ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇಗುಲದ ವತಿಯಿಂದ ಕುಮಾರ ಪರ್ವತದಲ್ಲಿ ಇಂದು ಕುಕ್ಕೆ ಲಿಂಗ ಪೂಜೆ ಜರಗಲಿದೆ. ಪೂಜೆಯಲ್ಲಿ ಪಾಲ್ಗೊಳ್ಳಲು ಸುಬ್ರಹ್ಮಣ್ಯದಿಂದ ಹೊರಟ ಚಾರಣ ತಂಡಕ್ಕೆ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಮುಂಭಾಗದಲ್ಲಿ ಬುಧವಾರ ಚಾಲನೆ ನೀಡಲಾಯಿತು.
ದೇಗುಲದ ಅರ್ಚಕ ರಾಜೇಶ್ ಭಟ್ ಆಸ್ರಣ್ಣ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಚಾರಣಿಗ ತಂಡ ದ ಸದಸ್ಯರಿಗೆ ಶಾಲು ನೀಡಿ ಶುಭಹಾರೈಸಿದರು.
ಈ ವೇಳೆ ದೇಗುಲದ ಕಾರ್ಯ ನಿರ್ವಹಣಾಧಿಕಾರಿ ರವೀಂದ್ರ ಎಚ್. ಎಂ., ವ್ಯವಸ್ಥಾಪನ ಸಮಿತಿ ಸದಸ್ಯರಾದ ಕೃಷ್ಣಮೂರ್ತಿ ಭಟ್, ಮಹೇಶ್ ಭಟ್ ಕರಿಕ್ಕಳ, ಬಾಲಕೃಷ್ಣ ಬಲ್ಲೇರಿ, ಮಾಧವ ಡಿ., ಮಾಸ್ಟರ್ ಪ್ಲಾನ್ ಸಮಿತಿಯ ಶಿವರಾಮ ರೈ ಸೇರಿದಂತೆ ದೇಗುಲದ ಸಿಬಂದಿ, ನಗರದ ವರ್ತಕರು, ಕಾಲೇಜು ಉಪನ್ಯಾಸಕರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು.
ನೂರಾರು ಭಕ್ತರನ್ನೊಳಗೊಂಡ ತಂಡ ದೇವರಗದ್ದೆ ಮಾರ್ಗವಾಗಿ ಕುಮಾರ ಪರ್ವತದ ಕಡೆಗೆ ಮಧ್ಯಾಹ್ನ ವೇಳೆಗೆ ಪ್ರಯಾಣ ಬೆಳೆಸಿತು. ರಾತ್ರಿ ಗಿರಿಗದ್ದೆಯಲ್ಲಿ ತಂಗಲಿರುವ ತಂಡ ಗುರುವಾರ ಬೆಳಗ್ಗೆ ಕುಮಾರಪರ್ವತ ಕಡೆ ಪ್ರಯಾಣ ಮುಂದುವರಿಸಲಿದೆ. ಅಂದು ಬೆಳಗ್ಗೆ 11ಕ್ಕೆ ಕುಮಾರಪರ್ವತದಲ್ಲಿ ದೇಗು ಲದ ಅರ್ಚಕರು ನಡೆಸುವ ಕುಕ್ಕೆಲಿಂಗ ಪೂಜಾ ವಿಧಿವಿಧಾನಗಳಲ್ಲಿ ತಂಡದವರು ಪಾಲ್ಗೊಳ್ಳುವರು.
ಇಂದು ಮತ್ತಷ್ಟು ಭಕ್ತರು
ಮತ್ತಷ್ಟು ಮಂದಿ ಭಕ್ತರ ತಂಡ ಪರ್ವತಕ್ಕೆ ಹತ್ತಿರ ಸಂಪರ್ಕ ರಸ್ತೆ ಸೋಮವಾರಪೇಟೆಯ ಹೆಗಡೆಮನೆ ಮಾರ್ಗವಾಗಿ ತೆರಳಲಿದ್ದಾರೆ. ಈ ಮಾರ್ಗದ ಮೂಲಕ ತೆರಳುವ ತಂಡವು ಕುಮಾರಪರ್ವತಕ್ಕೆ ಹಿಂದಿನ ದಿನ ತೆರಳಿದ್ದ ತಂಡದ ಜತೆ ಸೇರಿಕೊಂಡು ಕುಕ್ಕೆಲಿಂಗ ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮುಂದಿನ ವರ್ಷಗಳಲ್ಲಿ ಇನ್ನು ಹೆಚ್ಚಿನ ಮಂದಿ ಕುಕ್ಕೆಲಿಂಗ ಪೂಜೆಯಲ್ಲಿ ಭಾಗವಹಿಸಲು ವ್ಯವಸ್ಥೆ ಕಲ್ಪಿಸಲಾಗುವುದು ಎಂದು ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಪತ್ರಿಕೆಗೆ ತಿಳಿಸಿದ್ದಾರೆ.