Advertisement
ಸಮ್ಮಿಶ್ರ ಸರ್ಕಾರ ಬರೀ ಕಚ್ಚಾಟದಲ್ಲೇ ಮುಳುಗಿದೆ. ಬರ ನಿರ್ವಹಣೆ ಸೇರಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಪ್ರತಿಪಕ್ಷ ಬಿಜೆಪಿ ವೈಫಲ್ಯಗಳ ಅಸ್ತ್ರ ಪ್ರಯೋಗಕ್ಕೆ ಮುಂದಾಗುತ್ತಿದ್ದಂತೆ ಎಚ್ಚೆತ್ತ ಸರ್ಕಾರ, ಕೆಳ ಹಂತದಿಂದಲೇ ಜಡ್ಡುಗಟ್ಟಿದ್ದ ಆಡಳಿತಯಂತ್ರಕ್ಕೆ ಚಾಟಿ ಬೀಸಿ ಎಬ್ಬಿಸಿದೆ.
Related Articles
Advertisement
ಜಿಲ್ಲಾಮಟ್ಟದಲ್ಲಿ ನಡೆಯುವ ಕೆಡಿಪಿ ಸಭೆ ಗ್ರಾಪಂ ಮಟ್ಟದಲ್ಲಿ ನಡೆಸಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡ ಸೇರಿ ದುರ್ಬಲ ವರ್ಗದ ನಿರ್ವಸತಿಕರಿಗೆ ಮನೆ ನಿರ್ಮಾಣ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕೆಂದು ತಾಕೀತು ಮಾಡಿದ್ದು, ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮದ ಪ್ರಗತಿ ಪರಿಶೀಲನೆ, ಮುಖ್ಯಮಂತ್ರಿಯಗಳ ಅಭಿವೃದ್ಧಿ ಯೋಜನೆಯಡಿ ಮಂಜೂರಾಗಿರುವ 4080 ಕಾಮಗಾರಿಗಳ ಪರಿಶೀಲನೆ, ಸಮಾಜ ಕಲ್ಯಾಣ ಇಲಾಖೆಯ ಕಾರ್ಯಕ್ರಮಗಳ ಪರಿಶೀಲನೆ ನಡೆಸಿ ಅಧಿಕಾರಿ ವರ್ಗವು ಜನರ ಸಮಸ್ಯೆಗಳತ್ತ ಗಮನಹರಿಸುವಂತೆ ಮಾಡಿದೆ.
ದೇಶದಲ್ಲೇ ಮೊದಲ ಬಾರಿಗೆ 1,200 ಚದರಡಿ ವಿಸ್ತೀರ್ಣದ ಮನೆ ನಿರ್ಮಾಣಕ್ಕೆ ಸ್ವಯಂ ಘೋಷಣೆ ಪತ್ರ ನೀಡಿ ಆನ್‌ಲೈನ್‌ನಲ್ಲಿ ನಕ್ಷೆ ಮಂಜೂರಾತಿ ಪಡೆಯುವ ನಗರಾಭಿವೃದ್ಧಿ ಇಲಾಖೆಯ “ಭೂಮಿ ಮತ್ತು ಕಟ್ಟಡ ನಕ್ಷೆ ಅನುಮೋದನೆ ತಂತ್ರಾಂಶ ಹಾಗೂ ವೈಬ್‌ಸೈಟ್’ಗೆ ಚಾಲನೆ, 1000 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 1 ನೇ ತರಗತಿಯಿಂದ ಆಂಗ್ಲ ಮಾಧ್ಯಮದ ವಿಭಾಗ ಹಾಗೂ 100 ಹೊಸ ಕರ್ನಾಟಕ ಪಬ್ಲಿಕ್ ಶಾಲೆ ಹಾಗೂ ಪೂರ್ವ ಪ್ರಾಥಮಿಕ ಶಾಲೆಗಳ ಉದ್ಘಾಟನೆ.
ರೈತರ ಸಾಲ ಮನ್ನಾ ವಿಚಾರದಲ್ಲಿ ವಾಣಿಜ್ಯ ಬ್ಯಾಂಕುಗಳಲ್ಲಿನ ಸಾಲದ ಮೊತ್ತ ಒಂದೇ ಕಂತಿನಲ್ಲಿ ಪಾವತಿಸುವ ತೀರ್ಮಾನ. ಬ್ಯಾಂಕರುಗಳ ಸಮಿತಿ ಸಭೆ ನಡೆಸಿ ಸಾಲಮನ್ನಾ ಕುರಿತು ಇದ್ದ ಗೊಂದಲ ನಿವಾರಣೆ ಮಾಡಿದೆ. ಸ್ವ ಕ್ಷೇತ್ರದ ಬಗ್ಗೆ ಕಾಳಜಿವಹಿಸಿಲ್ಲ ಎಂಬ ಆರೋಪ ದೂರವಾಗಿಸಿ ಎರಡು ದಿನಗಳ ಕಾಲ ಚನ್ನಪಟ್ಟಣ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಕೆಲಸಕ್ಕೆ ಮುಂದಾಗಿದ್ದಾರೆ.
ಜೂನ್ 21 ರಿಂದ ಯಾದಗಿರಿ, ಕಲಬುರಗಿ, ರಾಯಚೂರು, ಬೀದರ್ ಜಿಲ್ಲೆಗಳಲ್ಲಿ ಗ್ರಾಮ ವಾಸ್ತವ್ಯಕ್ಕೆ ಸಿದ್ಧತೆ ನಡೆಸಿ ಅಲ್ಲಿ ಬೆಳಗ್ಗೆ 10.30 ರಿಂದ ಸಂಜೆ 6 ಗಂಟೆವರೆಗೆ ಜಿಲ್ಲಾಧಿಕಾರಿಯಿಂದ ಎಲ್ಲ ಹಂತದ ಅಧಿಕಾರಿಗಳು ಸ್ಥಳದಲ್ಲೇ ಇದ್ದು ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಸೂಚಿಸಲಾಗಿದೆ. ಇವೆಲ್ಲವೂ ಸಮ್ಮಿಶ್ರ ಸರ್ಕಾರದ ಮೇಲಿನ ವೈಫಲ್ಯ ಆರೋಪ ತೊಡೆದುಹಾಕುವ ಪ್ರಯತ್ನವೇ ಆಗಿದೆ ಎಂದು ಹೇಳಲಾಗಿದೆ.
ತಲೆನೋವು: ಇದರ ನಡುವೆ ಜಿಂದಾಲ್‌ಗೆ ಭೂಮಿ ಪರಭಾರೆ ಹಾಗೂ ಐಎಂಎ ವಂಚನೆ ಪ್ರಕರಣ ಸಮ್ಮಿಶ್ರ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಜಿಂದಾಲ್ ವಿಚಾರದಲ್ಲಿ ಬಿಜೆಪಿ ಅಹೋರಾತ್ರಿ ಧರಣಿ ನಡೆಸಿ, ಯಾವುದೇ ಕಾರಣಕ್ಕೂ ಭೂಮಿ ಪರಭಾರೆ ಮಾಡಬಾರದೆಂದು ಪಟ್ಟು ಹಿಡಿದಿದೆ. ಇದಕ್ಕೆ ಕಾಂಗ್ರೆಸ್ ಹಿರಿಯ ನಾಯಕ ಎಚ್.ಕೆ.ಪಾಟೀಲ್, ಜೆಡಿಎಸ್‌ನ ಹಿರಿಯ ನಾಯಕ ಎಚ್.ವಿಶ್ವನಾಥ್ ಸಹ ಧ್ವನಿಗೂಡಿಸಿದ್ದು ಸರ್ಕಾರಕ್ಕೆ ಮುಜುಗರವೂ ಆಯಿತು.
ಹೀಗಾಗಿ, ಭೂಮಿ ಪರಭಾರೆ ವಿಚಾರ ಸದ್ಯಕ್ಕೆ ತಡೆಹಿಡಿದು ಸಂಪುಟ ಉಪ ಸಮಿತಿ ರಚಿಸಿ ಪರಿಶೀಲಿಸುವ ತೀರ್ಮಾನ ಕೈಗೊಂಡು ಬೀಸೋ ದೊಣ್ಣೆಯಿಂದ ತಕ್ಷಣಕ್ಕೆ ತಪ್ಪಿಸಿಕೊಂಡಿದೆ. ಆದರೆ, ಐಎಂಎ ವಂಚನೆ ಪ್ರಕರಣ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಮಾಜಿ ಸಚಿವರೊಬ್ಬರು ನೇರವಾಗಿ ಕಂದಾಯ ಸಚಿವರ ಬಳಿ ಮನ್ಸೂರ್ ಖಾನ್ ಪರ ವಕಾಲತ್ತು ವಹಿಸಿ 600 ಕೋಟಿ ರೂ.ಸಾಲಕ್ಕೆ ಸರ್ಕಾರದಿಂದ ಎನ್‌ಓಸಿ ಕೊಡಿಸಲು ಪ್ರಯತ್ನಿಸಿದ್ದರು ಎಂಬ ವಿಚಾರ ಬಹಿರಂಗಗೊಂಡಿದ್ದು ಇದು ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ.
ಸರ್ಕಾರದಲ್ಲಿರುವವರಿಗೂ ಮನ್ಸೂರ್‌ಖಾನ್‌ಗೂ ನಂಟಿತ್ತು ಎಂಬ ವಿಚಾರವನ್ನೇ ಇಟ್ಟುಕೊಂಡು ಬಿಜೆಪಿ ಸಿಬಿಐ ತನಿಖೆಗೂ ಒತ್ತಾಯಿಸಿದೆ. ರಾಜ್ಯ ಸರ್ಕಾರ ಎಸ್‌ಐಟಿಗೆ ವಹಿಸಿದ್ದರೂ ಆ ತನಿಖೆಯಿಂದ ಸತ್ಯಾಂಶ ಹೊರಬರಲ್ಲ, ಆರೋಪಿಗಳಿಗೆ ಶಿಕ್ಷೆ ಯಾಗುವುದಿಲ್ಲ. ಸಿಬಿಐ ತನಿಖೆಯೇ ಸೂಕ್ತ ಎಂದು ಆಗ್ರಹಿಸುತ್ತಿದೆ. ಹೀಗಾಗಿ, ಇದು ಸರ್ಕಾರಕ್ಕೆ ತಲೆಬಿಸಿ ತಂದಿದೆ.
ಎರಡೂ ಪ್ರಕರಣಗಳ ತೀವ್ರತೆ ಅರಿತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಸೂಕ್ಷ್ಮವಾಗಿಯೇ ನಿರ್ವಹಣೆ ಮಾಡುತ್ತಿದ್ದು, ಆಡಳಿತ ಯಂತ್ರ ಚುರುಕುಗೊಳಿಸಿ ಗ್ರಾಮ ವಾಸ್ತವ್ಯ ಮೂಲಕ ಜನರಿಗೆ ಹತ್ತಿರವಾಗುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಚಲನಶೀಲ ಎಂದು ಬಿಂಬಿಸುವ ಯತ್ನ: ಸಂಪುಟಕ್ಕೆ ಇಬ್ಬರು ಪಕ್ಷೇತರ ಶಾಸಕರನ್ನು ಸೇರ್ಪಡೆ ಮಾಡಿಕೊಂಡು ಸರ್ಕಾರಕ್ಕೆ ಕಂಟಕ ಎದುರಾಗದಂತೆ ನೋಡಿಕೊಳ್ಳುವ ಜತೆಗೆ ದೆಹಲಿಯಲ್ಲಿ ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆದ ನೀತಿ ಆಯೋಗದ ಸಭೆಯಲ್ಲಿ ಪಾಲ್ಗೊಂಡು ಜಿಎಸ್‌ಟಿ ಪರಿಹಾರ ಅವಧಿ 2022ರ ನಂತರವೂ ವಿಸ್ತರಿಸಬೇಕೆಂಬ ಮನವಿ ಮಾಡುವ ಜತೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಭೆಯಲ್ಲಿ ರಾಜ್ಯದ ಬರ ಪರಿಸ್ಥಿತಿ ವಿವರಿಸಿ ಹೆಚ್ಚಿನ ಅನುದಾನ ಕೋರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವರನ್ನು ಭೇಟಿ ಮಾಡಿ ರಾಜ್ಯದ ಯೋಜನೆಗಳಿಗೆ ಒಪ್ಪಿಗೆ ಕೋರಿರುವುದು ಒಂದು ರೀತಿಯಲ್ಲಿ ಸರ್ಕಾರ ಸುಮ್ಮನೆ ಕುಳಿತಿಲ್ಲ. ಚಲನಶೀಲವಾಗಿದೆ ಎಂದು ಬಿಂಬಿಸುವ ಪ್ರಯತ್ನ ಎಂದು ಹೇಳಲಾಗುತ್ತಿದೆ.
* ಎಸ್. ಲಕ್ಷ್ಮಿನಾರಾಯಣ