Advertisement

ನೀರಿಗೆ ಬರ: ಬಸ್‌ನಿಲ್ದಾಣ ಬಾವಿಯಲ್ಲಿ ತ್ಯಾಜ್ಯ

03:08 PM Feb 22, 2017 | Harsha Rao |

ಕಾಸರಗೋಡು: ಒಂದೊಂದು ಹನಿ ನೀರಿಗಾಗಿ ಹಾಹಾಕಾರ ಎದುರಿಸುತ್ತಿರುವ ಕಾಸರಗೋಡಿನ ಹೊಸ ಬಸ್‌ ನಿಲ್ದಾಣದಲ್ಲಿರುವ ಜಲಸಂಪನ್ಮೂಲದಲ್ಲಿ ತ್ಯಾಜ್ಯ ತುಂಬಿ ತ್ಯಾಜ್ಯ ಡಂಪಿಂಗ್‌ ಕೇಂದ್ರವಾಗಿ ಬದಲಾಗಿದೆ.

Advertisement

ಹೊಸ ಬಸ್‌ ನಿಲ್ದಾಣದಲ್ಲಿರುವ ನಗರ ಸಭೆಯ ಬಾವಿಯಲ್ಲಿ ತ್ಯಾಜ್ಯ ತುಂಬಿಸಿ ನೀರಿನ ಸಂಪನ್ಮೂಲವನ್ನೇ ಹಾನಿಗೊಳಿ ಸಲಾಗಿದೆ. ಬಾವಿ ಉತ್ತಮ ಸ್ಥಿತಿಯಲ್ಲಿದ್ದಾಗ ಈ ಬಾವಿಯಿಂದ ನಗರದ ಬಹುತೇಕ ಜನರಿಗೆ ನೀರನ್ನು ವಿತರಿಸಲು ಸಾಧ್ಯವಾಗುತ್ತಿತ್ತು. ಹೊಸ ಬಸ್‌ ನಿಲ್ದಾಣ ಅಸ್ತಿತ್ವಕ್ಕೆ ಬಂದ ಬಳಿಕ ಈ ಬಾವಿಯಲ್ಲಿ ಬಸ್‌ ನಿಲ್ದಾಣದಲ್ಲಿರುವ ಕೆಲವು ಹೊಟೇಲ್‌ಗ‌ಳು, ಅಂಗಡಿಗಳಿಂದ ತ್ಯಾಜ್ಯ ಸುರಿದು ಸಂಪೂರ್ಣ ಮುಚ್ಚಿಕೊಂಡಿದ್ದು ನೀರನ್ನು ಬಳಸದಂತಾಯಿತು.

ಇತ್ತೀಚೆಗೆ ಬಸ್‌ ನಿಲ್ದಾಣಕ್ಕೆ ಇಂಟರ್‌ ಲಾಕ್‌ ಅಳವಡಿಸಿದ ನಗರಸಭೆ ಈ ಬಾವಿಯನ್ನು ದುರಸ್ತಿಗೊಳಿಸಲು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ರಾತ್ರಿ ಹೊತ್ತು ಕೆಲವು ಅಂಗಡಿಗಳು ಮತ್ತು ಹೊಟೇಲ್‌ಗ‌ಳ ತ್ಯಾಜ್ಯವನ್ನು ಇಲ್ಲಿ ತಂದು ತುಂಬುತ್ತಿದ್ದು ಇದೀಗ ಬಾವಿಯ ಮೇಲ್ಭಾಗಕ್ಕೆ ಬಂದು ತಲುಪಿದೆ.

ಉತ್ತಮ ಸ್ಥಿತಿಯಲ್ಲಿದ ಬಾವಿ ಹೀಗೆ ಕೆಟ್ಟು ಹೋಗುತ್ತಿ ದ್ದರೂ ಸಂಬಂಧಪಟ್ಟವರು ಕಣ್ಣಿದ್ದು ಕುರುಡರಂತೆ ವರ್ತಿಸು
ತ್ತಿದ್ದಾರೆ. ಈ ಬಾವಿಯನ್ನು ಮತ್ತೆ ದುರಸ್ತಿಗೊಳಿಸಿ ನೀರು ಬಳಕೆ ಮಾಡಲು ವ್ಯವಸ್ಥೆ ಕಲ್ಪಿಸಬಹುದು. ಆದರೆ ಸಂಬಂಧಪಟ್ಟವರಿಗೆ ಈ ಬಗ್ಗೆ ಇಚ್ಛಾಶಕ್ತಿ ಬೇಕು.

ಮೊದಲೇ ನೀರಿನ ಸಮಸ್ಯೆ ಎದುರಿಸುತ್ತಿರುವ ಕಾಸರಗೋಡಿನ ಈ ಪ್ರದೇಶದಲ್ಲಿ ಒಂದು ಬಾವಿ ಮುಚ್ಚಿಕೊಂಡಿತೆಂದರೆ ಹಲವಾರು ಜನರಿಗೆ ನೀರಿನ ಸೌಕರ್ಯ ಇಲ್ಲದಂತೇ ಆಗಿದೆ. ಸುಮಾರು 10 ಅಡಿಯಷ್ಟು ಹೊಂಡವಿರುವ ಈ ಬಾವಿಯಲ್ಲಿ ಸಾಕಷ್ಟು ನೀರು ಇತ್ತು. ಆದರೆ ಈ ಬಾವಿಗೆ ತ್ಯಾಜ್ಯ ಎಸೆಯಲಾರಂಭಿಸಿದ ಬಳಿಕ ಬಾವಿ ಸಂಪೂರ್ಣ ತ್ಯಾಜ್ಯಮಯವಾಗಿದೆ. ತ್ಯಾಜ್ಯದಿಂದ ಈ ಪರಿಸರದಲ್ಲಿ ನಡೆದು ಹೋಗಲು ಸಾಧ್ಯವಾಗುತ್ತಿಲ್ಲ. ತ್ಯಾಜ್ಯ ಕೊಳೆತು ಗಬ್ಬು ವಾಸನೆ ಕೂಡ ಬರುತ್ತಿದೆ. ಈ ಪರಿಸರದಿಂದ ಹೋಗಬೇಕಾದ ಸಂದರ್ಭದಲ್ಲಿ ಮೂಗು ಮುಚ್ಚಿಕೊಂಡೇ ಹೋಗಬೇಕಾದ ಸ್ಥಿತಿಯಿದೆ.

Advertisement

ಇತ್ತೀಚೆಗೆ ಬಸ್‌ ನಿಲ್ದಾಣ ಪ್ರವೇಶಿಸಿದ ಬಸ್ಸೊಂದು ಬಾವಿಯ ಸುತ್ತು ಗೋಡೆಗೆ ಬಡಿದು ಬಾವಿಯ ಸುತ್ತು ಗೋಡೆಯನ್ನು ಕೆಡವಿ ಹಾಕಿದೆ. ಸುತ್ತು ಗೋಡೆ ಕೆಡವಿ ಬಿದ್ದು ತಿಂಗಳುಗಳೇ ಕಳೆದರೂ ಇನ್ನೂ ಬಾವಿಗೆ ಸುತ್ತು ಗೋಡೆಯನ್ನು ನಿರ್ಮಿಸಲು ಸಂಬಂಧಪಟ್ಟ ನಗರಸಭೆ ತಯಾರಾಗಿಲ್ಲ. ಬಾವಿಯ ಸುತ್ತ ಕೆಲವು ಕಲ್ಲುಗಳನ್ನು ಇರಿಸಿದೆ. ಬಸ್‌ ನಿಲ್ದಾಣದಲ್ಲಿ ಸಾಕಷ್ಟು ಪ್ರಯಾಣಿಕರು ಈ ಪರಿಸರದಲ್ಲಿ ಓಡಾಡುವುದರಿಂದ ಅಪಾಯವಂತೂ ಇದ್ದೇ ಇದೆ. ಬಸ್‌ ರಿವರ್ಸ್‌ ತೆಗೆಯುವ ಸಂದರ್ಭದಲ್ಲಿ ಬಾವಿಗೆ ಬೀಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಇಂತಹ ಪರಿಸ್ಥಿತಿಯಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿರುವುದು ವಿಷಾದನೀಯ.

Advertisement

Udayavani is now on Telegram. Click here to join our channel and stay updated with the latest news.

Next