Advertisement

ಕರಾಟೆ ಚಾಂಪಿಯನ್‌ಶಿಪ್‌ಗೆ ಚಾಲನೆ 

10:12 AM Nov 05, 2017 | Team Udayavani |

ಸ್ಟೇಟ್‌ಬ್ಯಾಂಕ್‌ : ನೆಹರೂ  ಮೈದಾನ ಶನಿವಾರ ಕರಾಟೆಪಟುಗಳಿಂದ ತುಂಬಿತ್ತು. ಆರು ರಾಜ್ಯಗಳಿಂದ ಆಗಮಿಸಿದ ಎಳೆಯರಿಂದ ಹಿಡಿದು ವಯಸ್ಕರವರೆಗಿನ ಸುಮಾರು 1,000ಕ್ಕೂ ಅಧಿಕ ಕರಾಟೆಪಟುಗಳು ಇಲ್ಲಿ ಸೇರಿದ್ದು, ಸಮರಕಲೆ ಕರಾಟೆಯಲ್ಲಿ ಆಧಿಪತ್ಯಕ್ಕಾಗಿ ಸೆಣಸಾಟ ನಡೆಯಿತು.

Advertisement

ಜಿಲ್ಲೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸೆಲ್ಫ್ ಡಿಫೆನ್ಸ್‌ ಸ್ಕೂಲ್‌ ಆಫ್‌ ಇಂಡಿಯನ್‌ ಕರಾಟೆ ಮಂಗಳೂರು ಡೋಜೊದಿಂದ ನಗರದಲ್ಲಿ ಎರಡು ದಿನಗಳ ‘ಇಂಡಿಯನ್‌ ಕರಾಟೆಯ ರಾಷ್ಟ್ರೀಯ ಮುಕ್ತ ಚಾಂಪಿಯನ್‌ಶಿಪ್‌’ಗೆ ಶನಿವಾರ ಜರಗಿದ ವರ್ಣರಂಜಿತ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.

104 ವಿಭಾಗದಲ್ಲಿ ಸ್ಪರ್ಧೆ
ಟೀಮ್‌ ಕಟಾ, ಟೀಮ್‌ ಕುಮಿಟೆ, ವೈಯಕ್ತಿಕ ಕಟಾ, ಟೀಮ್‌ ಕುಮಿಟೆ, ಗ್ರೂಪ್‌ ಚಾಂಪಿಯನ್‌ ಸಹಿತ 104 ವಿಭಾಗದಲ್ಲಿ ಸ್ಪರ್ಧೆ ನಡೆಯುತ್ತಿದೆ. ಶನಿವಾರ ಕಲರ್‌ ಬೆಲ್ಟ್ ಟೂರ್ನಿ ಸ್ಪರ್ಧೆಗಳು ಜರಗಿದೆ. ರವಿವಾರ ಬ್ಲ್ಯಾಕ್‌ ಬೆಲ್ಟ್ ಸ್ಪರ್ಧೆ ನಡೆಯಲಿದೆ . 4 ರಿಂಗ್‌ನಲ್ಲಿ ಏಕಕಾಲಕ್ಕೆ ಸ್ಪರ್ಧೆ ನಡೆಯುತ್ತಿದೆ. ಸ್ಪರ್ಧೆಯಲ್ಲಿ 8 ವರ್ಷಕ್ಕಿಂತ ಕೆಳಗೆ, 10ರ ವಯೋಮಿತಿಯ ಸ್ಪರ್ಧಿಗಳು ಬಣ್ಣದ ಬೆಲ್ಟ್ ನವರಿಗಾಗಿ 20 ಕೆಜಿ ತೂಕದಿಂದ ಹಿಡಿದು 65 ಕೆ.ಜಿ.ಗಿಂತ ಮೇಲ್ಪಟ್ಟ ತೂಕದ, 10 ವರ್ಷ ಮೇಲ್ಪಟ್ಟವರಿಗೆ ಮಹಿಳಾ ವಿಭಾಗದಲ್ಲಿ ಕಟಾ ಹಾಗೂ ಕುಮಿಟೆ ವರ್ಗಗಳಲ್ಲಿ 11 ಸ್ಪರ್ಧೆಗಳು, ಪುರುಷರ ವಿಭಾಗದಲ್ಲಿ 20 ಕೆ.ಜಿ. ತೂಕದಿಂದ ಹಿಡಿದು 70 ಕೆ.ಜಿ. ಮೇಲ್ಪಟ್ಟ ತೂಕದ ವರೆಗಿನ ಸ್ಪರ್ಧಿಗಳಿಗೆ 12 ವಿಭಾಗಗಳಲ್ಲಿ ಸ್ಪರ್ಧೆಗಳು, ಬ್ಲ್ಯಾಕ್‌ ಬೆಲ್ಟ್ ವಿಭಾಗದಲ್ಲಿ 35 ಕೆ.ಜಿ.ಗಿಂತ ಕಡಿಮೆ ತೂಕದಿಂದ ಹಿಡಿದು 65 ಕೆ.ಜಿ.ಗಿಂತ ಅಧಿಕ ತೂಕದ ವರ್ಗದ ಮಹಿಳೆಯರಿಗೆ ಪ್ರತಿ ಐದು ಕೆ.ಜಿ. ತೂಕಕ್ಕೆ ಪ್ರತ್ಯೇಕ ವರ್ಗದಂತೆ ಎಂಟು ತೂಕವರ್ಗದಲ್ಲಿ ಸ್ಪರ್ಧೆಗಳು, ಪುರುಷರ ವಿಭಾಗದ ಬ್ಲ್ಯಾಕ್‌ಬೆಲ್ಟ್  ಪಟುಗಳಿಗಾಗಿ 35 ಕೆ.ಜಿ.ಗಿಂತ ಕಡಿಮೆ ತೂಕದ ವಿಭಾಗದಿಂದ ಆರಂಭವಾಗಿ 75
ಕೆ.ಜಿ. ಮೇಲ್ಪಟ್ಟ ದೇಹತೂಕದ ಸ್ಪರ್ಧಿಗಳಿಗೆ 10 ವರ್ಗಗಳಲ್ಲಿ ಪ್ರತ್ಯೇಕ ಸ್ಪರ್ಧೆಗಳು ನಡೆಯತ್ತವೆ.

ಚೆಂಡೆ, ಹುಲಿವೇಷದ ಮೆರುಗು
ಉದ್ಘಾಟನ ಸಮಾರಂಭ ಅತ್ಯಂತ ವಣಂರಂಜಿತವಾಗಿ ನೆರವೇರಿತು. ಆಕರ್ಷಕ ಚೆಂಡೆವಾದನ, ಹುಲಿ ವೇಷ ಕುಣಿತ ವಿಶೇಷ ಮೆರುಗು ನೀಡಿತು. ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ಮುಖ್ಯಮಂತ್ರಿ, ಬಳಿಕ ಮುಖ್ಯ ರಿಂಗ್‌ನಲ್ಲಿ ಇಬ್ಬರು ಎಳೆಯ ಮಕ್ಕಳ ಜತೆ ಬಿಳಿ ನಿಶಾನೆ ತೋರಿಸಿ ಪಂದ್ಯಾಟಕ್ಕೆ ಚಾಲನೆ ನೀಡಿದರು. ಅನಂತರ ಪ್ರಶಸ್ತಿ ಫಲಕಗಳ ಗ್ಯಾಲರಿಯನ್ನು ಅನಾವರಣಗೊಳಿಸಿದರು.

ಸಂಸ್ಥಾಪಕ ಬಿ.ಎಂ.ನರಸಿಂಹನ್‌ ಉಪಸ್ಥಿತಿ
ಮಂಗಳೂರಿನಲ್ಲಿ ‘ಇಂಡಿಯನ್‌ ಕರಾಟೆಯ ರಾಷ್ಟ್ರೀಯ ಮುಕ್ತ ಚಾಂಪಿಯನ್‌ಶಿಪ್‌’ನಲ್ಲಿ ಸೆಲ್ಫ್ ಡಿಫೆನ್ಸ್‌ ಸ್ಕೂಲ್‌ ಆಫ್‌ ಇಂಡಿಯನ್‌ ಕರಾಟೆ ಸಂಸ್ಥಾಪಕ ಇಂಡಿಯನ್‌ ಕರಾಟೆ ಪಿತಾಮಹ ಎಂದೇ ಕರೆಯಲ್ಪಡುವ ಗ್ರ್ಯಾಂಡ್‌ ಮಾಸ್ಟರ್‌ 82 ವರ್ಷದ ಬಿ.ಎಂ.ನರಸಿಂಹನ್‌ 2 ದಿನಗಳ ಕಾಲವೂ ಉಪಸ್ಥಿತರಿದ್ದು, ಟೂರ್ನಿ ಮೇಲ್ವಿಚಾರಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Advertisement

ಭಾರತೀಯ ಸಮರಕಲೆ ಕಳರಿಪಯಟ್ಟ್ ಮತ್ತು ಜಪಾನ್‌ನ ಜೂಡೋ ಸಮ್ಮಿಳಿತಗೊಳಿಸಿ ನರಸಿಂಹನ್‌ ಅವರು ನಡೆಸಿದ ಹೊಸ ಆವಿಷ್ಕಾರ ಇಂಡಿಯನ್‌ ಕರಾಟೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ 1975ರಲ್ಲಿ ಕರಾಟೆಯನ್ನು ಅವರ ಶಿಷ್ಯಂದಿರ ಮೂಲಕ ಪರಿಚಯಿಸಿದರು. ಕರ್ನಾಟಕ ರಾಜ್ಯಕ್ಕೂ ಕರಾಟೆಯನ್ನು ಪ್ರಥಮವಾಗಿ ಪರಿಚಯಿಸಿದವರು. ಈ ವರೆಗೆ ಅವರು ದೇಶಾದ್ಯಂತ ಸಿದ್ಧಪಡಿಸಿದ ಕರಾಟೆಪಟುಗಳ ಸಂಖ್ಯೆ 5 ಲಕ್ಷಕ್ಕೂ ಮಿಕ್ಕಿದೆ.

2020ರ ಒಲಿಂಪಿಕ್ಸ್‌ನಲ್ಲಿ ಕರಾಟೆ : ವಸಂತನ್‌
ಮಲೇಷ್ಯಾದ ವಸಂತನ್‌ ಅವರು ಪಂದ್ಯಾಟದ ಚೀಫ್‌ ನಿಯಂತ್ರಕರಾಗಿದ್ದಾರೆ. ಕರಾಟೆ ಜಪಾನ್‌ನಲ್ಲಿ 2020 ರಲ್ಲಿ ನಡೆಯುವ ಒಲಿಂಪಿಕ್ಸ್‌ನಲ್ಲಿ ಸೇರ್ಪಡೆ ಯಾಗಿರುವುದು ಖುಷಿ ತಂದಿದೆ. ಎಂದರು.

ವ್ಯವಸ್ಥಿತವಾದ ಆಯೋಜನೆ
ಮಂಗಳೂರಿನ ರಾಷ್ಟ್ರೀಯ ಮುಕ್ತ ಚಾಂಪಿಯನ್‌ ಶಿಪ್‌ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಗ್ರ್ಯಾಂಡ್‌ ಮಾಸ್ಟರ್‌ ಬಿ.ಎಂ. ನರಸಿಂಹನ್‌ ಅವರು, ಅತ್ಯಂತ ವ್ಯವಸ್ಥಿತವಾಗಿ ಆಯೋಜನೆಗೊಂಡಿದೆ ಎಂದು ಹೇಳಿದ್ದಾರೆ.

ಇಂದು ಮೇಯರ್‌ ಸ್ಪರ್ಧೆ
ನಗರದಲ್ಲಿ ಈ ಕಾರ್ಯಕ್ರಮ ಆಯೋಜನೆಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಮೇಯರ್‌ ಕವಿತಾ ಸನಿಲ್‌ ಅವರು ಸ್ಪರ್ಧಿಯಾಗಿಯೂ ಭಾಗವಹಿಸುತ್ತಿದ್ದಾರೆ. ರವಿವಾರ ಮ.3 ಗಂಟೆ ಬಳಿಕ ಅವರ ಸ್ಪರ್ಧೆ ನಡೆಯಲಿದ್ದು, ಮುಕ್ತ ವಿಭಾಗ ಸಹಿತ 2 ವಿಭಾಗಗಳಲ್ಲಿ ಅವರು ಸ್ಪರ್ಧಿಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next