Advertisement
ಹತ್ತು ವರ್ಷಗಳ ನಂತರ ಯೋಗರಾಜ ಭಟ್ ಹಾಗೂ ಗಣೇಶ್ ಒಟ್ಟಾದ ಸಿನಿಮಾ “ಮುಗುಳು ನಗೆ’. ಇಬ್ಬರು ಜೊತೆಯಾದಾಗ ಲವ್‌ಸ್ಟೋರಿ ಬಿಟ್ಟು ಇನ್ನೇನನ್ನು ನಿರೀಕ್ಷಿಸಬಹುದು ಎಂದು ನೀವು ಕೇಳಬಹುದು. ಹೌದು, ಇಲ್ಲಿ ಲವ್‌ಸ್ಟೋರಿ ಇದೆ. ಆದರೆ, ಬರೀ ಲವ್‌ಸ್ಟೋರಿಯಲ್ಲ, ನಾಯಕನಿಗೆ ಜೀವನಪಾಠ ಕಲಿಸುವ ಮೂರು ಆಯಾಮಗಳ ಲವ್‌ಸ್ಟೋರಿಗಳಿವೆ ಎಂಬುದು ಈ ಬಾರಿಯ ವಿಶೇಷ. ಆ ಮಟ್ಟಿಗೆ “ಮುಗುಳು ನಗೆ’ ಒಂದು ಗಂಭೀರ ಹಾಗೂ ಕ್ಲಾಸ್ ಸಿನಿಮಾ ಎನ್ನಬಹುದು.
Related Articles
Advertisement
ಅಂದಹಾಗೆ, ಇಲ್ಲಿ ಕೇವಲ ಮೂವರು ಹುಡುಗಿಯರಷ್ಟೇ ಅಲ್ಲ, ನಾಲ್ಕನೆಯವಳು ಕೂಡಾ ಇದ್ದಾಳೆ. ಆಕೆಯಿಂದ ನಾಯಕ ಯಾವ ಪಾಠ ಕಲಿಯುತ್ತಾನೆಂಬ ಕುತೂಹಲಕ್ಕೆ ನೀವು ಸಿನಿಮಾ ನೋಡಬೇಕು. ಇಲ್ಲಿ ಹೆಚ್ಚೇನು ಫನ್ ಡೈಲಾಗ್ ಆಗಲಿ, ಅನಾವಶ್ಯಕ ಕಾಮಿಡಿಯಾಗಲಿ ಅಥವಾ ನೀವು ಊಹಿಸದಂತಹ ಟ್ವಿಸ್ಟ್‌ಗಳಾಗಲಿ ಖಂಡಿತಾ ಇಲ್ಲ. ಅದರಲ್ಲೂ ಒಂದಷ್ಟು ಅಂಶಗಳನ್ನು ನೀವು ಆರಾಮವಾಗಿ ಊಹಿಸಿಕೊಳ್ಳಬಹುದು. ಇನ್ನು ಭಟ್ರಾ ಇಲ್ಲಿ ಏನು ಹೇಳಬೇಕೋ ಅದನ್ನು ಒಂದೊಂದೇ ಟ್ರ್ಯಾಕ್‌ಗಳಲ್ಲಿ ನೇರಾನೇರ ಹೇಳಿದ್ದಾರೆ.
ಪ್ರತಿ ಚಾಪ್ಟರ್‌ಗಳು ಆರಂಭವಾಗಿ ಮುಗಿಯುವ ಹೊತ್ತಿಗೆ ಅಲ್ಲೊಂದು ಗಾಢವಾದ ಮೌನ ಆವರಿಸಿರುತ್ತದೆ. ಆ ಮೌನದಲ್ಲಿ ನೀವು “ಸುಖ’ ಕಾಣಬೇಕು. ಚಿತ್ರದಲ್ಲಿ ಕೆಲವು ದೃಶ್ಯಗಳನ್ನು ಮತ್ತಷ್ಟು ಟ್ರಿಮ್ ಮಾಡುವ ಅವಕಾಶವಿತ್ತು. ಪಾಂಡಿಚೇರಿಯ ಸಿರಿ ಮನೆಯ ದೃಶ್ಯ ಹಾಗೂ ಚಾರುಲತಾ ಪೋರ್ಶನ್‌ಗಳು ಸ್ವಲ್ಪ ಎಳೆದಂತಾಗಿದೆ. ಅದು ಬಿಟ್ಟರೆ ಇಲ್ಲಿ ತುಂಬಾ ಫ್ರೆಶ್ ಎನಿಸುವ ದೃಶ್ಯಗಳಿವೆ. ಮೈಸೂರು, ಬೆಂಗಳೂರು, ಕುಂದಾಪುರ, ಪಾಂಡಿಚೇರಿಯ ಹಿನ್ನೆಲೆಯಿದೆ.
ಇಡೀ ಚಿತ್ರದ ಹೈಲೈಟ್ ಎಂದರೆ ನಾಯಕ ಗಣೇಶ್. ಲವರ್‌ಬಾಯ್ ಆಗಿ, ತುಂಟ ಪ್ರೇಮಿಯ ಪಾತ್ರಗಳು ಗಣೇಶ್‌ಗೆ ಹೊಸದಲ್ಲ. ಆದರೆ, ಈ ಬಾರಿ ಅವರಿಗೆ ಹೊಸ ಸವಾಲೆಂದರೆ ನಗುತ್ತಲೇ ಅಳುವುದು. ಆ ತರಹದ ಒಂದು ಪಾತ್ರವನ್ನು ಗಣೇಶ್ ತುಂಬಾ ಚೆನ್ನಾಗಿ ನಿಭಾಹಿಸಿದ್ದಾರೆ ಮತ್ತು ಸೆಟಲ್ಡ್ ಆದ ಅಭಿನಯದ ಮೂಲಕ ಇಷ್ಟವಾಗುತ್ತಾರೆ. ಮೂವರು ನಾಯಕಿಯರ ವಿಷಯದಲ್ಲಿ ಒಬ್ಬರಿಗೊಬ್ಬರು ಸ್ಪರ್ಧೆಗೆ ನಿಂತರವರಂತೆ ನಟಿಸಿದ್ದಾರೆ.
ಆಶಿಕಾ, ನಿಖೀತಾ ಹಾಗೂ ಅಪೂರ್ವ, ಪುಲಕೇಶಿಯಲ್ಲಿ ಬದಲಾವಣೆ ತರುವಲ್ಲಿ “ಯಶಸ್ವಿ’ಯಾಗಿದ್ದಾರೆ. ಅದರಲ್ಲೂ ನಿಖೀತಾ ಅವರ ಅಭಿನಯಕ್ಕೆ ಒಂದಂಕ ಹೆಚ್ಚು ಕೊಡಬಹುದು. ಅಮೂಲ್ಯ ಹಾಗೆ ಬಂದು ಹೀಗೆ ಹೋಗುತ್ತಾರೆ. ಉಳಿದಂತೆ ಅಚ್ಯುತ್, ಧರ್ಮಣ್ಣ, ರಂಗಾಯಣ ರಘು ಸೇರಿದಂತೆ ಎಲ್ಲರೂ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಹಿಸಿದ್ದಾರೆ. ಹರಿಕೃಷ್ಣ ಸಂಗೀತದ ಹಾಡುಗಳು ಇಷ್ಟವಾಗುತ್ತವೆ. ಹಿನ್ನೆಲೆ ಸಂಗೀತ ಚಿತ್ರದ ಗಾಢತೆ ಹೆಚ್ಚಿಸಿದೆ. ಸುಜ್ಞಾನ್ ಛಾಯಾಗ್ರಹಣ ಚಿತ್ರಕ್ಕೆ ಪೂರಕ.
ಚಿತ್ರ: ಮುಗುಳು ನಗೆನಿರ್ಮಾಣ: ಸೈಯ್ಯದ್ ಸಲಾಂ
ನಿರ್ದೇಶನ: ಯೋಗರಾಜ ಭಟ್
ತಾರಾಗಣ: ಗಣೇಶ್, ಆಶಿಕಾ, ನಿಖೀತಾ, ಅಪೂರ್ವ, ಅಮೂಲ್ಯ, ಅಚ್ಯುತ್, ರಂಗಾಯಣ ರಘು ಮುಂತಾದವರು * ರವಿಪ್ರಕಾಶ್ ರೈ