಕ್‌ ಸಮಸ್ಯೆಯಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುವುದನ್ನು ತಪ್ಪಿಸಲು ಬ್ರ್ಯಾಂಡ್‌ ವಿಡ್‌ ಬಳಕೆ ಪರಿಶೀಲನೆಗೆ ಸೂಚಿಸಲಾಗಿದ್ದು, ಕಡಿಮೆ ಇರುವ ಕಡೆಗೆ ಬ್ರ್ಯಾಂಡ್‌ ವಿಡ್‌¤ ಸಾಮರ್ಥ್ಯ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಹಣವನ್ನು ಇ-ಆಡಳಿತ ವಿಭಾಗದಿಂದಲೇ ಭರಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಕೇಂದ್ರಕ್ಕೆ ಹತ್ತು ಬಾರಿ ಪತ್ರ
ಬರಪರಿಹಾರದ ಬಗ್ಗೆ ಚರ್ಚೆ ನಡೆಸಲು ಅವಕಾಶ ಕಲ್ಪಿಸುವಂತೆ ಕೇಂದ್ರ ಕೃಷಿ ಸಚಿವರಿಗೆ 10 ಬಾರಿ ಪತ್ರ ಬರೆದರೂ ಪ್ರಯೋಜನವಾಗಿಲ್ಲ ಎಂದು ಕಂದಾಯ ಸಚಿವರು ಬೇಸರ ವ್ಯಕ್ತಪಡಿಸಿದ್ದಾರೆ. ದಿಲ್ಲಿಯಲ್ಲಿ ಭೇಟಿಗೆ ಅವಕಾಶ ಸಾಧ್ಯವಾಗದೇ ಇದ್ದರೆ ನೀವು ಇರುವ ಕಡೆಯೇ ಬಂದು ಭೇಟಿಯಾಗುತ್ತೇವೆ. ರಾಜ್ಯದ ಹಿತದೃಷ್ಟಿಯಿಂದ ಸಮಾಲೋಚನೆ ಅಗತ್ಯ ಎಂದು ಹತ್ತು ಬಾರಿ ಪತ್ರ ಬರೆಯಲಾಗಿದೆ. ಬಹುಶಃ ಅವರು ಚುನಾವಣೆ ಕಾರ್ಯದಲ್ಲಿ ಬ್ಯುಸಿಯಾಗಿರಬೇಕು ಎಂದು ವ್ಯಂಗ್ಯವಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next