Advertisement

ಕಳ್ಳಭಟ್ಟಿಯ ಮೇಲೆ ಡ್ರೋಣ್‌ ಕಣ್ಣು

04:22 PM Apr 23, 2020 | Suhan S |

ಚಿಕ್ಕೋಡಿ: ಕೋವಿಡ್ 19 ವೈರಸ್‌ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧಿಸಿದೆ. ಇದರಿಂದ ಕಳ್ಳಭಟ್ಟಿ ದಂಧೆ ರಾಜಾರೋಷವಾಗಿ ನಡೆಯುತ್ತಿರುವುದಕ್ಕೆ ಬ್ರೇಕ್‌ ಹಾಕಲು ಅಬಕಾರಿ ಇಲಾಖೆ ಡ್ರೋಣ್‌ ಕ್ಯಾಮೆರಾ ಮೂಲಕ ಕಳ್ಳಭಟ್ಟಿ ಅಡ್ಡೆಗಳನ್ನು ಗುರುತಿಸಿ ದಾಳಿ ನಡೆಸಲು ಆರಂಭಿಸಿದೆ.

Advertisement

ಮಹಾಮಾರಿ ಕೋವಿಡ್ 19  ವೈರಸ್‌ ಹಿನ್ನೆಲ್ಲೆಯಲ್ಲಿ ಇಡೀ ದೇಶವೇ ಲಾಕ್‌ಡೌನ್‌ ಆಗಿದೆ. ರಾಜ್ಯದಲ್ಲಿ ಮದ್ಯ ಮಾರಾಟ ಬಂದ್‌ ಆಗಿ ತಿಂಗಳು ಕಳೆಯುತ್ತ ಬಂದಿದೆ. ಇದರಿಂದ ಗುಡ್ಡಗಾಡು ಪ್ರದೇಶ, ನದಿ ದಡ ಹಾಗೂ ಅರಣ್ಯ ಪ್ರದೇಶದಲ್ಲಿ ಸಮಾಜಘಾತುಕ ಶಕ್ತಿಗಳು ಕಳ್ಳಭಟ್ಟಿ ತಯಾರಿಸಿ ಮಾರಾಟ ದಂಧೆ ನಡೆಸುತ್ತಿರುವುದು ಅಬಕಾರಿ ಇಲಾಖೆ ಗಮನಕ್ಕೆ ಬಂದಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಬಕಾರಿ ಇಲಾಖೆ ಪೊಲೀಸರು ಡ್ರೋಣ್‌ ಕ್ಯಾಮೆರಾ ಬಳಸಿಕೊಂಡು ಅಡ್ಡೆಗಳನ್ನು ಗುರುತಿಸಲು ಸಿದ್ಧತೆ ನಡೆಸಿದೆ.

ಚಿಕ್ಕೋಡಿ ಅಬಕಾರಿ ಉಪವಿಭಾಗ ವ್ಯಾಪ್ತಿಯ ಹುಕ್ಕೇರಿ ತಾಲೂಕಿನ ಶಿರೂರ, ಧರ್ಮಾಪುರ ಹಾಗೂ ಚಿಕ್ಕೋಡಿ ಮತ್ತು ನಿಪ್ಪಾಣಿ, ರಾಯಬಾಗ ತಾಲೂಕಿನ ಗುಡ್ಡಗಾಡು ಪ್ರದೇಶದಲ್ಲಿ ಡ್ರೋಣ್‌ ಮೂಲಕ ಕಳ್ಳಭಟ್ಟಿ ಪತ್ತೆ ಹಚ್ಚುವ ಕೆಲಸಕ್ಕೆ ಮುಂದಾಗಿದೆ.

ಬೆಳಗಾವಿ ಜಿಲ್ಲಾ ಅಬಕಾರಿ ಜಂಟಿ ಆಯುಕ್ತ ಡಾ| ವೈ. ಮಂಜುನಾಥ ಇಲಾಖೆ ಸಿಬ್ಬಂದಿಯೊಂದಿಗೆ ಗುಡ್ಡಗಾಡು ಪ್ರದೇಶಕ್ಕೆ ಹೋಗಿ ಡ್ರೋಣ್‌ ಕ್ಯಾಮೆರಾ ಮೂಲಕ ಕಳ್ಳಭಟ್ಟಿ ದಂಧೆ ಆರಂಭಿಸುವ ವ್ಯಕ್ತಿಗಳ ಪತ್ತೆಗೆ ಜಾಲ ಬೀಸಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ಇಲ್ಲಿಯವರಿಗೆ ಕಳ್ಳಭಟ್ಟಿ ತಯಾರಿಸುವ ಗುಡ್ಡಗಾಡು ಪ್ರದೇಶದ 550 ಕಡೆಗಳಲ್ಲಿ ದಾಳಿ ನಡೆಸಿ ಸುಮಾರು 603 ಪ್ರಕರಣ ದಾಖಲಿಸಲಾಗಿದೆ. 34 ಆರೋಪಿಗಳನ್ನು ಬಂಧಿ ಸಲಾಗಿದೆ. 72 ಲಕ್ಷ ಮೌಲ್ಯದ ಕಳ್ಳಭಟ್ಟಿ ಮದ್ಯ ಹಾಗೂ ವಾಹನಗಳನ್ನು ಜಪ್ತಿ ಮಾಡಲಾಗಿದೆ.

Advertisement

ವಿಶಾಲ ಅರಣ್ಯ ಪ್ರದೇಶ, ನದಿ ದಡದ ಜಾಗದಲ್ಲಿ ಕಳ್ಳಭಟ್ಟಿ ದಂಧೆ ನಡೆಯುತ್ತಿದೆ. ಅದನ್ನು ಗುರುತಿಸಲು ಡ್ರೋಣ್‌ ಕ್ಯಾಮೆರಾ ಬಳಸಿಕೊಂಡು ಕಳ್ಳಭಟ್ಟಿ ಅಡ್ಡೆಗಳನ್ನು ಗುರುತಿಸುವ ಕೆಲಸಕ್ಕೆ ಅಬಕಾರಿ ಇಲಾಖೆ ಮುಂದಾಗಿದೆ. ಆರೋಪಿಗಳು ಎಲ್ಲಿ ಹೋಗುತ್ತಾರೆ. ಅವರ ರಸ್ತೆ ಮಾರ್ಗಯಾವುದು ಎನ್ನುವುದು ಕ್ಯಾಮೆರಾದಲ್ಲಿ ಸೆರೆಯಾಗುತ್ತದೆ. ಇದರಿಂದ ಪೊಲೀಸರಿಗೆ ದಾಳಿ ಮಾಡಿ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಲು ಸಹಾಯವಾಗುತ್ತದೆ.  –ಡಾ| ವೈ. ಮಂಜುನಾಥ, ಅಬಕಾರಿ ಜಂಟಿ ಆಯುಕ್ತ

 

-ಮಹಾದೇವ ಪೂಜಾರಿ

Advertisement

Udayavani is now on Telegram. Click here to join our channel and stay updated with the latest news.

Next