ಧಾರವಾಡ: ರಾಜ್ಯ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಧಾರವಾಡದಲ್ಲಿ ಅದ್ದೂರಿ ಚಾಲನೆ ಸಿಕ್ಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪಾರಿವಾಳವನ್ನು ಹಾರಿಬಿಡುವ ಮೂಲಕ ಕೂಟಕ್ಕೆ ಚಾಲನೆ ನೀಡಿದರು. ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಉಪಸ್ಥಿತರಿದ್ದರು.
ಎಂಟು ವರ್ಷಗಳ ಅನಂತರ ರಾಜ್ಯ ಮಟ್ಟದ ಒಲಿಂಪಿಕ್ಸ್ ನಡೆಯುತ್ತಿದೆ ಎನ್ನುವುದು ವಿಶೇಷ. ಒಟ್ಟು 12 ತಂಡಗಳು ಪಥಸಂಚಲನದಲ್ಲಿ ಪಾಲ್ಗೊಂಡಿದ್ದವು. ಇದೇ ವೇಳೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕೂಟದ ಮೊದಲ ದಿನ ಹಾಕಿ, ವೇಟ್‌ಲಿಫ್ಟಿಂಗ್ ಸ್ಪರ್ಧೆಗಳು ನಡೆದವು. ಎಸ್‌ಡಿಎಂ ನ್ಪೋರ್ಟ್ಸ್ ಕ್ಲಬ್ 5 ಚಿನ್ನದ ಪದಕ ಪಡೆಯುವ ಮೂಲಕ ಮೊದಲ ದಿನ ಪಾರಮ್ಯ ಸಾಧಿಸಿತು.
ಪುರುಷರ ಹಾಕಿ: ಸಂಘಟಿತ ಪ್ರದರ್ಶನ ನೀಡಿದ ಸಾಯಿ ಸೌತ್ ಬೆಂಗಳೂರು ತಂಡ ರಾಜ್ಯ ಒಲಿಂಪಿಕ್ಸ್ ಹಾಕಿಯಲ್ಲಿ 5-2 ಗೋಲುಗಳಿಂದ ಗದಗ ಎಚ್‌ಬಿಸಿ ತಂಡವನ್ನು ಸೋಲಿಸಿತು. ಉಳಿದಂತೆ ಆರ್‌ಡಬ್ಯುಎಫ್ ಮತ್ತು ಕೂರ್ಗ್ ತಂಡಗಳು ಗೆಲುವು ಸಾಧಿಸಿ ಶುಭಾರಂಭ ಮಾಡಿವೆ.
ಕರ್ನಾಟಕ ವಿವಿ ರಾಣಿ ಚೆನ್ನಮ್ಮ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸಾಯಿ ಪರ ರಾಹಿಲ್(11, 48 ನೇ ನಿಮಿಷ) ಎರಡು ಗೋಲು ಬಾರಿಸಿದರೆ, ಅಬ್ರಾಮ್(24ನೇ ನಿಮಿಷ), ಸೋಮಯ್ಯ (37ನೇ ನಿಮಿಷ), ರಾಚಯ್ಯ (46 ನೇ ನಿಮಿಷ) ತಲಾ ಒಂದು ಗೋಲು ದಾಖಲಿಸಿ ಗೆಲುವಿನ ರೂವಾರಿಗಳಾದರು. ಪುರುಷರ ಮತ್ತೂಂದು ಪಂದ್ಯದಲ್ಲಿ ಆರ್‌ಡಬ್ಲ್ಯುಎಫ್ ತಂಡ 5-2 ರಿಂದ ಡಿವೈಇಎಸ್ ನ್ಪೋರ್ಟ್ಸ್ ಹಾಸ್ಟೆಲ್ ತಂಡವನ್ನು ಸೋಲಿಸಿತು. ಆರ್‌ಡಬ್ಲ್ಯುಎಫ್ ಪರ ಕುಶ (12, 52ನೇ ನಿಮಿಷ) ಎರಡು ಗೋಲು ಬಾರಿಸಿ ಗೆಲುವಿಗೆ ಪ್ರಮುಖ ಕಾರಣರಾದರು.
ರಾಣಿಚೆನ್ನಮ್ಮ ಮೈದಾನದಲ್ಲಿ ನಡೆದ ಮಹಿಳಾ ಹಾಕಿ ಪಂದ್ಯದಲ್ಲಿ ಡಿವೈಇಎಸ್ ಮೈಸೂರು 10-1 ಗೋಲುಗಳಿಂದ ಬಳ್ಳಾರಿ ತಂಡ ವನ್ನು ಭಾರೀ ಅಂತರದಿಂದ ಬಗ್ಗುಬಡಿದಿದೆ. ಮತ್ತೂಂದು ಪಂದ್ಯದಲ್ಲಿ ಹಾಸನ ತಂಡ 11-0 ಗೋಲುಗಳಿಂದ ಬೆಳಗಾವಿ ತಂಡವನ್ನು ಸೋಲಿಸಿದೆ.
ವೇಟ್‌ಲಿಫ್ಟಿಂಗ್‌ನಲ್ಲಿ ಗುರು ರಾಜ್‌ಗೆ ಚಿನ್ನ: ಪುರುಷರ 56 ಕೆಜಿ ವಿಭಾಗದಲ್ಲಿ ಕುಂದಾಪುರದ ಗುರುರಾಜ್ 240 ಕೆಜಿ ಭಾರ ಎತ್ತುವ ಮೂಲಕ ಚಿನ್ನದ ಪದಕ ಪಡೆದಿದ್ದಾರೆ. ಉಳಿದಂತೆ ಕೃಷ್ಣ ಬೆಳ್ಳಿ ಮತ್ತು ಗಜೇಂದ್ರ ಕಂಚಿನ ಪದಕ ಗೆದ್ದಿದ್ದಾರೆ.
ಪುರುಷರ 62 ಕೆಜಿ ವಿಭಾಗದಲ್ಲಿ ಎಸ್‌ಡಿಎಂ ನ್ಪೋರ್ಟ್ಸ್ ಕ್ಲಬ್‌ನ ಮಂಜುನಾಥ ಮರಟ್ಟಿ ಚಿನ್ನ, ಪುರುಷರ 69 ಕೆಜಿ ವಿಭಾಗದಲ್ಲಿ ಎಸ್‌ಡಿಎಂ ನ್ಪೋರ್ಟ್ಸ್ ಕ್ಲಬ್‌ನ ಸಂತೋಷ ಕುಮಾರ್ ಚಿನ್ನ, ಪುರುಷರ 77 ಕೆಜಿ ವಿಭಾಗದಲ್ಲಿ ಎಸ್‌ಡಿಎಂ ನ್ಪೋರ್ಟ್ಸ್ ಕ್ಲಬ್‌ನ ಅರುಣ ಚಿನ್ನ, ಪುರುಷರ 85 ಕೆಜಿ ವಿಭಾಗದಲ್ಲಿ ಎಸ್‌ಡಿಎಂ ನ್ಪೋರ್ಟ್ಸ್ ಕ್ಲಬ್‌ನ ಹರ್ಷ ಡಿ.ಆರ್ ಚಿನ್ನದ ಪದಕ ಗೆದ್ದಿದ್ದಾರೆ.