Advertisement

ತ್ಯಾಜ್ಯ ಪ್ರತ್ಯೇಕಿಸಿ ಸಂಗ್ರಹಿಸುವ ಕಾರ್ಯಕ್ಕೆ ಚಾಲನೆ

06:47 AM Jan 11, 2019 | Team Udayavani |

ದಾವಣಗೆರೆ: ನಗರದಲ್ಲಿ ನಿತ್ಯ ದೊರಕುವ ಹಸಿ ಮತ್ತು ಒಣ ಕಸದಿಂದ ಎರೆಹುಳು ಗೊಬ್ಬರ, ಗ್ಯಾಸ್‌ ಮುಂತಾದ ಉಪಯೋಗಕಾರಿ ವಸ್ತು ತಯಾರಿಸುವ ಸಂಬಂಧ ವ್ಯವಸ್ಥಿತವಾಗಿ ಕೈಗೊಂಡಿರುವ ತ್ಯಾಜ್ಯ ನಿರ್ವಹಣೆ ಕಾರ್ಯ ಯಶಸ್ವಿ ಆಗಲಿ ಎಂದು ಪಾಲಿಕೆ ಶೋಭಾ ಪಲ್ಲಾಗಟ್ಟೆ ಹೇಳಿದ್ದಾರೆ.

Advertisement

ಗುರುವಾರ, ಶಾಮನೂರಿನ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ದೇವನಗರಿ ಗ್ರೀನ್‌ ಪ್ಲಾನೆಟ್ ಇನ್‌ ಫ್ರಾ ಪ್ರೈವೇಟ್ ಲಿ, ಚಿರಂತನ್‌ ಇನ್‌ ಫ್ರಾ ಪ್ರೈವೇಟ್ ಲಿ. ಹಾಗೂ ಮಹಾನಗರಪಾಲಿಕೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಾಣಿಜ್ಯ ಮಳಿಗೆಗಳಿಂದ ಪ್ರತ್ಯೇಕಿಸಲಾದ ಕಸ ಸಂಗ್ರಹ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತ್ಯಾಜ್ಯ ನಿರ್ವಹಣೆಯೇ ಪಾಲಿಕೆಗೆ ದೊಡ್ಡ ಸವಾಲಾಗಿದೆ. ಇಂತಹ ಸಂದರ್ಭದಲ್ಲಿ ಖಾಸಗಿ ಸಂಸ್ಥೆಯವರು ಜನರಿಂದ ಬೇರ್ಪಡಿಸಿದ ಹಸಿ ಮತ್ತು ಒಣ ಕಸವನ್ನು ನಿತ್ಯ ಸಂಗ್ರಹಿಸಿ, ಹಸಿಕಸದಿಂದ ರೈತರಿಗೆ ಉಪಯೋಗವಾಗುವ ಎರೆಹುಳು ಗೊಬ್ಬರ ತಯಾರಿಸುತ್ತಿದ್ದಾರೆ. ವಾಹನಗಳಿಗೆ ಇಂಧನವಾಗಿ ಅಗತ್ಯವಿರುವ ಬಯೋ ಗ್ಯಾಸ್‌ ಉತ್ಪಾದಿಸುವ ಗುರಿ ಹೊಂದಿದ್ದಾರೆ. ಈ ಕಾರ್ಯ ಯಶಸ್ವಿಯಾಗಿ, ದಾವಣಗೆರೆ ಸ್ವಚ್ಛ ನಗರವಾಗಲಿ ಎಂದರು.

ಅನುದಾನದ ವಿಳಂಬದಿಂದಾಗಿ ರಸ್ತೆ ಕಾಮಗಾರಿಗಳು ಕುಂಠಿತವಾಗುತ್ತಿವೆ. ಮುಂದಿನ ದಿನಗಳಲ್ಲಿ ನಿಧಾನಗತಿಯಲ್ಲಾದರೂ ರಸ್ತೆ ಕಾಮಗಾರಿ ಗುಣಮಟ್ಟದಲ್ಲಿರಲಿದೆ. ಈಗಾಗಲೇ ನಗರದಲ್ಲಿ ದೊಡ್ಡ ದೊಡ್ಡ ಹಂದಿಗಳನ್ನು ಹಿಡಿದು, ಸ್ಥಳಾಂತರಿಸಲಾಗಿದೆ. ಸಣ್ಣ ಹಂದಿಗಳು ಹಾಗೆ ಉಳಿದಿವೆ. ಹಂದಿಗಳ ಸಂಖ್ಯೆ ಹೆಚ್ಚಾಗದಂತೆ ತೆರವು ಕಾರ್ಯ ಮುಂದುವರಿಯಲಿದೆ. ಇನ್ನು ಅಶೋಕ ರಸ್ತೆಯ ರೈಲ್ವೆಗೇಟ್ ಬಳಿ ನಿತ್ಯ ಟ್ರಾಫಿಕ್‌ ಕಿರಿಕಿರಿ ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ಈಚೆಗೆ ಸ್ಮಾರ್ಟ್‌ಸಿಟಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಲಾಗಿದೆ ಎಂದು ಹೇಳಿದರು.

ಪಾಲಿಕೆ ಸದಸ್ಯ ಶಿವನಹಳ್ಳಿ ರಮೇಶ್‌ ಮಾತನಾಡಿ, ಹಿಂದೆ ಹಿರಿಯರು ದೇಶ ಐಕ್ಯತೆ ಹೊಂದಬೇಕು, ಎಲ್ಲೆಡೆ ಸಾಮರಸ್ಯ ಭಾವನೆ ಬೆಳೆಯಬೇಕು ಎನ್ನುವ ಮಹತ್ತರ ಉದ್ದೇಶ ಹೊಂದಿದ್ದರು. ಈಗ ದೇಶ ಬದಲಾವಣೆ ಆದಂತೆಲ್ಲಾ ಸಾಕಷ್ಟು ಜನರಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡುತ್ತಿದೆ. ಶೇ.75ರಷ್ಟು ಯುವಕರು ಜಾಗೃತಿ ಹೊಂದಿದ್ದಾರೆ. ಸ್ವಚ್ಛ ಭಾರತ್‌ ಅಭಿಯಾನ ಎಲ್ಲೆಡೆ ಯಶಸ್ವಿ ಆಗುತ್ತಿದೆ. ಸಂಪೂರ್ಣ ಸ್ವಚ್ಛ ಹಾಗೂ ಪರಿಸರ ಸ್ನೇಹಿ ನಗರ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದರು.

ನಗರದಲ್ಲಿ ದೊರಕುವ ತ್ಯಾಜ್ಯವನ್ನು ತಂತ್ರಜ್ಞಾನದ ಯುಗಕ್ಕೆ ತಕ್ಕಂತೆ ವೈಜ್ಞಾನಿಕವಾಗಿ ಮರುಬಳಕೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸ್ವಚ್ಛ ನಗರ ನಿರ್ಮಾಣಕ್ಕೆ ನಾಗರಿಕರ ಸಹಭಾಗಿತ್ವ ಅತ್ಯಂತ ಅಗತ್ಯ ಎಂದು ಹೇಳಿದರು.

Advertisement

ಪಾಲಿಕೆ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಘನತ್ಯಾಜ್ಯವನ್ನು ಆವರಗೊಳ್ಳದ ಸುಮಾರು 33 ಎಕರೆ ಜಮೀನಿನಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಆದರೆ, ತ್ಯಾಜ್ಯ ನಿರ್ವಹಣೆ ಸಮರ್ಪಕವಾಗಿ ಆಗದೇ ಸಾಕಷ್ಟು ಸಮಸ್ಯೆ ಇತ್ತು. ಆದರೀಗ ಈ ಎರಡು ಖಾಸಗಿ ಸಂಸ್ಥೆಗಳ ನೆರವಿನಿಂದ ಹಸಿ ಮತ್ತು ಒಣ ಕಸ ಪ್ರತ್ಯೇಕಿಸಿ, ಕಸ ವಿಲೇವಾರಿ ಆಗುತ್ತಿದೆ ಎಂದು ತಿಳಿಸಿದರು.

ದೇವನಗರಿ ಗ್ರೀನ್‌ ಪ್ಲಾನೆಟ್ ಇನ್‌ಫ್ರಾ ಪ್ರೈವೇಟ್ ಲಿ.ನ ನಿರ್ದೇಶಕ ಬಿ.ಟಿ. ಧನ್ಯಕುಮಾರ್‌ ಮಾತನಾಡಿ, ಮಹಾನಗರಪಾಲಿಕೆ ವ್ಯಾಪ್ತಿಯ 21ರಿಂದ 41ನೇ ವಾರ್ಡಿನ ಎಲ್ಲಾ ವಾಣಿಜ್ಯೋದ್ಯಮ, ಅಂಗಡಿ ಮುಂಗಟ್ಟುಗಳು, ಹೋಟೆಲ್‌, ಲಾಡ್ಜ್, ಜ್ಯೂಸ್‌ ಸ್ಟಾಲ್‌ ಇತರೆ ಮಳಿಗೆಗಳಿಂದ ಉತ್ಪಾದನೆ ಆಗುವ ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕಿಸಿ ಸಂಗ್ರಹಿಸಲಾಗುತ್ತಿದೆ. ಪ್ರತಿನಿತ್ಯ ದೊರಕುವ ತರಕಾರಿ, ಹಣ್ಣು, ಹೂವಿನಂತಹ ಹಸಿ ತ್ಯಾಜ್ಯವನ್ನು ಸಂಸ್ಕರಿಸಿ ಬಯೋ ಸಿಎನ್‌ಜಿ ಘಟಕ ನಿರ್ಮಿಸುವ ಯೋಜನೆ ಕಾರ್ಯರೂಪಕ್ಕೆ ತರುವ ಉದ್ದೇಶ ಇದೆ ಎಂದರು. ಕಸದ ವಿಲೇವಾರಿಗಾಗಿ ಈಗಾಗಲೇ 6 ಟ್ರ್ಯಾಕ್ಟ್ರ, 4 ಎಲೆಕ್ಟ್ರಿಕಲ್‌ ಆಟೋ ನಿಯೋಜಿಸಲಾಗಿದೆ. ಪ್ರತಿದಿನ ಹಸಿ ಕಸ ಹಾಗೂ ವಾರಕ್ಕೆ 2 ಬಾರಿ ಒಣ ಕಸ ಸಂಗ್ರಹಿಸಲಾಗುವುದು ಎಂದು ಹೇಳಿದರು.

ಚಿರಂತನ್‌ ಇನ್‌ ಫ್ರಾ ನಿರ್ದೇಶಕ ಎಂ.ಜಿ. ಜಗದೀಶ್‌ ಪಾಟೀಲ್‌, ಪಾಲಿಕೆ ಅಧಿಕಾರಿ ಡಾ| ಸುರೇಂದ್ರ ಕುಮಾರ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next