Advertisement
ತಾಲೂಕಿನ ಮರಿಯಾಲ ಹಾಗೂ ಬೆಂಡರವಾಡಿ ಬಳಿ ನ.25 ರಂದು ಒಂದೇ ದಿನ, ಕೆಸ್‌ಆರ್‌ಟಿಸಿ ಬಸ್ ಮತ್ತು ಬೈಕ್‌ಗಳ ನಡುವೆ ನಡೆದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಒಟ್ಟು ನಾಲ್ಕು ಮಂದಿ ಮೃತರಾದರು. ಈ ಎರಡೂ ಅಪಘಾತಗಳಲ್ಲಿ ಬಸ್‌ನ ಚಾಲಕರೇ ಕಂಡಕ್ಟರ್ ಕೂಡ ಆಗಿದ್ದರು.
Related Articles
Advertisement
ಕಲೆಕ್ಷನ್ ಒತ್ತಡದಿಂದ ನಾನ್‌ಸ್ಟಾಪ್ ಮಾಡಲ್ಲ: ನಿಯ ಮಾನುಸಾರ ಚಾಲಕ ಕಮ್ ನಿರ್ವಾಹಕ ಇರುವ ಬಸ್ ನಾನ್ ಸ್ಟಾಪ್ ಆಗಿರಬೇಕು. ಅಂದರೆ ಚಾಮರಾಜ ನಗರದಿಂದ ಹೊರಟ ಬಸ್ ಎಲ್ಲೂ ನಿಲುಗಡೆ ಕೊಡದೇ ಮೈಸೂರಿಗೆ ಹೋಗಬೇಕು. ಆದರೆ, ಚಾಲಕ ಕಮ್ ನಿರ್ವಾಹಕರಿಗೆ ಬಸ್ ಕಲೆಕ್ಷನ್ ಅನ್ನು ಇಂತಿಷ್ಟೇ ಮಾಡಬೇಕು ಎಂಬ ಟಾರ್ಗೆಟ್ ನೀಡಲಾಗುತ್ತದೆ.
ಈ ಟಾರ್ಗೆಟ್ ತಲುಪುವ ಸಲುವಾಗಿ ಚಾಲಕ ಕಮ್ ನಿರ್ವಾಹಕರೂ ಪ್ರತಿ ಊರುಗಳಲ್ಲೂ ನಿಲ್ಲಿಸಿಕೊಂಡು ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುತ್ತಾರೆ. ಹೀಗೆ ಹತ್ತುವ ಪ್ರಯಾಣಿಕರಿಗೆ ಟಿಕೆಟ್ ನೀಡುವ, ಚಿಲ್ಲರೆ ಕೊಡುವ ಪ್ರಕ್ರಿಯೆ ಇರುತ್ತದೆ. ಏಕಾಗ್ರತೆಯಿಂದ ಬಸ್ ಚಾಲನೆ ಮಾಡಬೇಕಾದ ಚಾಲಕ, ಟಿಕೆಟ್, ಚಿಲ್ಲರೆ, ಹತ್ತಿಸಿಕೊಳ್ಳುವ, ಇಳಿಸುವ, ನನಗೆ ಚಿಲ್ಲರೆ ಬಂದಿಲ್ಲ, ಇತ್ಯಾದಿ ರಗಳೆಯನ್ನೇ ತಲೆಯಲ್ಲಿ ತುಂಬಿಕೊಂಡಿರುತ್ತಾನೆ.
ಇದು ಆತನಲ್ಲಿ ಒತ್ತಡ ಉಂಟು ಮಾಡಿ, ಏಕಾ ಗ್ರತೆಗೆ ಭಂಗ ಮಾಡಿ, ಕಣ್ಣವೆಯಿಕ್ಕುವಷ್ಟರಲ್ಲಿ ನಡೆ ಯುವ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ಸಿಬ್ಬಂದಿಯೇ ಹೇಳುತ್ತಿದ್ದಾರೆ. ಹಾಗಾದರೆ, ಚಾಲಕ ನಿರ್ವಾಹಕ ಇಬ್ಬರೂ ಇರುವ ಬಸ್‌ಗಳಲ್ಲಿ ಅಪಘಾತ ನಡೆಯುವುದಿಲ್ಲವೇ? ಎದು ರಿನ ವಾಹನ ಸವಾರನೇ ತಪ್ಪು ಮಾಡಬಹುದಲ್ಲವೇ? ಎಂಬಿತ್ಯಾದಿ ಪ್ರಶ್ನೆ ಮೂಡಬಹುದು.
ಅಲ್ಲಿಯೂ ಅಪಘಾತ ನಡೆಯಬಹುದು. ಆದರೆ, ಇಲ್ಲಿ ನಿತ್ಯ ಒತ್ತಡದಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚು. ಇದರಿಂದ ಸಂಸ್ಥೆಯಲ್ಲಿ ಒಟ್ಟಾರೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತದೆ ಎಂಬುದು ಸಿಬ್ಬಂದಿಯ ಆತಂಕ. ಒಂದು ವೇಳೆ ನಿಲುಗಡೆ ರಹಿತ ಮಾರ್ಗವಾಗಿ, ಕಲೆಕ್ಷನ್ ಎಂಬ ಟಾರ್ಗೆಟ್ ಇಲ್ಲದಿದ್ದಲ್ಲಿ, ಆ ಚಾಲಕ ಬಸ್ ಹೊರಡುವ ಮುಂಚೆಯೇ ಟಿಕೆಟ್ ನೀಡಿ ಆರಾಮಾಗಿ ಬಸ್ ಚಾಲನೆ ಮಾಡಬಹುದು ಎಂದು ಚಾಲಕರು ಹೇಳುತ್ತಾರೆ.
ಹಾಗಾಗಿ ರೂಟ್‌ಗಳಲ್ಲಿ ಸಾಧ್ಯವಾದಷ್ಟೂ ಚಾಲಕ ಕಮ್ ನಿರ್ವಾಹಕ ಹುದ್ದೆ ಕಡಿಮೆ ಮಾಡಿ, ಪ್ರತ್ಯೇಕ ಚಾಲಕ, ನಿರ್ವಾಹಕ ಹುದ್ದೆಗಳಿಗೇ ಆದ್ಯತೆ ನೀಡಿದರೆ ಅಪಘಾತಗಳೂ ಕಡಿಮೆಯಾಗುತ್ತವೆ. ಇಲಾಖೆಗೆ ಲಾಭವೂ ಹೆಚ್ಚುತ್ತದೆ ಎಂದು ಸಿಬ್ಬಂದಿ ಅಭಿಪ್ರಾಯ ಪಡುತ್ತಾರೆ.
ಅಲ್ಲ ಉಳಿತಾಯಕ್ಕೆ ದುಬಾರಿ ಬೆಲೆ
ಚಾಲಕ ಕಮ್ ನಿರ್ವಾಹಕ ಹುದ್ದೆ ಇಲ್ಲದೇ ಪ್ರತ್ಯೇಕವಾಗಿ ಕಂಡಕ್ಟರ್ ಅಥವಾ ಚಾಲಕ ನೇಮಕಾತಿ ಮಾಡಿಕೊಂಡರೆ ಒಬ್ಬರಿಗೆ ತಿಂಗಳಿಗೆ ದೊರಕುವ ವೇತನ 20 ರಿಂದ 25 ಸಾವಿರ ರೂ. ವರ್ಷಕ್ಕೆ 3 ಲಕ್ಷ ರೂ.ಗಳಾಯಿತು. ಆದರೆ, ಚಾಲಕ ಕಮ್ ನಿರ್ವಾಹಕ ಒತ್ತಡಕ್ಕೊಳಗಾಗಿ ಬಸ್ ಅಪಘಾತಕ್ಕೆ ಕಾರಣನಾಗಿ, ವ್ಯಕ್ತಿಯೊಬ್ಬ ಮೃತಪಟ್ಟರೆ, ಕನಿಷ್ಠ 25 ಲಕ್ಷ ರೂ.ಗಳಿಂದ 1 ಕೋಟಿವರೆಗೂ ಕೆಎಸ್‌ಆರ್‌ಟಿಸಿಯಿಂದ ಪರಿಹಾರ ನೀಡಬೇಕು. ಇದರಿಂದ ಸಂಸ್ಥೆಗೂ ಹೆಚ್ಚಿನ ಹೊರೆ, ಅಮೂಲ್ಯ ಜೀವಗಳೂ ಬಲಿಯಾಗುತ್ತಿವೆ ಎಂಬುದು ಇಲಾಖೆಯ ಸಿಬ್ಬಂದಿಯ ಅಭಿಪ್ರಾಯವಾಗಿದೆ.
“ರಾಜ್ಯದ ಎಲ್ಲ ಕಡೆ ಈ ವ್ಯವಸ್ಥೆ ಇದೆ. ಅನೇಕ ವರ್ಷಗಳಿಂದ ನಡೆಯುತ್ತಿದೆ. ಹಾಗೆ ಹೇಳುವುದಾದರೆ ಎಲ್ಲ ಕೆಲಸದಲ್ಲೂ ಒತ್ತಡ ಇರುತ್ತದೆ. ಆದರೆ ಚಾಲಕ ಕಮ್ ನಿರ್ವಾಹಕ ಹುದ್ದೆ ಇರುವುದರಿಂದಲೇ ಅಪಘಾತ ನಡೆಯುತ್ತದೆ ಎಂಬುದು ಸರಿಯಲ್ಲ. ಡ್ರೈವರ್ ಕಂಡಕ್ಟರ್ ಕೊರತೆಯಾದಾಗ ಪ್ರಯಾಣಿಕರಿಗೆ ಅನಾನುಕೂಲವಾಗಬಾರೆಂದು ಲಿಮಿಟೆಡ್ ಸ್ಟಾಪ್ ಮಾಡಿ ಚಾಲಕ ಕಮ್ ನಿರ್ವಾಹಕರನ್ನು ನಿಯೋಜಿಸಲಾಗುತ್ತದೆ.” – ಬಿ. ಶ್ರೀನಿವಾಸ್, ವಿಭಾಗೀಯ ನಿಯಂತ್ರಣಾಧಿಕಾರಿ.
“ಎರಡೂ ಬಸ್‌ಗಳಲ್ಲೂ ಕರ್ತವ್ಯ ನಿರ್ವಹಿಸುತ್ತಿದ್ದ ಚಾಲಕರ ಮೇಲೆ ಅತಿವೇಗ ಅಜಾಗರೂಕತೆ ಪ್ರಕರಣ ದಾಖಲಿಸಲಾಗಿದೆ. ಈಗಾಗಲೇ ಚಾಲಕರಿಗೆ ಅರಿವು ಮೂಡಿಸುವ ಯತ್ನ ಮಾಡಲಾಗುತ್ತಿದೆ. ಚಾಲಕ ಕಮ್ ನಿರ್ವಾಹಕ ಹುದ್ದೆ ಒತ್ತಡಕ್ಕೆ ಕಾರಣವಾಗಿ ಅಪಘಾತಕ್ಕೆ ಕಾರಣವಾಗಿರಬಹುದಾದರೆ, ಈ ಬಗ್ಗೆ ಪೊಲೀಸರಿಂದ ಕಾರ್ಯಾಗಾರ ನಡೆಸಿ, ನಿಗಮದ ಗಮನಕ್ಕೆ ತರಲಾಗುವುದು.” – ಮಹೇಶ್, ಪ್ರಭಾರ ಇನ್ಸ್‌ಪೆಕ್ಟರ್, ಸಂಚಾರ ವಿಭಾಗ.