ದಾವಣಗೆರೆ: ಕೇಂದ್ರ ಸರ್ಕಾರ ಜನ, ಕಾರ್ಮಿಕ ವಿರೋಧಿ ವಿದ್ಯುತ್ ಮಸೂದೆ ತಿದ್ದುಪಡಿ-2022 ಜಾರಿಗೆ ಮುಂದಾಗಿದೆ ಎಂದು ಆರೋಪಿಸಿ ಸೋಮವಾರ ಅಖೀಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಯುಟಿಯುಸಿ) ಪದಾಧಿಕಾರಿಗಳು, ಮುಖಂಡರು ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಭಾರತ ಸರ್ಕಾರದ ವಿದ್ಯುತ್ ಸಚಿವಾಲಯವು 2022ರ ವಿದ್ಯುತ್ ( ತಿದ್ದುಪಡಿ )ಮಸೂದೆಯನ್ನು ಪ್ರಸ್ತುತ ಮುಂಗಾರು ಅ ಧಿವೇಶನದಲ್ಲಿ ಏಕಪಕ್ಷಿಯವಾಗಿ ಮಂಡಿಸಿ ವಿದ್ಯುತ್ ಕ್ಷೇತ್ರವನ್ನು ಸಂಪೂರ್ಣವಾಗಿ ಖಾಸಗೀಕರಣ ಮಾಡಲು ಹೊರಟಿದೆ ಎಂದು ಆರೋಪಿಸಿ ಪ್ರತಿಭಟನಾಕಾರರು ಮಸೂದೆ ಪ್ರತಿ ಸುಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯುತ್ ತಯಾರಿಕೆ, ಪೂರೈಕೆ ಜಾಲದ ಮೂಲಕ ಜನರಿಗೆ ಕಡಿಮೆ ದರದಲ್ಲಿ ವಿದ್ಯುತ್ ಪೂರೈಕೆ ಮಾಡುತ್ತಿತ್ತು. ನೂತನ ತಿದ್ದುಪಡಿ ಜಾರಿಗೆ ಬಂದಲ್ಲಿ ಜನಸಾಮಾನ್ಯರು, ರೈತ, ಕೃಷಿ, ಕಾರ್ಮಿಕರ ಸಮುದಾಯಕ್ಕೆ ಗಾಯದ ಮೇಲೆ ದೊಡ್ಡ ಬರೆ ಎಳೆದಂತಾಗುತ್ತದೆ. ರೈತರ ನೀರಾವರಿಯ 10 ಎಚ್‌ಪಿ ಪಂಪಸೆಟ್‌ಗಳಿಗೆ ಉಚಿತವಾಗಿ ವಿದ್ಯುತ್ ದೊರೆಯುವುದು ಇನ್ನು ಮುಂದೆ ನಿಲ್ಲಲಿದೆ.
ಗ್ರಾಮೀಣ ಭಾಗದ ಬಡ ಜನತೆಯ ಕುಟುಂಬಗಳಿಗೆ ಭಾಗ್ಯಜ್ಯೋತಿ, ಕುಟೀರಜ್ಯೋತಿ ಮುಂತಾದ ಯೋಜನೆಗಳ ಮೂಲಕ ಉಚಿತವಾಗಿ ಅಥವಾ ರಿಯಾಯತಿ ದರದಲ್ಲಿ ಸರ್ಕಾರ ವಿದ್ಯುತ್ ನ್ನು ಒದಗಿಸುತ್ತಿತ್ತು ಇನ್ನೂ ಮುಂದೆ ರಿಯಾಯತಿ ನಿಂತು ಹೋಗುತ್ತದೆ ಎಂದು ಪ್ರತಿಭಟನಾಕಾರರು ದೂರಿದರು.
ವಿದ್ಯುತ್ ದರವನ್ನು ಖಾಸಗಿ ಮಾಲೀಕರೇ ನಿರ್ಧರಿಸುವುದರಿಂದ ವಿದ್ಯುತ್ ದರ ಗಗನಮುಖಿಯಾಗಲಿದೆ. ಒಂದು ವೇಳೆ ವಿದ್ಯುತ್ ಬಿಲ್ ಕಟ್ಟದೆ ಉಳಿಸಿಕೊಂಡರೆ ಅಂತಿಮವಾಗಿ ಕಾನೂನು ಮುಖಾಂತರ ಕ್ರಮ ಜರುಗಿಸಿ ರೈತರ ಮೇಲೆ ಪ್ರಹಾರ ಮಾಡಲು ಮಸೂದೆ ಅವಕಾಶ ಮಾಡಿಕೊಡಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಪೋರೇಟ್ ಕಂಪನಿಗಳು ವಿದ್ಯುತ್ ಕ್ಷೇತ್ರದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆ ಮಾಡಿ ಅತಿ ಹೆಚ್ಚು ಲಾಭ ಮಾಡಿ ಕೊಳ್ಳಲು ವಿದ್ಯುತ್‌ನ್ನು ಪೂರ್ತಿಯಾಗಿ ಖಾಸಗಿಯವರ ಕೈಗೊಪ್ಪಿಸುವ ಹುನ್ನಾರ ವಿದ್ಯುತ್ ಬಿಲ್ ತಿದ್ದುಪಡಿ ಮಸೂದೆ ಮೂಲಕ ಸರ್ಕಾರ ನಡೆಸಿದೆ. ಕೇಂದ್ರ ಸರ್ಕಾರ ಬಿಲ್ ತಿದ್ದುಪಡಿ ಕೈಬಿಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷ ಮಂಜುನಾಥ್ ಕೈದಾಳೆ, ಶಿವಾಜಿ ರಾವ್, ತಿಪ್ಪೇಸ್ವಾಮಿ ಅಣಬೇರು, ಮಧು ತೊಗಲೇರಿ, ನಾಗಸ್ಮಿತಾ, ಡಾ| ಸುನೀತ್ ಕುಮಾರ್, ಲೋಕೇಶ್, ಬೀರಲಿಂಗಪ್ಪ, ಹನುಮಂತಪ್ಪ, ವಿರೂಪಾಕ್ಷಪ್ಪ, ತುಕಾರಾಮ್, ಮಂಜಪ್ಪ, ಪಾಪಣ್ಣ ಇತರರು ಇದ್ದರು.